More

    ಆಡಳಿತಾರೂಢರಿಗೆ ಮುಜುಗರ ತಂದ ಸ್ವಪಕ್ಷೀಯರು !

    ಹಳಿಯಾಳ: ಪಟ್ಟಣದಲ್ಲಿನ ಯೋಜನೆಗಳ ವಿಫಲತೆಯ ಕುರಿತು ಸ್ವ ಪಕ್ಷದವರೇ ಧ್ವನಿಯೆತ್ತುವ ಮೂಲಕ ಆಡಳಿತಾರೂಢ ಕಾಂಗ್ರೆಸ್​ಗೆ ಮುಜುಗರ ಉಂಟಾದ ಘಟನೆಗೆ ಬುಧವಾರ ಇಲ್ಲಿನ ಪುರಸಭೆಯ ಸಾಮಾನ್ಯ ಸಭೆ ಸಾಕ್ಷಿಯಾಯಿತು.

    ಸಭೆ ಆರಂಭವಾಗುತ್ತಿದ್ದಂತೆ ನಿರಂತರ ನೀರು ಯೋಜನೆ ವಿಫಲತೆ ಕುರಿತು ಸುರೇಶ ತಳವಾರ ಚರ್ಚೆ ಆರಂಭಿಸಿದರು. ನಿರಂತರ ನೀರು ಯೋಜನೆ ಆರಂಭವಾದಾಗಿನಿಂದ ಒಮ್ಮೆಯೂ ದಿನದ ಇಪ್ಪತ್ನಾಲ್ಕು ಗಂಟೆ ನೀರು ಪೂರೈಕೆಯಾದ ನಿದರ್ಶನಗಳಿಲ್ಲ. ಈಗ ಒಳಚರಂಡಿ ಯೋಜನೆ ಆರಂಭಿಸಿದ್ದೀರಿ ಇದರ ಕಥೆ ಇನ್ನೇನೊ? ಎಂದು ಪ್ರಶ್ನಿಸಿದರು.

    ಮೂವತ್ತು ವರ್ಷಗಳ ಮುಂದಾಲೋಚನೆಯೊಂದಿಗೆ ಆರಂಭವಾಗಿದ್ದ ನಿರಂತರ ಕುಡಿಯುವ ನೀರಿನ ಯೋಜನೆ ಎರಡೇ ವರ್ಷದಲ್ಲಿ ಮಕಾಡೆ ಮಲಗಿದೆ. ಈಗ ಒಳಚರಂಡಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಯೋಜನೆ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು. ಇದಕ್ಕೆ ಮುಂದಿನ ಸಭೆಯಲ್ಲಿ ಉತ್ತರಿಸುವುದಾಗಿ ಹೇಳಿ ಅಧಿಕಾರಿಗಳು ಜಾರಿಕೊಂಡರು.

    ನಗರ ಯೋಜನೆ ಇಲಾಖೆಯಿಂದ ಪರವಾನಿಗೆ ನೀಡುವಲ್ಲಿ ವಿಳಂಭವಾಗುತ್ತಿದೆ ಎಂದು ಆಡಳಿತ ಮತ್ತು ಪ್ರತಿಪಕ್ಷದವರು ಆರೋಪಿಸಿದರು. ಇದಕ್ಕೆ ಸರ್ವರ್ ಸಮಸ್ಯೆ ನೆಪ ನೀಡಿ ಅಧಿಕಾರಿಗಳು ನುಣುಚಿಕೊಂಡರು. ಇದರಿಂದ ಅಸಮಧಾನಗೊಂಡ ಸದಸ್ಯರು ನಗರ ಯೋಜನೆ ಇಲಾಖೆಯ ವಿಳಂಭ ಧೋರಣೆ ಕುರಿತು ಜಿಲ್ಲಾಧಿಕಾರಿ ಗಮನಸೆಳೆಯಲು ಠರಾವು ಪಾಸು ಮಾಡಿದರು.

    ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ: ಸಭೆಯಲ್ಲಿ ಸ್ಥಾಯಿ ಸಮಿತಿ ಚೇರ್ಮನ್ ಆಗಿ ಆಡಳಿತ ಪಕ್ಷದ ಅನಿಲ ಚವ್ಹಾಣ ಅವರನ್ನು ಆಯ್ಕೆ ಮಾಡಲಾಯಿತು.

    ಪುರಸಭಾ ಅಧ್ಯಕ್ಷ ಅಜರ ಬಸರಿಕಟ್ಟಿ, ವಿ.ಪ ಸದಸ್ಯ ಎಸ್.ಎಲ್.ಘೊಟ್ನೇಕರ, ಪುರಸಭೆ ಉಪಾಧ್ಯಕ್ಷೆ ಸುವರ್ಣ ಮಾದರ, ಮುಖ್ಯಾಧಿಕಾರಿ ಕೇಶವ ಚೌಗಲೆ, ಇಂಜಿನಿಯರ್ ಹರೀಶ, ಪರಿಸರ ಇಂಜಿನಿಯರ್ ದರ್ಶಿತಾ, ಕಂದಾಯ ಅಧಿಕಾರಿ ಅಶೋಕ ಸಾಳೆಣ್ಣನವರ ಇದ್ದರು.

    ಉತ್ತರ ಸಿಗುತ್ತಿಲ್ಲ: ಪ್ರತಿಪಕ್ಷ ನಾಯಕ ಉದಯ ಹೂಲಿ ಮಾತನಾಡಿ, ಕೇಳಿದ ಸಾಕಷ್ಟು ಮಾಹಿತಿಗಳಿಗೆ ಉತ್ತರಗಳು ಸಿಗುತ್ತಿಲ್ಲ, ಹೀಗಿರುವಾಗ ಪುರಸಭೆಯಿಂದ ಉತ್ತಮ ಆಡಳಿತದ ನಿರೀಕ್ಷೆ ಹೇಗೆ ಸಾಧ್ಯ ಎಂದರು.

    ಮಳಿಗೆ ಹರಾಜು
    ಸಿಂಡಿಕೇಟ್ ಬ್ಯಾಂಕ್ ಎದುರು ಪುರಸಭೆಯು ನಿರ್ವಿುಸಿರುವ ವಾಣಿಜ್ಯ ಮಳಿಗೆ ಹರಾಜಿನ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರಲ್ಲಿ ತೀವ್ರ ವಾಗ್ವಾದ ನಡೆಯಿತು. ಆಡಳಿತ ಪಕ್ಷದ ಶಂಕರ ಬೆಳಗಾಂವಕರ ಮತ್ತು ಸುರೇಶ ತಳವಾರ ಹಳೆಯ ವಾಣಿಜ್ಯ ಮಳಿಗೆಯಲ್ಲಿದ್ದವರಿಗೇ ಮರಳಿ ಬಾಡಿಗೆಗೆ ನೀಡುವಂತೆ ಪಟ್ಟು ಹಿಡಿದರು. ಅದಕ್ಕೆ ವಿರೋಧಿಸಿದ ಪ್ರತಿಪಕ್ಷ ಸದಸ್ಯ ಸಂತೋಷ ಘಟಕಾಂಬ್ಳೆ ಹಳೆಯ ವಾಣಿಜ್ಯ ಮಳಿಗೆಯಲ್ಲಿದ್ದ ಬಹುತೆಕರು ಬೇರೆಯವರಿಗೆ ಅಂಗಡಿಗಳನ್ನು ಬಾಡಿಗೆ ನೀಡಿದ್ದು, ಅಂಥವರಿಗೆ ನೀಡಬಾರದು, ಬಾಡಿಗೆದಾರರ ಸಮಗ್ರ ಮಾಹಿತಿ ಪಡೆದು ಹರಾಜು ನಡೆಸಬೇಕೆಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts