More

    ಆರೋಗ್ಯಕ್ಕೆ ಸಮತೋಲಿತ ಆಹಾರ ಮುಖ್ಯ

    ಸಂಕೇಶ್ವರ, ಬೆಳಗಾವಿ: ಸಮತೋಲಿತ ಆಹಾರ ಪದ್ಧತಿ ಅನುಸರಿಸಿದರೆ ಅಪೌಷ್ಟಿಕತೆ ತಡೆದು ಹಲವು ಕಾಯಿಲೆ ತಡೆಗಟ್ಟಬಹುದು ಎಂದು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
    ಸಮೀಪದ ನಿಡಸೋಸಿಯ ಶ್ರೀ ಜಗದ್ಗುರು ದುರದುಂಡೀಶ್ವರ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಈಚೆಗೆ ಆಯೋಜಿಸಲಾಗಿದ್ದ ಪೋಷಣ ಅಭಿಯಾನ ನಿಮಿತ್ತ ಆಹಾರೋತ್ಪನ್ನ ಮೇಳ ಉದ್ಘಾಟಿಸಿ ಮಾತನಾಡಿ, ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವ ಮಾತು ಸಾರ್ವಕಾಲಿಕ ಸತ್ಯ ಎಂದರು.

    ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಅಕ್ಕಪ್ಪ ಪದ್ಮಣ್ಣವರ ಮಾತನಾಡಿ, ಅಪೌಷ್ಟಿಕತೆ ಒಂದು ಸಾಮಾಜಿಕ ಪಿಡುಗಾಗಿದೆ. ಮಹಿಳೆ ಹಾಗೂ ಮಕ್ಕಳಲ್ಲಿ ಪೌಷ್ಟಿಕ ಆಹಾರದ ಅರಿವು ಮೂಡಿಸಲು ಸರ್ಕಾರದಿಂದ ಪೋಷಣ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

    ಅಕ್ಷರ ದಾಸೋಹ ಕೇಂದ್ರದ ಸಹಾಯಕ ನಿರ್ದೇಶಕಿ ಸವಿತಾ ಹಲಕಿ ಮಾತನಾಡಿ, ಚಾಕೋಲೇಟ್, ಕುರುಕಲು ತಿಂಡಿ ತಿನ್ನುವ ಸಂಸ್ಕೃತಿಯಿಂದ ಮಕ್ಕಳಲ್ಲಿ ರಕ್ತಹೀನತೆ ಪ್ರಕರಣಗಳು ಹೆಚ್ಚುತ್ತಿವೆ. ದ್ವಿದಳ ಧಾನ್ಯ, ಸಿರಿಧಾನ್ಯ, ಹಾಲು, ಹಣ್ಣು, ತರಕಾರಿಗಳನ್ನು ಕ್ರಮಬದ್ಧವಾಗಿ ಬಳಕೆ ಮಾಡಬೇಕು ಎಂದರು. ಪೋಷಣ ಅಭಿಯಾನದ ನಿಮಿತ್ತ ಹಾಲು, ಹಣ್ಣು, ತರಕಾರಿ, ದ್ವಿದಳ ಧಾನ್ಯ, ಸಿರಿಧಾನ್ಯಗಳಿಂದ ವಿದ್ಯಾರ್ಥಿಗಳು ತಯಾರಿಸಿದ್ದ ನೂರಾರು ಪದಾರ್ಥ ಪ್ರದರ್ಶನಕ್ಕಿಡಲಾಗಿತ್ತು.

    ಸಂಘದ ಅಧ್ಯಕ್ಷ ವಿನಯ ಪಾಟೀಲ, ಉಪಾಧ್ಯಕ್ಷ ನಿರಂಜನಗೌಡ ಪಾಟೀಲ ಸಂಘದ ನಿರ್ದೇಶಕರಾದ ಬಿ.ಜೆ.ಪಾಟೀಲ, ಎಸ್.ಎಸ್. ಯಶವಂತ, ಎಸ್.ಎನ್.ಪಾಟೀಲ, ಜಿ.ಸಿ.ಕೋಟಗಿ, ಕಾರ್ಯದರ್ಶಿ ಬಿ.ಎ.ಪೂಜಾರಿ, ಮುಖ್ಯಾಧ್ಯಾಪಕರಾದ ಪಿ.ಪಿ. ಖೋತ, ಭಾರತಿ ನೂಲಿ, ಶಿಕ್ಷಕರಾದ ಡಾ.ಜಿ.ಕೆ. ಹಿರೇಮಠ, ಮಹಾಂತೇಶ ಗಾಣಿಗೇರ, ಎ.ಬಿ.ಗುರವ, ಸುನೀಲ ಗಲಗಲಿ, ಎಸ್.ಬಿ.ಇಟ್ಟನ್ನವರ, ಡಾ.ರಮೇಶ ದೊಡಭಂಗಿ, ಜಿ.ಬಿ.ಪಾಟೀಲ ಎಸ್.ಸಿ. ಸನದಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts