More

    ಆಯುಷ್ಮಾನ್‌ಗೆ ಗ್ರಾಪಂ ಬಲ, ಹೆಲ್ತ್ ಕಾರ್ಡ್ ನೋಂದಣಿ ಪುನರಾರಂಭ 101 ಪಂಚಾಯಿತಿಗಳಲ್ಲೂ ಅಲರ್ಟ್

    ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
    ಗ್ರಾಮ ಪಂಚಾಯಿತಿಗಳಲ್ಲಿ ಸ್ಥಗಿತಗೊಂಡಿದ್ದ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್‌ಗಳ ನೋಂದಣಿ ಚುರುಕುಗೊಂಡಿದೆ. ತಿಂಗಳ ಅವಧಿಯಲ್ಲಿ ನಾಲ್ಕೂ ತಾಲೂಕುಗಳಲ್ಲಿ 30 ಸಾವಿರ ಲಾನುಭವಿಗಳು ಯೋಜನೆ ವ್ಯಾಪ್ತಿಗೆ ಬಂದಿದ್ದಾರೆ.

    ಪ್ರತಿನಿತ್ಯ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 70 ಕಾರ್ಡ್‌ಗಳನ್ನು ನೋಂದಾಯಿಸುವ ಮೂಲಕ ಜಿಲ್ಲೆಯಲ್ಲಿ ಶೇ.100 ಗುರಿ ಸಾಧಿಸಲು ಎಲ್ಲ ಗ್ರಾಪಂಗಳಿಗೆ ಗುರಿ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ 101 ಗ್ರಾಪಂಗಳಲ್ಲಿ ಹೆಲ್ತ್ ಕಾರ್ಡ್ ವಿತರಿಸಿ ಲಾನುಭವಿಗಳಿಗೆ ಯೋಜನೆ ತಲುಪಿಸಲು ಅಧಿಕಾರಿಗಳು ಶ್ರಮ ಹಾಕುತ್ತಿದ್ದಾರೆ.

    ಈ ಹಿಂದೆಯೇ ಅಭಿಯಾನದ ಮಾದರಿಯಲ್ಲಿ ಹೆಲ್ತ್‌ಕಾರ್ಡ್ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ್ದರೂ ನಿರೀಕ್ಷಿತ ಯಶ ಕಂಡಿರಲಿಲ್ಲ, ಈ ಹಿಂದೆ ಜಿಲ್ಲೆಯಲ್ಲಿ ಶೇ.30 ಕಾರ್ಡ್‌ಗಳ ನೋಂದಣಿಯಾಗಿತ್ತು. ಈ ಹಿಂದೆ ನಾಗರಿಕ ಸೇವಾ ಕೇಂದ್ರಗಳಲ್ಲಷ್ಟೇ ಕಾರ್ಡ್ ನೋಂದಣಿ ಪ್ರಕ್ರಿಯೆಗೆ ಅವಕಾಶವಿತ್ತು. ಈಗ ಗ್ರಾಪಂಗಳಲ್ಲೇ ಆರಂಭವಾಗಿರುವುದರಿಂದ ತಿಂಗಳ ಅವಧಿಯಲ್ಲಿ ಹೆಚ್ಚು ನೋಂದಣಿಯಾಗಲು ಸಾಧ್ಯವಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

    ಗ್ರಾಪಂ ಸರ್ವರಿಗೂ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಚಾಲನೆಗೊಂಡ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಯೋಜನೆ ಗ್ರಾಮೀಣ ಪ್ರದೇಶಗಳಲ್ಲಿ ಜನರನ್ನು ತಲುಪುವಲ್ಲಿ ಏದುಸಿರು ಬಿಡುತ್ತಿದೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಎಲ್ಲರನ್ನೂ ಯೋಜನೆಯಡಿ ತರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

    ಲಾಗಿನ್ ಸಮಸ್ಯೆಯಿಂದ ತೊಂದರೆ: ಯಥಾಪ್ರಕಾರ ಇಂಟರ್‌ನೆಟ್ ಸಂಪರ್ಕ ಕೊರತೆ, ಸರ್ವರ್ ಡೌನ್ ಮತ್ತಿತರ ತಾಂತ್ರಿಕ ದೋಷಗಳಿಂದಾಗಿ ಗ್ರಾಪಂಗಳಲ್ಲಿ ಲಾಗಿನ್ ಆಗಲು ತೊಂದರೆಯಾಗಿತ್ತು. ಸರದಿ ಸಾಲಿನಲ್ಲಿ ಕಾದು ಬೇಸತ್ತ ಜನ ಯೋಜನೆಯಿಂದ ಹೊರಗುಳಿಯುವಂತಾಯಿತು. ಕ್ರಮೇಣ ಗ್ರಾಪಂಗಳಲ್ಲಿ ಕಾರ್ಡ್ ನೋಂದಣಿ ಪ್ರಕ್ರಿಯೆಯೇ ಸ್ಥಗಿತಗೊಂಡಿತ್ತು.

    ಸೌಲಭ್ಯಗಳೇನು? ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ 1 ವರ್ಷದ ಅವಧಿಗೆ 5 ಲಕ್ಷ ರೂಪಾಯಿವರೆಗೆ ಶುಲ್ಕರಹಿತ ಉಚಿತ ವೈದ್ಯಕೀಯ ಸೇವೆ, ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಪಾವತಿ ಆಧಾರದ ಮೇಲೆ ಶೇ.30 ಚಿಕಿತ್ಸಾ ವೆಚ್ಚವನ್ನು ಸರ್ಕಾರ ಪಾವತಿಸಲಿದೆ, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ಗರಿಷ್ಠ 1.50 ಲಕ್ಷ ರೂ. ಈ ಯೋಜನೆಯಡಿ ಸೇವೆ ಪಡೆಯಲು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಪಡೆದಿರಬೇಕು ಅಥವಾ ಆಧಾರ್‌ಕಾರ್ಡ್, ಪಡಿತರ ಚೀಟಿ ನೀಡಿ ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ಎಲ್ಲ ಆರೋಗ್ಯ ಸೇವೆ ಪಡೆಯಬಹುದು.

    20 ರೂ. ಶುಲ್ಕ: ಈ ಕಾರ್ಡ್ ಕಳೆದು ಹೋದರೆ 20 ರೂ. ಶುಲ್ಕ ಕಟ್ಟಿ ಹೊಸ ಕಾರ್ಡ್ ಪಡೆಯಬಹುದು, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು, ಜಿಲ್ಲಾಸ್ಪತ್ರೆಗಳು, ವೈದ್ಯಕೀಯ ಕಾಲೇಜು ಹಾಗೂ ಗ್ರಾಪಂಗಳಲ್ಲಿ 10 ರೂ. ಶುಲ್ಕ ಪಾವತಿಸಿ ಹೆಲ್ತ್ ಕಾರ್ಡ್ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಪಂಗಳು, ಆರೋಗ್ಯ ಕಾರ್ಯಕರ್ತರು, ಶಾಲೆಗಳ ಮುಖ್ಯಶಿಕ್ಷಕರು, ಆಶಾ ಕಾರ್ಯಕರ್ತೆಯರು, ಬಿಲ್ ಕಲೆಕ್ಟರ್, ವಾಟರ್‌ಮನ್‌ಗಳು ಸೇರಿ ಸೀಶಕ್ತಿ ಸಂಘಗಳು, ಇನ್ನಿತರ ಸ್ವಯಂ ಸೇವಾ ಸಂಘಗಳು ಲಾನುಭವಿಗಳನ್ನು ಗುರುತಿಸಿ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವಂತೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

    ತಿಂಗಳಲ್ಲಿ 30 ಸಾವಿರ ನೋಂದಣಿ: ದೇವನಹಳ್ಳಿಯಲ್ಲಿ 6 ಸಾವಿರ, ದೊಡ್ಡಬಳ್ಳಾಪುರದಲ್ಲಿ 10 ಸಾವಿರ, ನೆಲಮಂಗಲ 8 ಸಾವಿರ ಹಾಗೂ ಹೊಸಕೋಟೆಯಲ್ಲಿ 6 ಸಾವಿರ ಸೇರಿ 30 ಸಾವಿರ ಮಂದಿ ತಿಂಗಳ ಅವಧಿಯಲ್ಲಿ ಗ್ರಾಪಂಗಳಲ್ಲಿ ನೋಂದಣಿಯಾಗಿ ಕಾರ್ಡ್ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗ್ರಾಪಂ ಮಟ್ಟದಲ್ಲಿ ಕಾರ್ಡ್ ನೋಂದಣಿ ಪ್ರಕ್ರಿಯೆ ಪುನಾರಂಭಗೊಂಡ ಬಳಿಕ ನಿರೀಕ್ಷೆಗೂ ಮೀರಿ ನೋಂದಣಿಗಳಾಗಿವೆ. ಲಾನುಭವಿಗಳಿಗೆ ತಕ್ಷಣವೇ ನೋಂದಣಿ ಮಾಡುತ್ತಿರುವುದರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ, ನಾಗರಿಕ ಸೇವಾ ಕೇಂದ್ರಗಳಿಗೆ ಹೋಲಿಸಿದರೆ ಗ್ರಾಪಂ ಮಟ್ಟದಲ್ಲಿ ನೋಂದಣಿ ಪ್ರಕ್ರಿಯೆ ಚುರುಕುಗೊಂಡಿದೆ.
    ವಸಂತ್‌ಕುಮಾರ್, ಇಒ ದೇವನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts