More

    ಆತಂಕದಲ್ಲಿ ಶೇಂಗಾ ಬೆಳೆಗಾರರು

    ಲಕ್ಷ್ಮೇಶ್ವರ: ಸರ್ಕಾರ ಬೆಂಬಲ ಬೆಲೆಯಡಿ ಶೇಂಗಾ ಖರೀದಿ ಪ್ರಕ್ರಿಯೆ ಆರಂಭಿಸಿದೆಯಾದರೂ ಸಮರ್ಪಕ ಮಾಹಿತಿ ಕೊರತೆಯಿಂದ ರೈತರು ಆತಂಕಕ್ಕೆ ಸಿಲುಕಿದ್ದಾರೆ. ಲಕ್ಷ್ಮೇಶ್ವರ/ಶಿರಹಟ್ಟಿ ತಾಲೂಕಿನಲ್ಲಿ ಮಾಗಡಿ, ರಣತೂರ ಮತ್ತು ಶಿಗ್ಲಿ ಗ್ರಾಮದಲ್ಲಿನ ಎಣ್ಣೆ ಬೀಜ ಬೆಳೆಗಾರರ ಸಂಘದಿಂದ ಖರೀದಿ ಕೇಂದ್ರ ಆರಂಭಿಸಲು ಕೆಒಎಫ್ ಅವಕಾಶ ಕಲ್ಪಿಸಿದೆ. ನೋಂದಣಿಗೆ ಕೇವಲ 10 ದಿನ ಬಾಕಿ ಇರುವುದರಿಂದ ರೈತರು ಅಗತ್ಯ ದಾಖಲೆ ಕ್ರೋಡೀಕರಿಸಲು ಹೆಣಗಾಡುತ್ತಿದ್ದಾರೆ.

    ಫೆ. 4ರಂದು ಗದಗನಲ್ಲಿ ಎಣ್ಣೆ ಬೀಜ ಬೆಳೆಗಾರರ ಸಂಘದ ಸಭೆ ಕರೆದು ಶೇಂಗಾ ಖರೀದಿ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಮಾರ್ಗಸೂಚಿಗಳನ್ನು ತಿಳಿಸಲಾಗಿದೆ. ಫೆ. 16ರವರೆಗೆ ಶೇಂಗಾ ಮಾರಾಟ ಮಾಡಲಿಚ್ಛಿಸುವ ರೈತರ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ತಾಲೂಕಿನ ಶಿಗ್ಲಿಯಲ್ಲಿ ತೆರೆಯಲಾದ ಕೇಂದ್ರದಲ್ಲಿ ಗುರುವಾರದವರೆ 200, ರಣತೂರನಲ್ಲಿ 125 ರೈತರು ನೋಂದಣಿ ಮಾಡಿಸಿದ್ದರೆ, ಮಾಗಡಿ ಗ್ರಾಮದಲ್ಲಿ ಮೊಬೈಲ್ ಆಪ್ ಸಮಸ್ಯೆಯಿಂದಾಗಿ ಇನ್ನೂ ನೋಂದಣಿ ಕಾರ್ಯವೇ ಪ್ರಾರಂಭವಾಗಿಲ್ಲ. ರೈತರು ಆಧಾರ್ ಲಿಂಕ್ ಹೊಂದಿರುವ ಬ್ಯಾಂಕ್ ಪಾಸ್​ಬುಕ್, ಶೇಂಗಾ ಬೆಳೆದ ಖಾತೆ ಉತಾರ, ಐಡಿ ನಂಬರ್​ನೊಂದಿಗೆ ನೋಂದಣಿ ಮಾಡಿಕೊಳ್ಳಬೇಕಾಗಿದೆ.

    ವಿಳಂಬಕ್ಕೆ ಅಸಮಾಧಾನ: ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ನವೆಂಬರ್-ಡಿಸೆಂಬರ್​ನಲ್ಲೇ ಆರಂಭಿಸಿದ್ದರೆ ಹೆಚ್ಚು ರೈತರು ಇದರ ಪ್ರಯೋಜನ ಪಡೆಯಬಹುದಿತ್ತು. ಬೆಂಬಲ ಬೆಲೆ ಖರೀದಿ ಕೇಂದ್ರ ವಿಳಂಬದಿಂದ ಈಗಾಗಲೇ ಅಧಿಕ ರೈತರು ಅನಿವಾರ್ಯವಾಗಿ ಕಡಿಮೆ ದರಕ್ಕೆ ಶೇಂಗಾ ಮಾರಾಟ ಮಾಡಿದ್ದಾರೆ. ಈ ವಿಳಂಬ ನೀತಿಗೆ ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಮಗಾದ ಅನ್ಯಾಯವನ್ನು ಯಾರು ಸರಿಪಡಿಸುತ್ತಾರೆ? ಎಂದು ಪ್ರಶ್ನಿಸುತ್ತಿದ್ದಾರೆ.

    ಹೆಸರು ನೋಂದಣಿಗೆ ಫೆ. 16 ಕೊನೇ ದಿನವಾಗಿದ್ದು, 20 ದಿನಗಳಲ್ಲಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸುವ ಹಿಂದಿನ ಉದ್ದೇಶವಾದರೂ ಏನು? ಶೇಂಗಾ ಖರೀದಿ ಪ್ರಕ್ರಿಯೆಯನ್ನು ಕನಿಷ್ಠ 45 ದಿನಗಳವರೆಗೆ ವಿಸ್ತರಿಸಬೇಕು. ತಾಲೂಕಿನ ಕೇಂದ್ರ ಸ್ಥಳ ಲಕ್ಷೆ್ಮೕಶ್ವರದಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು. ಸಾರಿಗೆ ವೆಚ್ಚದ ಹೊರೆಯನ್ನು ರೈತರ ಮೇಲೆ ವಿಧಿಸಬಾರದು.
    | ಮರಿಗೌಡ್ರ ನಿಂಗನಗೌಡ್ರ, ಪ್ರಕಾಶ ಗೊರವರ, ಶೇಂಗಾ ಬೆಳೆಗಾರರು, ಲಕ್ಷೆ್ಮೕಶ್ವರ

    ನೋಂದಣಿ ಮಾಡಿಸಿದ ರೈತರು ಫೆ. 17ರಿಂದ ಫೆ. 26ರೊಳಗೆ ಶೇಂಗಾ ಮಾರಾಟ ಮಾಡಬೇಕು. ಪ್ರತಿ ಕ್ವಿಂಟಾಲ್​ಗೆ 5,090 ರೂ. ದರ ನಿಗದಿಪಡಿಸಿದ್ದು, ಪ್ರತಿ ಎಕರೆಗೆ 6 ಕ್ವಿಂಟಾಲ್ ಶೇಂಗಾ ಖರೀದಿ ಮಾಡಲಾಗುತ್ತದೆ. ಗರಿಷ್ಠ 2.5 ಎಕರೆಯಲ್ಲಿನ 15 ಕ್ವಿಂಟಾಲ್ ಶೇಂಗಾ ಖರೀದಿಸಲು ನಿಗಮದಿಂದ ನಿಗದಿಪಡಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು.
    | ಜಿ.ಎಚ್. ಪಾಟೀಲ, ಕೆಒಎಫ್ ಜಿಲ್ಲಾ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts