More

    ಆರ್ಥಿಕ ಆತಂಕವಾದ ಸೃಷ್ಟಿ: ಯೋಗ ಗುರು ಬಾಬಾ ರಾಮದೇವ್

    ಹುಬ್ಬಳ್ಳಿ: ಮುಸ್ಲಿಂ ಅಥವಾ ಹಿಂದು ಆತಂಕವಾದದ ಬದಲಿಗೆ ಆರ್ಥಿಕ ಆತಂಕವಾದ ಸೃಷ್ಟಿಯಾಗಿದೆ ಎಂದು ಯೋಗ ಗುರು ಬಾಬಾ ರಾಮದೇವ್ ಅವರು ಅಭಿಪ್ರಾಯಪಟ್ಟರು.

    ಕನ್ನಡದ ನಂ.1 ದಿನ ಪತ್ರಿಕೆ ವಿಜಯವಾಣಿ, ದಿಗ್ವಿಜಯ 247 ನ್ಯೂಸ್ ಚಾನೆಲ್ ಮಾಧ್ಯಮ ಸಹಯೋಗ ಹಾಗೂ ವರ್ಲ್ಡ್ ಸ್ಕೆ್ವೕರ್, ಕೆಎಲ್​ಇ, ದಿ ಇಂಡಸ್ ಎಂಟರ್ ಪ್ರಿನರ್ಸ್ ವತಿಯಿಂದ ನಗರದ ಹೋಟೆಲ್ ಡೆನಿಸನ್ಸ್​ನಲ್ಲಿ ಭಾನುವಾರ ಏರ್ಪಡಿಸಿದ್ದ ‘ಉದ್ಯಮಶೀಲತಾ ಶೃಂಗಸಭೆ’ (ಟೈಕಾನ್ -2020)ಯ ‘ಈವ್ನಿಂಗ್ ವಿಥ್ ಲೆಜೆಂಡ್ಸ್’ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ಧರ್ಮ-ಜಾತಿ ಮಧ್ಯೆ ಜಗಳ ತರುವ ರಾಜಕಾರಣದ ಅಗತ್ಯವಿಲ್ಲ. ಸಂಯಮ ಮತ್ತು ಸಮೃದ್ಧಿ ತರುವ ರಾಜಕಾರಣದ ಅಗತ್ಯವಿದೆ. ಸಿಎಎ, ಎನ್​ಆರ್​ಸಿ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತವಾಗುತ್ತಿದೆ. ರಸ್ತೆ ಮೇಲೆ ಕುಳಿತು ವಿರೋಧ ವ್ಯಕ್ತಪಡಿಸುವವರೆಲ್ಲ ಸಂವಿಧಾನ ರಚಿಸಲು ಸಾಧ್ಯವಿಲ್ಲ. ನೀತಿ-ನಿರೂಪಣೆಗಳು ಸಂವಿಧಾನದತ್ತವಾಗಿಯೇ ರೂಪುಗೊಳ್ಳುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರು ಐದು ಟ್ರಿಲಿಯನ್ ಆರ್ಥಿಕ ವೃದ್ಧಿ ಕುರಿತು ನೀತಿ ರೂಪಿಸುತ್ತಾರೆ. ಅದನ್ನು ವೃದ್ಧಿ ಮಾಡುವುದು ಜನರೇ ಹೊರತು ಬೇರಾರು ಅಲ್ಲ ಎಂದು ಸಂವಾದದಲ್ಲಿ ಕೇಳಿದ ಪ್ರಶ್ನೆಗಳಿಗೆ ಮಾರ್ವಿುಕವಾಗಿಯೇ ನುಡಿದರು.

    ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ಟೈ ಅಧ್ಯಕ್ಷ ಶಶಿಧರ ಶೆಟ್ಟರ್, ಟೈಕಾನ್ ಸಂಯೋಜಕ ವಿಜೇಶ ಸೈಗಲ್, ಶಾಸಕ ಅರವಿಂದ ಬೆಲ್ಲದ, ಉದ್ಯಮಿಗಳಾದ ಡಾ. ಗುರುರಾಜ ದೇಶಪಾಂಡೆ, ಕೇತನ ದೇಶಪಾಂಡೆ, ಸಂತೋಷ ಹುರಳಿಕೊಪ್ಪ, ಅಜಯ್ ಹಂಡಾ, ಶ್ರಾವಣಿ ಪವಾರ್ ಇತರರು ಇದ್ದರು.

    ಹುಬ್ಬಳ್ಳಿಗೆ ಫುಡ್ ಪಾರ್ಕ್, ರುಚಿ ಸೋಯಾ: ಬಾಬಾ ಅಂದರೆ ನಮ್ಮ ಭಾಷೆಯಲ್ಲಿ ‘ಬನ್ನಿ’ ‘ಸ್ವಾಗತ’ ಎಂದರ್ಥ. ಅಲಿಬಾಬಾ ಕಂಪನಿ ಇದೆ. ಬಾಬಾ ಅಂದರೆ ಗುರೂಜಿ ಎಂದರ್ಥ. ಆದರೆ, ನಾವು ಹುಬ್ಬಳ್ಳಿ ಭಾಷೆಯಲ್ಲಿಯೇ ತಮ್ಮ ಕಂಪನಿಯನ್ನು ಇಲ್ಲಿ ಆರಂಭಿಸಲು ಸ್ವಾಗತಿಸುತ್ತೇವೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂ.ಡಿ. ಆನಂದ ಸಂಕೇಶ್ವರ ಅವರು ಕೇಳಿಕೊಂಡರು. ಯಾವೊಂದು ಕಂಪನಿಯು ಕೃಷಿಗೆ ಸಂಬಂಧಿಸಿದ ಕಂಪನಿಗಳನ್ನು ಹುಟ್ಟು ಹಾಕಿಲ್ಲ. ಅದು ಆರಂಭಿಸಿದರೆ ದೊಡ್ಡ ನಷ್ಟ ಅಂತ ಎಲ್ಲರಿಗೂ ಗೊತ್ತು. ಆದರೆ, ನಾನು ಫುಡ್ ಪಾರ್ಕ್ ಆರಂಭಿಸಿದ್ದೇನೆ. ಹುಬ್ಬಳ್ಳಿಗೆ ಫುಡ್ ಪಾರ್ಕ್, ರುಚಿ ಸೋಯಾ ವಿಸ್ತರಿಸುವ ಕುರಿತು ನಿರ್ಧರಿಸಲಾಗುವುದು ಎಂದು ಬಾಬಾ ರಾಮದೇವ್ ಅವರು ಹೇಳಿದರು.

    ಭಾರತದ ಆರ್ಥಿಕತೆಗೆ ಚೀನಾ ಮಾದರಿ: 2030ರ ವೇಳೆಗೆ ಯುರೋಪ್ ಹಾಗೂ ಅಮೆರಿಕವನ್ನು ಹಿಂದಕ್ಕೆ ತಳ್ಳಿ ಏಷ್ಯಾ ಖಂಡ ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ಇಂಥ ಸಂದರ್ಭದಲ್ಲಿ ಭಾರತದ ಆರ್ಥಿಕತೆಗೆ ಚೀನಾ ಮಾದರಿಯಾಗಬೇಕೆ ಹೊರತು, ಅಮೆರಿಕ ಅಲ್ಲ ಎಂದು ಪದ್ಮಶ್ರೀ ಪುರಸ್ಕೃತ ಟಿ.ವಿ. ಮೋಹನದಾಸ ಪೈ ಅಭಿಪ್ರಾಯಿಸಿದರು.

    ಟೈ ಹುಬ್ಬಳ್ಳಿಯ ಉದ್ಯಮಶೀಲತಾ ಶೃಂಗ ಸಮ್ಮೇಳನದಲ್ಲಿ ಹಮ್ಮಿಕೊಂಡಿದ್ದ ದಿಗ್ಗಜರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2020-30 ಅರ್ಥ ವ್ಯವಸ್ಥೆಯಲ್ಲಿ ಏಷ್ಯಾದ ದಶಕವಾಗಲಿದೆ. ಚೀನಾದೊಂದಿಗೆ ಭಾರತ ಆರ್ಥಿಕ ಶಕ್ತಿಯಾಗಿ ಪೈಪೋಟಿಗೆ ಇಳಿಯಲಿದೆ ಎಂದು ಹೇಳಿದರು.

    1950ರಿಂದ 80ರವರೆಗೆ ವಿಶ್ವದ ಅರ್ಥ ವ್ಯವಸ್ಥೆ ಶೇ. 4.5ರಷ್ಟು ವೇಗದಲ್ಲಿ ಬೆಳವಣಿಗೆ ಹೊಂದಿದಾಗ ಭಾರತದಲ್ಲಿ ಶೇ. 3.5ರಷ್ಟು ಇತ್ತು. ಇದಕ್ಕೆ ಖಾಸಗಿ ವಲಯವನ್ನು ಕಡೆಗಣಿಸಿದ್ದು ಕಾರಣ. ಅಂದಿನ ಸರ್ಕಾರಗಳು ಖಾಸಗಿ ವಲಯಕ್ಕೆ ಮಹತ್ವ ನೀಡಿರಲಿಲ್ಲ. 1991ರಲ್ಲಿ ಜಾಗತಿಕ ಮಾರುಕಟ್ಟೆಗೆ ತೆರೆದುಕೊಂಡ ಪರಿಣಾಮ ಭಾರತದ ಆರ್ಥ ವ್ಯವಸ್ಥೆ ಸುಧಾರಿಸಿದ್ದು. ಆರ್ಥಿಕ ಸ್ವಾತಂತ್ರ್ಯ ಮರಳಿ ಬಂದಿದ್ದು ಈ ಅವಧಿಯಲ್ಲಿ ಎಂದು ಹೇಳಿದರು. ಭಾರತದ ಆರ್ಥಿಕತೆಗೆ ಜನಸಂಖ್ಯೆ ಸಮಸ್ಯೆ ಅಲ್ಲ. ಹಾಗೊಂದು ವೇಳೆ ಇದು ನಿಜವಾಗಿದ್ದರೆ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆಯಿರುವ ಚೀನಾ ಆರ್ಥಿಕ ಸದೃಢ ರಾಷ್ಟ್ರವಾಗಿ ಹೊರಹೊಮ್ಮುತ್ತಿರಲಿಲ್ಲ. ಭಾರತದಲ್ಲಿ ಉತ್ಪಾದಕತೆ, ಮೂಲಸೌಕರ್ಯ ಅಭಿವೃದ್ಧಿ ಹೆಚ್ಚಬೇಕು ಎಂದರು.

    ನಗರೀಕರಣದಿಂದ ಪರಿಹಾರ: ನಗರೀಕರಣದಲ್ಲಿ ಆರ್ಥಿಕ ಬೆಳವಣಿಗೆಗೆ ಪರಿಹಾರವಿದೆ. ಇದರರ್ಥ ಗ್ರಾಮೀಣ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗಬೇಕು ಎಂದಲ್ಲ. ಸುಮಾರು 5000 ಪಟ್ಟಣಗಳನ್ನು ನಗರೀಕರಣಗೊಳಿಸಬೇಕು. ಚೀನಾದಲ್ಲಿ ಇಂಥ ಪ್ರಯತ್ನಗಳು ನಡೆದಿವೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಎಲ್ಲರಿಗೂ ಸೂರು ಕಲ್ಪಿಸುವ ಪ್ರಯತ್ನಗಳು ನಡೆದಿವೆ. ಬಡವರಿಗೆ ಅಡುಗೆ ಅನಿಲ ಸಿಲಿಂಡರ್ ವಿತರಣೆ, ಶೌಚಗೃಹ ನಿರ್ಮಾಣ ಮಾಡಲಾಗಿದೆ. ಅಗ್ಗದ ದರದಲ್ಲಿ ಮೊಬೈಲ್ ಡಾಟಾ ಲಭ್ಯವಾಗಿದೆ. ಇದರಿಂದ ಅರ್ಥಿಕ ಅಭಿವೃದ್ಧಿಯ ಪಾಲು ಬಡವರಿಗೂ ಲಭ್ಯವಾದಂತಾಗಿದೆ ಎಂದರು.

    ಪ್ರಶಸ್ತಿ ಪುರಸ್ಕೃತರು: ಎಂಟರ್​ಪ್ರಿನರ್ ಆಫ್ ದಿ ಇಯರ್-ಸ್ವರ್ಣ ಗ್ರುಪ್ ಆಫ್ ಕಂಪನಿ ಚೇರ್ಮನ್ ಡಾ.ವಿ.ಎಸ್.ವಿ. ಪ್ರಸಾದ್, ಎಕ್ಸಲೆನ್ಸ್ ಇನ್ ಸರ್ವಿಸ್ ಇಂಡಸ್ಟ್ರಿ-ಕೆಂಭಾವಿ ಆರ್ಕಿಟೆಕ್ಚರ್ ಫೌಂಡೇಷನ್​ನ ಪಾರ್ಥ ಕೆಂಭಾವಿ, ಸೌಮ್ಯ ಕೆಂಭಾವಿ, ಎಕ್ಸಲೆನ್ಸ್ ಇನ್ ಟೆಕ್ನಾಲಜಿ-ಸಾಂಖ್ಯ ಲ್ಯಾಬ್ಸ್ ಪ್ರೖೆ.ಲಿ. ಪರಾಗ್ ನಾಯ್ಕ, ಎಕ್ಸಲೆನ್ಸ್ ಇನ್ ಮ್ಯಾನುಫ್ಯಾಕ್ಚರಿಂಗ್-ಮಿ. ಅಡ್ವಾನ್ಸ್ ಡೈ ಕಾಸ್ಟ್​ನ ನಾಗರಾಜ ದೀವಟೆ, ಶಿವರಾಮ್ ಹೆಗಡೆ, ಬೆಸ್ಟ್ ಸ್ಟಾರ್ಟ್​ಅಪ್ ಆಫ್ ದಿ ಇಯರ್-ಡಾಕೆಟ್​ರನ್​ನ ಸಿಇಒ ಅಜಯ್ ಕಬಾಡಿ, ಸಿಟಿಒ ಶ್ವೇತಾ ಶೆಟ್ಟರ್, ಬೆಸ್ಟ್ ವುಮೆನ್ ಎಂಟರ್​ಪ್ರಿನರ್ ಆಫ್ ದಿ ಇಯರ್-ಸೋನಾಲ್ ಅಜಯ್ ಮೊಮಾಯ್ನ ಸೋನಾಲ್ ಮೊಮಾಯ್, ಅಜಯ್ ಮೊಮಾಯ್

    ಬಾಬಾ ರಾಮದೇವ್ ಜತೆ ಪ್ರಶ್ನೋತ್ತರ

    ತಾವು ವ್ಯಾಪಾರ ಆರಂಭಿಸಿದಾಗ ಇದ್ದ ಪರಿಸ್ಥಿತಿ? ಮುಂದಿನ ಎರಡು ವರ್ಷದಲ್ಲಿ ತಲುಪುವ ಆದಾಯದ ಗುರಿ ಎಷ್ಟು? -ಆನಂದ ಸಂಕೇಶ್ವರ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂ.ಡಿ.

    ಬಾಬಾ ರಾಮದೇವ್: ನನ್ನ ಕಂಪನಿ ಆರಂಭಿಸಿದಾಗ 10 ಸಾವಿರ ರೂಪಾಯಿ ಇರಲಿಲ್ಲ. ಈಗ 24 ಸಾವಿರ ಕೋಟಿ ರೂ. ವ್ಯವಹಾರ ನಡೆಯುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ 50 ಸಾವಿರ ಕೋಟಿ ರೂ. ವ್ಯಾಪಾರ ವೃದ್ಧಿಸುವ ಗುರಿ ಇದೆ.

    ಯೋಗದ ಜೊತೆಗೆ ವ್ಯಾಪಾರ ಆರಂಭಿಸಿರುವ ತಮಗೆ ಮತ್ತಷ್ಟು ಉದ್ದಿಮೆ ವಿಸ್ತರಿಸುವ ಚಿಂತನೆ ಇದೆಯೇ? – ವಿಜೇಶ ಸೈಗಲ್ ಟೈಕಾನ್ ಸಂಯೋಜಕ

    ಬಾಬಾ: ಗುರಿಗಿಂತ ‘ಕಾಯಕ’ ತತ್ತ್ವಕ್ಕೆ ಆದ್ಯತೆ ನೀಡಿದ್ದೇನೆ. ಯಾರೂ ಹಣದ ಹುಚ್ಚು ಹಚ್ಚಿಸಿಕೊಳ್ಳಬಾರದು. ಆರೋಗ್ಯದತ್ತ ಲಕ್ಷ್ಯ ಕೊಟ್ಟರೆ ಎಲ್ಲವೂ ತಾನಾಗಿಯೇ ಒಲಿದು ಬರಲಿದೆ.

    ಪತಂಜಲಿ ಉತ್ಪನ್ನವನ್ನು ಪ್ರತಿಯೊಬ್ಬರ ಮನೆ-ಮನ ತಲುಪುವಂತೆ ಹೇಗೆ ಮಾಡಿದಿರಿ? ಇದನ್ನು ವಿಶ್ವಕ್ಕೆ ತಲುಪಿಸುವ ಗುರಿ ಇದೆಯೇ? – ಮೋಹನ್​ದಾಸ್ ಪೈ ಮಣಿಪಾಲ್ ಗ್ಲೋಬಲ್ ಎಜುಕೇಷನ್ ಚೇರ್ಮನ್

    ಬಾಬಾ: ದೇಶ ಬಜಾರ್ ಅಲ್ಲ. ಪರಿವಾರ ಎಂದು ತಿಳಿದಿದ್ದೇನೆ. ಹಾಗಾಗಿಯೇ ಪತಂಜಲಿ ಉತ್ಪನ್ನದ ಮೇಲೆ ಜನರ ನಂಬಿಕೆ ಇದೆ. ಇದನ್ನು ವಿಶ್ವಕ್ಕೆ ಪರಿಚಯಿಸಲಾಗುವುದು. ಭಾರತಕ್ಕೆ ಬಂದ ಪರದೇಶದವರು ನಮ್ಮಲ್ಲಿದ್ದದ್ದನ್ನು ದೋಚಿಕೊಂಡು ಹೋದರು. ಹಾಗಂತ ದೋಚಿಕೊಂಡು ಬರುವುದಿಲ್ಲ. ವ್ಯಾಪಾರ ಮಾಡಿ ದೋಚಿದ್ದನ್ನು ಮರಳಿ ತರಲು ಪ್ರಯತ್ನಿಸುವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts