More

    ಆನ್‌ಲೈನ್ ಕಾರ್ಮಿಕರಿಗೆ ಸಿಹಿ ಸುದ್ದಿ, ಸಾಮಾಜಿಕ ಭದ್ರತೆಗಾಗಿ ಸರ್ಕಾರದಿಂದ ಯೋಜನೆ, ಸಚಿವ ಸಂತೋಷ ಲಾಡ್ ಹೇಳಿದ್ದೇನು?

    ವಿಜಯಪುರ: ಈ ಕಾಮರ್ಸ್, ಸ್ವಿಗ್ಗಿ, ಅಮೆಜಾನ್, ಜೊಮೆಟೊ ಮತ್ತಿತರ ಆನ್‌ಲೈನ್ ಪ್ಲಾರ್ಟ್‌ಫಾರ್ಮ್‌ನಡಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗಾಗಿ ಸರ್ಕಾರ ವಿನೂತನ ಯೋಜನೆ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲಿಯೇ ಜಾರಿಯಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು.

    ರಾಜ್ಯದಲ್ಲಿ ಈ ಕಾಮರ್ಸ್ ಪ್ಲಾಟ್‌ಫಾಮ್‌ನಡಿ ಸುಮಾರು 3-4 ಲಕ್ಷ ಜನ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಸೂಕ್ತ ಸೌಲಭ್ಯಗಳಿಲ್ಲ. ಹೀಗಾಗಿ ಸ್ವಿಗ್ಗಿ, ಅಮೆಜಾನ್, ಜೊಮೆಟೊ, ಈ ಕಾಮರ್ಸ್‌ನ ಪ್ರತಿ ವಹಿವಾಟಿನ ಮೇಲೆ ಸೆಸ್ ಸಂಗ್ರಹಿಸಿ ಅದಕ್ಕೆ ಸರ್ಕಾರದ ಹಣ ಸೇರಿಸಿ ಸಾಮಾಜಿಕ ಭದ್ರತೆ ಒದಗಿಸಲಾಗುವುದು. ಎರಡನೇದಾಗಿ ಸಾರಿಗೆ ವ್ಯವಸ್ಥೆಯಲ್ಲಿ ಬರುವ ಮೆಕ್ಯಾನಿಕ್‌ಗಳು, ಆಟೋ ಚಾಲಕರು ಮತ್ತಿತರ ವಿಭಾಗದಲ್ಲಿ ಕೆಲಸ ಮಾಡುವ ಸುಮಾರು 40 ಲಕ್ಷ ಜನಕ್ಕೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದರಲ್ಲಿ ಇನ್ಶುರೆನ್ಸ್, ಆರೋಗ್ಯ, ಶಿಕ್ಷಣ ಮತ್ತಿತರ ಸೌಲಭ್ಯಗಳು ಸಿಗಲಿವೆ. ಈ ನಿಟ್ಟಿನಲ್ಲಿ ಈಗಾಗಲೇ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಾತುಕತೆಯಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ರಾಜ್ಯದಲ್ಲಿ 45 ಲಕ್ಷ ಜನರ ಬಳಿ ಕಟ್ಟಡ ಕಾರ್ಮಿಕರ ಕಾರ್ಡ್‌ಗಳಿವೆ. ಕೇವಲ ಮೂರು ವರ್ಷದಲ್ಲಿ 35 ಲಕ್ಷ ಕಾರ್ಡ್‌ಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಭೋಗಸ್ ಕಾರ್ಡ್ ಪತ್ತೆ ಹಚ್ಚಲಾಗುತ್ತಿದೆ. ಈ ವರ್ಷ 13 ಲಕ್ಷ ಅರ್ಜಿ ಬಂದಿದ್ದು, ಮೇಲ್ನೋಟಕ್ಕೆ 7 ಲಕ್ಷ ಅರ್ಹ ಫಲಾನುಭವಿಗಳಿರುವುದು ಕಂಡು ಬರುತ್ತಿದೆ. ಹೀಗಾಗಿ ಪರಿಶೀಲನೆ ಮುಂದುವರಿದಿದೆ. ಟ್ರೇಡ್ ಯೂನಿಯನ್‌ಗೂ ಮನವಿ ಮಾಡಿದ್ದು ಅರ್ಹ ಫಲಾನುಭವಿಗಳನ್ನು ಗುರುತಿಸಲು ತಿಳಿಸಲಾಗಿದೆ ಎಂದರು.

    ರಾಜ್ಯದಲ್ಲಿ ಬರ ಆವರಿಸಿರುವುದರಿಂದ ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯಡಿ ಮಾನವ ದಿನಗಳನ್ನು ಹೆಚ್ಚು ಸೃಜಿಸಲಾಗುತ್ತಿದೆ. ಕೂಲಿ ಮೊತ್ತ ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುವುದು. ಈಗಾಗಲೇ ಐದು ಗ್ಯಾರಂಟಿಗಳ ಪೈಕಿ 4 ಅನುಷ್ಟಾನಗೊಳಿಸಲಾಗಿದೆ. ಇಡೀ ಭಾರತದಲ್ಲಿ ಸುಮಾರು 56 ಸಾವಿರ ಕೋಟಿ ಅನುದಾನವನ್ನು ಬಡವರ ಮನೆಗೆ ತಲುಪಿಸಿದ ಏಕೈಕ ಸರ್ಕಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂಬುದು ಹೆಮ್ಮೆಯ ವಿಚಾರ. ದೇಶದ ಇತಿಹಾಸದಲ್ಲಿಯೇ ಇದೊಂದು ಮೈಲಿಗಲ್ಲು. ಈ ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲವೇ ಕೆಲವು ಉದ್ಯಮಿದಾರರು ದುಡ್ಡು ಮಾಡಿಕೊಂಡಿದ್ದಾರೆ. ಬಡವರಿಗೂ ಸರ್ಕಾರದ ಯೋಜನೆ ತಲುಪಬೇಕೆಂಬ ರಾಹುಲ್ ಗಾಂಧಿ ಅವರ ಆಶಯಕ್ಕೆ ಅನುಗುಣವಾಗಿ ಗ್ಯಾರಂಟಿ ಯೋಜನೆ ರೂಪಿಸಿ ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಶಕ್ತಿ ಯೋಜನೆಯಿಂದಾಗಿ ದಿನಕ್ಕೆ ಕೇವಲ 85 ಲಕ್ಷಷ್ಟಿದ್ದ ಪ್ರಯಾಣಿಕರ ಸಂಖ್ಯೆ 1.16 ಕೋಟಿಗೆ ಹೆಚ್ಚಿದೆ. ಗೃಹಲಕ್ಷ್ಮಿ ಯೋಜನೆಯಿಂದಾಗಿ ಶೇ.85 ರಷ್ಟು ಜನರಿಗೆ ದುಡ್ಡು ಮುಟ್ಟಿಸುವ ಕೆಲಸವಾಗಿದೆ. ಶೇ.94 ರಷ್ಟು ಜನರಿಗೆ ಉಚಿತ ವಿದ್ಯುತ್ ಯೋಜನೆ ಲಾಭ ದೊರೆತಿದೆ ಎಂದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ, ಶಾಸಕ ವಿಠಲ ಕಟಕದೊಂಡ, ಮುಖಂಡರಾದ ಸಂಗಮೇಶ ಬಬಲೇಶ್ವರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts