More

    ಆಯುರ್ವೇದದಿಂದ ಹಲವು ಸಮಸ್ಯೆಗೆ ಪರಿಹಾರ

    ಬೆಳಗಾವಿ: ಪ್ರಸ್ತುತ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ಆಹಾರ ಪದ್ಧತಿ, ಜೀವನ ಶೈಲಿಯಿಂದಾಗಿ ಜನರು ಸ್ಥೂಲಕಾಯ (ಅಧಿಕ ತೂಕ) ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಲು ಅಕ್ಟೋಬರ್ 1ರಂದು ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕೆಎಲ್‌ಇ ಆಯುರ್ವೇದ ಕಾಲೇಜಿನ ವಿಭಾಗೀಯ ಮುಖ್ಯಸ್ಥ ಡಾ.ಅಶೋಕ ಪಾಟೀಲ ತಿಳಿಸಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕ ತೂಕ, ಮಧುಮೇಹ, ಬೊಜ್ಜು ಸಮಸ್ಯೆ, ಅಧಿಕ ರಕ್ತದೊತ್ತಡ ಹೀಗೆ ವಿವಿಧ ರೋಗಗಳಿಗೆ ಆಯುರ್ವೇದದಲ್ಲಿ ಔಷಧ ಮತ್ತು ಆಹಾರ ರೂಪದಲ್ಲಿ ವಿವಿಧ ಚಿಕಿತ್ಸಾ ಪದ್ಧತಿ ಅನುಸರಿಸಿದರೆ ರೋಗಗಳಿಂದ ಮುಕ್ತಿ ಪಡೆಯಬಹುದು. ಈ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅವಶ್ಯ ಎಂದರು.

    ಕೆಎಲ್‌ಇ ಸಂಸ್ಥೆಯ ಆಯುರ್ವೇದ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಅಕ್ಟೋಬರ್ 1ರಂದು ಬೆಳಗ್ಗೆ 9 ರಿಂದ ಸಂಜೆ 4.30ಗಂಟೆಯವರೆಗೆ ಒಂದು ದಿನ ನಡೆಯುವ ವಿಶೇಷ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಹಾರಾಷ್ಟ್ರದ ಔರಂಗಾಬಾದ್‌ನ ಜೀವನರೇಖಾ ಆಯುರ್ವೇದ ಚಿಕಿತ್ಸಾಲಯ ಮತ್ತು ಸಂಶೋಧನಾ ಕೇಂದ್ರದ ಸಲಹೆಗಾರ ಡಾ.ಮುಕುಂದ್ ಸಬ್ನಿಸ್ ಭಾಗವಹಿಸಲಿದ್ದಾರೆ. ಅಲ್ಲದೆ, ರೋಗಿಗಳಿಗೆ ಉಚಿತ ತಪಾಸಣೆ, ಸಲಹೆ ನೀಡಲಿದ್ದಾರೆ. ಹಾಗಾಗಿ, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

    ಕೆಎಲ್ಇ ಆಸ್ಪತ್ರೆ ಮತ್ತು ಎಂಆರ್‌ಸಿ ಬೆಳಗಾವಿ ಸ್ವಸ್ಥವೃತ್ತ ಮತ್ತು ಪಂಚಕರ್ಮ ವಿಭಾಗದಿಂದ ಸ್ಥೂಲಕಾಯ ಮತ್ತು ಬೊಜ್ಜು ಸಮಸ್ಯೆಗಳಿಗೆ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ. ಇದರಲ್ಲಿ ಉಚಿತ ಸಮಾಲೋಚನೆ, ಕರಾಡ ಸ್ಕ್ಯಾನ್ ಮೂಲಕ ಉಚಿತ ಕೊಬ್ಬಿನ ವಿಶ್ಲೇಷಣೆ ಆಹಾರ ಮಾರ್ಪಾಡುಗಳ ಬಗ್ಗೆ ಈ ಶಿಬಿರದಲ್ಲಿ ತಿಳಿಸಲಾಗುವುದು. 40 ದಿನಗಳ ಅವಧಿಯಲ್ಲಿ ಸುಮಾರು 10 ರಿಂದ 12 ಕೆಜಿವರೆಗೆ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

    ಪಂಚಕರ್ಮ ವಿಭಾಗದ ಮುಖ್ಯಸ್ಥ ಡಾ.ಪ್ರದೀಪ ಎಲ್ ಗ್ರಾಮಪುರೋಹಿತ ಮಾತನಾಡಿ, ಆಯುರ್ವೇದ ಚಿಕಿತ್ಸಾ ಪದ್ಧತಿಯಿಂದ ರೋಗಗಳನ್ನು ನಿಯಂತ್ರಿಸಬಹುದು. ಅಧಿಕ ತೂಕದ ಹೊಂದಿರುವವರಿಗೆ ಪಂಚಕರ್ಮ ಚಿಕಿತ್ಸಾ ಪದ್ಧತಿಯಿಂದ ಆರೋಗ್ಯಕ್ಕೆ ಒಳ್ಳೆಯದು. ಜನರು ಆಹಾರ ಪದ್ಧತಿ ಬದಲಾಯಿಸಿಕೊಂಡರೆ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು. ಕೆಎಲ್‌ಇ ಸಂಸ್ಥೆಯ ಆಯುರ್ವೇದ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಎನ್‌ಎಸ್‌ಎಸ್ ಅಧಿಕಾರಿ ಸಂದೀಪ ಸಗರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts