More

    ಆರೋಗ್ಯ ಭಾಗ್ಯವೇ ಎಲ್ಲಕ್ಕಿಂತ ಶ್ರೇಷ್ಠ

    ಬಸವಕಲ್ಯಾಣ: ಆರೋಗ್ಯ ಚೆನ್ನಾಗಿಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಶಾರೀರಿಕ ಮತ್ತು ಮಾನಸಿಕ ಆರೋಗ್ಯವೇ ಎಲ್ಲಕ್ಕಿಂತ ಶ್ರೇಷ್ಠ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.

    ಬಸವ ಜಯಂತಿ ಮತ್ತು ಬಸವೇಶ್ವರ ಜಾತ್ರೋತ್ಸವ ನಿಮಿತ್ತ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿಯಿಂದ ನಗರದ ಶ್ರೀ ಬಸವೇಶ್ವರ ಪಿಯು, ಪದವಿ ಹಾಗೂ ಅಕ್ಕಮಹಾದೇವಿ ಮಹಿಳಾ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿದ ಅವರು, ಬಸವಣ್ಣನವರು ದೇಹವನ್ನು ದೇವಾಲಯಕ್ಕೆ ಸಮೀಕರಿಸಿದ್ದಾರೆ ಎಂದರು.

    ಜಾತ್ರೋತ್ಸವ ನಿಮಿತ್ತ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಏರ್ಪಡಿಸಿರುವುದು ಸ್ತುತ್ಯಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು, ವೈದ್ಯರು ಕಣ್ಣಿಗೆ ಕಾಣುವ ದೇವರು. ಕೋವಿಡ್‌ನಂತಹ ಸಂಕಷ್ಟದ ಕಾಲದಲ್ಲೂ ಅತ್ಯಂತ ಕಾಳಜಿಯಿಂದ ಕಾರ್ಯನಿರ್ವಹಿಸಿ ಹಲವರನ್ನು ಬದುಕಿಸಿದ್ದಾರೆ ಎಂದು ಕೊಂಡಾಡಿದರು.

    ಕ್ಯಾನ್ಸರ್ ತಜ್ಞ ಡಾ.ರಾಜಶೇಖರ ಜಾಕಾ ಮಾತನಾಡಿ, ಬಳಸುವ ದವಸ-ಧಾನ್ಯಗಳಲ್ಲಿ ರಾಸಾಯನಿಕ ಬಳಕೆ ಹೆಚ್ಚಾಗಿದ್ದರಿಂದ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಧೂಮಪಾನ, ಮದ್ಯಪಾನ ಮತ್ತು ತಂಬಾಕು ಸೇವನೆಗಳಿಂದ ದೂರವಿರಬೇಕು. ಉತ್ತಮ ಆಹಾರ ಪದ್ಧತಿ, ಪೌಷ್ಟಿಕ ಆಹಾರ ಸೇವನೆ ಜತೆಗೆ ವ್ಯಾಯಾಮ ಮತ್ತು ಯೋಗವನ್ನು ರೋಢಿಸಿಕೊಳ್ಳಬೇಕು. ಕ್ಯಾನ್ಸರ್‌ಗೆ ಚಿಕಿತ್ಸೆ ಲಭ್ಯವಿದ್ದು, ನಿರಂತರ ತಪಾಸಣೆ ಮೂಲಕ ಬೇಗ ಪತ್ತೆ ಹಚ್ಚಿ ರೋಗಿಯನ್ನು ಗುಣಪಡಿಸಬಹುದು ಎಂದು ಹೇಳಿದರು.

    ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೊರಕೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವೈದ್ಯ ಡಾ.ವಿ.ಎಸ್. ಮಠಪತಿ, ಬಿಡಿವಿಸಿ ಉಪಾಧ್ಯಕ್ಷರಾದ ಶಿಬಿರದ ಸಂಯೋಜಕ ಡಾ.ಜಿ.ಎಸ್. ಭುರಳೆ ಮಾತನಾಡಿದರು.

    ಬ್ರಿಮ್ಸ್ ತರಬೇತಿ ಕೇಂದ್ರದ ಪ್ರಾಚಾರ್ಯ ಡಾ.ಸಂಜೀವಕುಮಾರ ಪಾಟೀಲ್, ಬಸವಕಲ್ಯಾಣ ರೋಟರಿ ಕ್ಲಬ್ ಅಧ್ಯಕ್ಷ ವೀರೇಶ ಕುಂಬಾರ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಸಹ ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ನಿರ್ದೇಶಕರಾದ ಸುಭಾಷ ಹೊಳಕುಂದೆ, ಮಲ್ಲಯ್ಯ ಹಿರೇಮಠ, ಕಾಶಪ್ಪ ಸಕ್ಕರಬಾವಿ, ಬದ್ರಿನಾಥ ಪಾಟೀಲ್, ಅನೀಲಕುಮಾರ ರಗಟೆ, ರೇವಣಪ್ಪ ರಾಯವಾಡೆ, ಬಿಡಿವಿಸಿ ಕಾರ್ಯದರ್ಶಿ ನಾಗಯ್ಯ ಸ್ವಾಮಿ, ವಿಶ್ವಸ್ಥರಾದ ಗದಗೆಪ್ಪ ಹಲಶೆಟ್ಟೆ ಇತರರಿದ್ದರು. ವಿಠ್ಠಲರಡ್ಡಿ ಉಪ್ಪೆ ವಚನ ಗಾಯನ ನಡೆಸಿಕೊಟ್ಟರು. ಜ್ಯೋತಿ ತುಗಾವೆ ನಿರೂಪಣೆ ಮಾಡಿ ವಂದಿಸಿದರು. ಶಿಬಿರದಲ್ಲಿ ೨೬೮ ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಮಹಿಳೆಯರು ಸೇರಿ ೯೨ ಜನ ರಕ್ತದಾನ ಮಾಡಿದರು.

    ಭಾಗವಹಿಸಿದ ತಜ್ಞ ವೈದ್ಯರು: ಶಿಬಿರದಲ್ಲಿ ನಾನಾ ರೋಗಗಳ ತಜ್ಞ ವೈದ್ಯರಾದ ಡಾ.ನಿತೀನ್ ಗುದಗೆ, ಡಾ.ಗುರುಬಸವ ಲಕ್ಮಾಜಿ, ಡಾ.ಅನೀಲ ಮುದ್ದಾ, ಡಾ.ಸಂತೋಷ ಹರಕೂಡೆ, ಡಾ.ಶ್ರೀಕಾಂತ ದುರ್ಗೆ, ಡಾ.ಸಂಜುಕುಮಾರ ಮುನ್ನೋಳ್ಳಿ, ಡಾ.ಸದಾನಂದ ಪಟೀಲ್, ಡಾ.ಪೃಥ್ವಿರಾಜ ಬಿರಾದಾರ, ಡಾ.ಅರುಣ ಮಂಗಣಿ, ಡಾ.ಮಹೇಶ ತೊಂಡಾರೆ, ಡಾ.ಧನರಾಜ ಚಂದನಕೇರೆ. ಡಾ.ವಿನೋದ ಪಾಟೀಲ್, ಡಾ.ಸ್ಮೀತಾ ಕಳ್ಳಿಗೂಡಿ, ಡಾ.ಶಿವರಾಜ ಮಾಲಿಪಾಟೀಲ್, ಡಾ.ಶ್ರೀನಿವಾಸ ಕಳ್ಳಿಗೂಡಿ, ಡಾ.ಅಜಯ ಕುರಕೋಟೆ, ಡಾ.ಶ್ರೀಕಾಂತ ಮಠಪತಿ, ಎಸ್.ಬಿ.ಪಾಟೀಲ್ ಇನ್‌ಸ್ಟಿಟ್ಯೂಟ್ ಅಫ್ ಡೆಂಟಲ್ ಕಾಲೇಜಿನ ಡಾ.ಸಿದ್ದಣ್ಣ ಗೌಡ ಇತರರು ಜನರ ಆರೋಗ್ಯ ತಪಾಸಣೆ ಮಾಡಿದರು.

    ಬಸವ ಜಯಂತಿ ಮತ್ತು ಬಸವೇಶ್ವರ ಜಾತ್ರೋತ್ಸವ ನಿಮಿತ್ತ ಪ್ರತಿವರ್ಷ ಹಮ್ಮಿಕೊಳ್ಳುವ ಶಿಬಿರದಲ್ಲಿ ಸ್ಥಳೀಯ ಮತ್ತು ಹೊರಗಿನಿಂದ ೩೦ಕ್ಕೂ ಅಧಿಕ ತಜ್ಞ ವೈದ್ಯರು ಬರುತ್ತಾರೆ. ಈ ಭಾಗದ ಜನರಿಗೆ ಅನಕೂಲವಾಗಲೆಂದು ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿ ನಡೆಸುವ ಈ ಕಾರ್ಯ ಶ್ಲಾಘನೀಯ.
    | ಡಾ.ಜಿ.ಎಸ್.ಭುರಳೆ

    ಉತ್ತಮ ಆಹಾರ, ಒಳ್ಳೆಯ ಸಂಸ್ಕಾರ ಮತ್ತು ಶ್ರೇಷ್ಠ ಸಂಸ್ಕೃತಿಗಳು ಆರೋಗ್ಯ ಚೆನ್ನಾಗಿಡುವ ದಾರಿಗಳಾಗಿವೆ. ಬಸವಣ್ಣನವರು ದೇಹ ಮತ್ತು ಮನಸ್ಸಿನ ಆರೋಗ್ಯದ ಬಗ್ಗೆ ಹಲವು ವಚನಗಳನ್ನು ಬರೆದಿದ್ದಾರೆ. ಬಸವಾದಿ ಶರಣರ ಸಂದೇಶದಂತೆ ಉತ್ತಮ ಕಾಯಕ ಹಾಗೂ ಸಕಾಲಕ್ಕೆ ಊಟ ಮಾಡಿದರೆ ಆರೋಗ್ಯವಂತರಾಗಿ ಬದುಕುಬಹುದು.
    | ಡಾ.ವಿ.ಎಸ್.ಮಠಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts