More

    ಆಲೂರಿಗೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ನೀಡಲಿ

    ಆಲೂರು: ತಾಲೂಕಿನಲ್ಲಿ ಹಲವು ವೈಶಿಷ್ಟೃಗಳಿದ್ದರೂ, ಕಾಡು ಪ್ರಾಣಿಗಳ ಹಾವಳಿಯಿಂದ ಜನರು ಜೀವಭಯದಲ್ಲಿ ಕಾಲ ಕಳೆಯುವಂತಾಗಿದೆ. ಹೀಗಾಗಿ ತಾಲೂಕಿನ ಅಭಿವೃದ್ಧಿಗೆ ಪ್ರತ್ಯೇಕ ವಿಧಾನಸಭೆ ಕ್ಷೇತ್ರ ನೀಡಬೇಕು ಎಂದು 10ನೇ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷೆ, ಶಿಕ್ಷಕಿ ವೇದಾವತಿ ಶಿವಣ್ಣ ಒತ್ತಾಯಿಸಿದರು.
    ತಾಲೂಕಿನ ಕುಂದೂರು ಹೋಬಳಿಯ ಕುಂದೂರು ಗ್ರಾಮದ ಶ್ರೀ ಚನ್ನಾಪುರದಮ್ಮ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ನಮ್ಮ ತಾಲೂಕಿಗೆ ಪ್ರತ್ಯೇಕ ವಿಧಾನಸಭೆ ಕ್ಷೇತ್ರ ಇಲ್ಲದಿರುವುದರಿಂದ ಅಭಿವೃದ್ಧಿಯಲ್ಲಿ ಕುಠಿತವಾಗಿದೆ. ಹೀಗಾಗಿ ಪ್ರತ್ಯೇಕ ವಿಧಾನಸಭೆ ಕ್ಷೇತ್ರ ದೊರೆತರೆ ಎಲ್ಲ ಸೌಲಭ್ಯಗಳು ದೊರೆಯುವ ಮೂಲಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
    ತಾಲೂಕಿನಲ್ಲಿ ಹಲವು ದೇಗುಲ, ಸುಂದರ ಮಲೆನಾಡಿನ ಸೊಬಗು ಇದೆ. ಹೇಮಾವತಿ, ಯಗಚಿ, ವಾಟೆಹೊಳೆ ನದಿಗಳು ಈ ಭಾಗದಲ್ಲಿ ಹರಿದು ಜನರು ದಾಹವನ್ನು ತಣಿಸುತ್ತ, ಹಚ್ಚ ಹರಿಸಿನಿಂದ ತಾಲೂಕು ಕಂಗೊಳಿಸುತ್ತಿದೆ. ಆದರೆ, ಕಾಡಾನೆ, ಚಿರತೆ, ಕಾಡುಹಂದಿಗಳ ಹಾವಳಿಯಿಂದ ರೈತರು, ಕಾಫಿ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಬೇಕಾದರೆ ನಮಗೆ ಪ್ರತ್ಯೇಕ ವಿಧಾನಸಭೆ ಕ್ಷೇತ್ರಬೇಕಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಪ್ರತಿ ಹಳ್ಳಿಗೂ ಮೂಲಸೌಕರ್ಯ ಕಲ್ಪಿಸಲು ನೆರವಾಗುವ ಜತೆಗೆ ಜನರು ನಿಮ್ಮದಿ ಜೀವನ ನಡೆಸಲು ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
    ನನ್ನ ಸಾಹಿತ್ಯ ಸೇವೆಯನ್ನು ಗುರುತಿಸಿ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ, ಮಹಿಳೆಗೆ ಸಲ್ಲಬೇಕಾದ ಗೌರವ ನೀಡಿದ್ದಕ್ಕಾಗಿ ಎಲ್ಲರಿಗೂ ಕೃತಜ್ಞರಾಗಿದ್ದೇನೆ. ಇದು ನನಗೆ ತವರು ಮನೆಯ ಬಾಂಧವ್ಯ ಮೂಡಿದಂತಾಗಿದೆ ಎಂದು ಭಾವುಕರಾದರು.
    ಹಿಂದೆ ರಾಧಾಕೃಷ್ಣ ಅವರನ್ನು ಅವರ ಶಿಷ್ಯರು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಿದ್ದನ್ನು ಕೇಳಿದ್ದೆವು. ಆದರೆ ಇಂದು ನಮ್ಮ ಗುರುಗಳಾದ ಕಸಾಪ ಜಿಲ್ಲಾಧ್ಯಕ್ಷ ಮಲ್ಲೇಶ್‌ಗೌಡರು ತಮ್ಮ ಶಿಷ್ಯೆಯನ್ನು ಸಮ್ಮೇಳನಾಧ್ಯಕ್ಷೆಯನ್ನಾಗಿ ಮಾಡಿ, ರಥದಲ್ಲಿ ಕೂರಿಸಿ ಮೆರವಣಿಗೆ ನಡೆಸಿ, ಅವರು ನಮ್ಮೊಂದಿಗೆ ಹೆಜ್ಜೆ ಹಾಕುವ ಮೂಲಕ ಪ್ರೀತಿಯ ಗೌರವನ್ನು ನೀಡಿದ್ದಾರೆ ಎಂದರು.

    ಕನ್ನಡ ನಮ್ಮೆಲ್ಲರ ಜೀವಾಳವಾಗಿದ್ದು, ಭಾರತದ ಸಂಸ್ಕೃತಿ ಕನ್ನಡದ ಮೇಲೆ ನಿಂತಿದೆ. ಭಾಷೆಯಲ್ಲಿ ಮೇಲು-ಕೀಳು ಎಂಬುದಿಲ್ಲ. ಉಳಿದ ಭಾಷೆಗಳನ್ನು ಗೌರವಿಸುವ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು ಎಂದು ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ವಿಶ್ರಾಂತ ಅಧ್ಯಕ್ಷ ಡಾ.ಕಾಳೇಗೌಡ ನಾಗವಾರ ಹೇಳಿದರು.
    ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಭಾಷೆಗೆ ಸೌಂದರ್ಯವಿದೆ. ಭಾಷೆಯನ್ನು ಗೌರವಿಸುವುದು ಎಂದರೆ ಆ ಭಾಷೆಯನ್ನು ಮಾತನಾಡುವ ಜನರನ್ನು ಗೌರವಿಸಿದಂತೆ ಎಂದು ಅಭಿಪ್ರಾಯಪಟ್ಟರು.

    ಇಂದು ಓದುವ ಪರಿಪಾಠ ನಿಂತು ಹೋಗಿದೆ. ಪಂಪ, ಕುಮಾರವ್ಯಾಸರಾದಿಯಾಗಿ ಪ್ರಸಿದ್ಧ್ದ ಸಾಹಿತಿಗಳ ಕಾವ್ಯವನ್ನು ವಾಚಿಸುವ ಕೆಲಸವನ್ನು ಪರಿಷತ್ ಮಾಡಬೇಕು. ಆ ಮೂಲಕ ಸಾಹಿತ್ಯ ಅಭಿರುಚಿ ಹೆಚ್ಚಿಸಬೇಕು. ಬಸವಣ್ಣ ರಚಿಸಿರುವ 49 ವಚನಗಳ ಪೈಕಿ ಆಲೋಚನ ವಿಭಾಗದಲ್ಲಿ ನಾನು ದಲಿತ ಮನೆ ಮಗ ಎಂದು ಹೇಳಿದ್ದಾರೆ. ಎಸ್.ಕೆ.ಕರಿಂ ಖಾನ್ ಅಫ್ಘಾನಿಸ್ಥಾನದಿಂದ ಬಂದು ಕನ್ನಡಕ್ಕಾಗಿ ದುಡಿದವರು. ಹಾಸನ ಜಿಲ್ಲೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೆಚ್ಚು ಪಾತ್ರ ವಹಿಸಿದೆ. ಗೊರೂರು ರಾಮಸ್ವಾಮಿ ಅವರ ಮಗ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನೇ ಬಲಿ ಕೊಟ್ಟಿದ್ದಾರೆ. ಹಾಸನ ರಾಜರಾಯರು ವಿಶ್ವ ಮಟ್ಟದಲ್ಲಿ ಶ್ರೇಷ್ಠತೆ ಪಡೆದಿದ್ದಾರೆ. ರಾಜಕೀಯವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರೈತರನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ ಎಂದು ಹೇಳಿದರು.

    ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಸಾಹಿತ್ಯದಲ್ಲಿ ಜಾನಪದ ಸಾಹಿತ್ಯಕ್ಕೆ ಹೆಚ್ಚು ಮಹತ್ವವಿದೆ. ಜಾನಪದ ಹಳ್ಳಿಯ ರೈತರು, ಮಕ್ಕಳು, ಮಹಿಳೆಯರು, ಕಾರ್ಮಿಕರಲ್ಲಿದೆ. ಕನ್ನಡ ಭಾಷೆ ಉತ್ಕೃಷ್ಟವಾಗಿ ಅಡಗಿರುವುದು ಗ್ರಾಮೀಣ ಭಾಗದಲ್ಲಿ. ನಗರದ ಪ್ರದೇಶದಲ್ಲಿ ಅನ್ಯಭಾಷೆಗಳ ಹಾವಳಿಯಿಂದ ಕನ್ನಡ ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.

    ಕಾರ್ಯಕ್ರಮದಲ್ಲಿ ಕಾರ್ಜುವಳ್ಳಿ ಹಿರೇಮಠ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ತಾಲೂಕು ಅಧ್ಯಕ್ಷ ಎ.ಎಸ್.ಗೋಪಾಲಸ್ವಾಮಿ, ಮಾಜಿ ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ, ಉದಯ ರವಿ, ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ, ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಕಾಂಗ್ರೆಸ್ ಮುಖಂಡರಾದ ಮೋಹನ್ ಹೆಮ್ಮಿಗೆ, ಮುರಳಿ ಮೋಹನ್, ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರೇಶ್, ಕುಂದೂರು ಗ್ರಾಮಸ್ಥರಾದ ತನುಗೌಡ, ಪುನೀತ್ ಇತರರು ಇದ್ದರು.

    ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ
    ಸಮ್ಮೇಳನದ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಬೆಳಗ್ಗೆ ಗ್ರಾಮದ ಚನ್ನಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಸಭಾಪತಿ ಕಾಂಚನಮಾಲ ರಾಷ್ಟಧ್ವಜ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ ನಾಡಧ್ವಜ ಮತ್ತು ಕಸಾಪ ತಾಲೂಕು ಅಧ್ಯಕ್ಷ ಎ.ಎಸ್.ಗೋಪಾಲಕೃಷ್ಣ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.
    ಕುಂದೂರು ನಾರಾಯಣಸ್ವಾಮಿ ದೇವಸ್ಥಾನದಿಂದ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಯಿತು. ಮಂಗಳವಾದ್ಯ, ನಂದಿಧ್ವಜ, ಮಹಿಳೆಯರಿಂದ ಪೂರ್ಣಕುಂಭದೊಂದಿಗೆ ಸಮ್ಮೇಳನಾಧ್ಯಕ್ಷರಾದ ಶಿಕ್ಷಕಿ ವೇದಾವತಿ ಶಿವಣ್ಣ ಅವರನ್ನು ಬೆಳ್ಳಿರಥದಲ್ಲಿ ಜಾನಪದ ಕಲಾ ತಂಡದೊಂದಿಗೆ ಸಾವಿರಾರು ಕನ್ನಡ ಅಭಿಮಾನಿಗಳು ಚನ್ನಾಪುರ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.

    ಕನ್ನಡವನ್ನು ಬೆಳೆಸುವುದು ಬೇಡ, ಅದು ಈಗಾಗಲೇ ಬೆಳೆದಿದೆ. ಬದಲಾಗಿದೆ ಉಳಿಸುವ ಕೆಲಸವಾಗಬೇಕು. ಕನ್ನಡ ಸಾಹಿತ್ಯಕ್ಕೆ 9 ಜ್ಞಾನಪೀಠ ಪ್ರಶಸ್ತಿ ಬಂದಿರುವುದು ನಮ್ಮ ಹೆಮ್ಮೆ. ಕನ್ನಡ ಭಾಷೆಯಲ್ಲಿ ಜಾನಪದ ಭಾಷೆ ಶುದ್ಧವಾಗಿ ಬಳಕೆಯಾಗುತ್ತದೆ. ಆದರೆ, ಬೇರೆ ಭಾಷೆಗಳಲ್ಲಿ ಆ ಅವಕಾಶವಿಲ್ಲ. ಸಾಹಿತ್ಯವನ್ನು ಚೆನ್ನಾಗಿ ಅರ್ಥೈಸಿಕೊಂಡು ಕನ್ನಡ ಭಾಷೆಯಲ್ಲಿ ಅಭಿವ್ಯಕ್ತಗೊಳಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts