More

    ಆರೋಗ್ಯ ಕ್ಷೇತ್ರಕ್ಕೂ ಸಹಕಾರ ರಂಗದ ಹೆಜ್ಜೆ -ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟನೆ

    ದಾವಣಗೆರೆ: ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ದೇಶದ ಪ್ರತಿಯೊಂದು ಕ್ಷೇತ್ರಕ್ಕೂ ಸಹಕಾರ ರಂಗ ತಲುಪಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಜೆ.ಆರ್. ಷಣ್ಮುಖಪ್ಪ ಹೇಳಿದರು.
    ರಾಜ್ಯ ಸಹಕಾರ ನಿಯಮಿತ, ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ ಹಾಗೂ ಪಟ್ಟಣ ಸಹಕಾರ ಬ್ಯಾಂಕ್‌ಗಳ ಒಕ್ಕೂಟ ಮತ್ತಿತರ ಸಂಸ್ಥೆಗಳ ಸಹಯೋಗದಲ್ಲಿ ನಗರದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 70ನೇ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
    ದೇಶದ ಸ್ವಾತಂತ್ರ್ಯ ನಂತರದ ಆರ್ಥಿಕ ಚೇತನ ಹಾಗೂ ಕೃಷಿ ಕ್ಷೇತ್ರದ ಉತ್ತೇಜನಕ್ಕಾಗಿ ಆರಂಭಿಸಲಾದ ಸಹಕಾರ ಕ್ಷೇತ್ರವು ಪಡಿತರ ವ್ಯವಸ್ಥೆಯಿಂದ ಹಿಡಿದು ಇಂದು ಆರೋಗ್ಯ ಕ್ಷೇತ್ರಕ್ಕೂ ಕಾಲಿರಿಸಿರುವುದು ಉತ್ತಮ ಬೆಳವಣಿಗೆ. ಇದರಿಂದ ರೈತರು, ಕೃಷಿ ಕೂಲಿ ಕಾರ್ಮಿಕರು, ಬಡ ಮತ್ತು ಮಧ್ಯಮ ವರ್ಗದವರಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
    ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಅಧ್ಷಕ್ಷತೆ ವಹಿಸಿ ಮಾತನಾಡಿ, ಸಹಕಾರ ಸಂಘಗಳು ತತ್ವ, ಮೌಲ್ಯ ಮರೆತರೆ ವಿನಾಶದ ಅಂಚಿಗೆ ಬಂದು ನಿಲ್ಲುತ್ತವೆ. ದೇಶದಲ್ಲಿ ಬಹುತೇಕರು ಕೃಷಿಕರಾಗಿದ್ದು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅಂತಹವರಿಗೆ ಸಹಕಾರ ಕ್ಷೇತ್ರದ ಮೂಲಕ ನೆರವು ನೀಡುವ ಮೂಲಕ ಸಬಲರನ್ನಾಗಿಸುವ ಕೆಲಸ ಆಗಬೇಕು ಎಂದರು.
    ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪ ನಿರ್ದೇಶಕ ಕೆ.ಮಹೇಶ್ವರಪ್ಪ ಮಾತನಾಡಿ, ಜಿಲ್ಲೆಯಲ್ಲಿ 1456 ಸಹಕಾರ ಸಂಘಗಳು ನೋಂದಣಿಯಾಗಿದ್ದು, 1108 ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. 379 ಹಾಲು ಉತ್ಪಾದಕರ ಸಹಕಾರ ಸಂಘಗಳು, 180 ಕೃಷಿ ಪತ್ತಿನ ಸಹಕಾರ ಸಂಘ, 78 ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಹಾಗೂ 471 ವಿವಿಧ ರೀತಿಯ ಸಹಕಾರ ಸಂಘಗಳಿವೆ ಎಂದು ತಿಳಿಸಿದರು.
    ಚನ್ನಗಿರಿ ತುಮ್‌ಕೋಸ್ ಸಂಸ್ಥೆ 800 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಜಿಲ್ಲೆಯ 180ಕ್ಕೂ ಹೆಚ್ಚು ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಶೀಘ್ರವೇ ಗಣಕೀಕರಣಗೊಳಿಸಲಾಗುವುದು ಎಂದು ಹೇಳಿದರು.
    ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ಜಿ.ಶ್ರೀನಿವಾಸಮೂರ್ತಿ, ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ನಿ. ಅಧ್ಯಕ್ಷ ಜಿ.ಡಿ.ಗುರುಸ್ವಾಮಿ, ಸಿಟಿ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಎನ್.ಎಂ. ನಿರಂಜನಮೂರ್ತಿ, ಒಕ್ಕೂಟದ ಉಪಾಧ್ಯಕ್ಷ ಟಿ.ರಾಜಣ್ಣ, ಸಿಇಒ ಮಂಗಳಗೌಡ ದಾನಪ್ಪಗೌಡ, ಶಿಮುಲ್ ನಿರ್ದೇಶಕ ಕೆ.ಎನ್.ಸೋಮಶೇಖರಪ್ಪ, ಎಸ್.ಬಿ.ಶಿವಕುಮಾರ, ಒಕ್ಕೂಟದ ನಿರ್ದೇಶಕ ಡಿ.ಎಂ. ಮುರುಗೇಂದ್ರಯ್ಯ ಇತರರು ಇದ್ದರು. ಸಹಕಾರ ಅಭಿವೃದ್ಧಿ ಅಧಿಕಾರಿ ಜಿ.ಎಸ್. ಸುರೇಂದ್ರ ಉಪನ್ಯಾಸ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts