More

    ಆಗಸ್ಟ್ ನಂತರವೇ ಶಾಲೆಗಳ ಆರಂಭ ಒಳಿತು

    ಶಿವಮೊಗ್ಗ: ಕರೊನಾ ಮುಕ್ತ ಪ್ರದೇಶದಲ್ಲಿ ಶಾಲೆ ಆರಂಭಿಸುವುದು, ಇರುವ ಭಾಗದಲ್ಲಿ ನಂತರ ಶಾಲೆಗಳನ್ನು ತೆರೆಯುವುದು ಮೂರ್ಖತನದ ನಿರ್ಧಾರ. ಸದ್ಯದ ಪರಿಸ್ಥಿತಿಯಲ್ಲಿ ಆಗಸ್ಟ್ ನಂತರವೇ ಶಾಲೆಗಳನ್ನು ಆರಂಭಿಸುವುದು ಒಳಿತು ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟಿದ್ದಾರೆ.

    ವಿವಿಧ ಜಯಂತಿಗಳೂ ಸೇರಿ ಅನೇಕ ಸರ್ಕಾರಿ ರಜೆಗಳಿವೆ. ಆ ದಿನಗಳಲ್ಲಿ ಶಾಲೆಗಳನ್ನು ನಡೆಸಬಹುದು ಎಂದು ಗುರುವಾರ ಪ್ರೆಸ್ಟ್ ಟ್ರಸ್ಟ್ ಆಯೋಜಿಸಿದ್ದ ಸಂವಾದದಲ್ಲಿ ಹೇಳಿದರು.

    ಶಾಲೆಗಳು ತಡವಾಗಿ ಆರಂಭವಾದರೂ ರಜಾ ದಿನಗಳ ಬಳಕೆ, ಪಠ್ಯಕ್ರಮ ಕಡಿತದಂತಹ ಅನೇಕ ಮಾರ್ಗಗಳಿವೆ. ಹೀಗಾಗಿ ವಿದ್ಯಾರ್ಥಿಗಳು, ಪಾಲಕರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದರು.

    ಆನ್​ಲೈನ್ ಶಿಕ್ಷಣ ಬೇಡ ಎನ್ನುವುದಕ್ಕೆ ತಾಂತ್ರಿಕ, ಆರ್ಥಿಕ ಕಾರಣಗಳ ಜತೆಗೆ ಆರೋಗ್ಯದ ಕಾರಣವೂ ಇದೆ. ಆನ್​ಲೈನ್ ಶಿಕ್ಷಣ ವಿದ್ಯಾರ್ಥಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ತಜ್ಞ ವೈದ್ಯರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವಸರದ ನಿರ್ಧಾರ ಕೈಗೊಳ್ಳುವ ಅವಶ್ಯಕತೆಯಿಲ್ಲ ಎಂದರು.

    ಕರೊನಾ ಸಂದರ್ಭದಲ್ಲಿ ಅನೇಕ ಕಾನೂನುಗಳನ್ನು ಬಿಗಿಗೊಳಿಸಲಾಗಿದೆ. ಹೀಗಾಗಿ ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದು, ಬಲವಂತವಾಗಿ ಈ ವರ್ಷದ ಶುಲ್ಕ ಕಟ್ಟಿಸಿಕೊಳ್ಳುವುದನ್ನು ತಡೆಯಲು ಸರ್ಕಾರದ ಬಳಿ ಅವಕಾಶಗಳಿವೆ. ಖಾಸಗಿ ಶಾಲೆಗಳನ್ನು ನಿಯಂತ್ರಿಸಲು ಇದು ಸಕಾಲ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.

    ಲಾಕ್​ಡೌನ್ ಮಾಡಬಹುದು: ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲೇಬೇಕು. ಸ್ವಲ್ಪ ತಡವಾದರೂ ಪರವಾಗಿಲ್ಲ. ಪರೀಕ್ಷೆಯೇ ಇಲ್ಲದ ಶಿಕ್ಷಣ ವ್ಯರ್ಥ. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಬೇಕಿದ್ದರೆ ಪರೀಕ್ಷೆ ದಿನಗಳಂದು ಬೆಳಗ್ಗೆ 7ರಿಂದ ಸಂಜೆ 4ರವರೆಗೆ ಲಾಕ್​ಡೌನ್ ಘೊಷಿಸಿ, ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಎದುರಿಸಲು ಅವಕಾಶ ನೀಡಬಹುದು ಎಂದು ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟರು.

    ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸಮರ್ಥರಿದ್ದಾರೆ. ಶಿಕ್ಷಣ ಇಲಾಖೆಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಅಧ್ಯಯನ ಶೀಲರೂ ಹೌದು. ಬೇರೆಯವರ ಅನಿಸಿಕೆಗಳನ್ನೂ ಕೇಳುವ ವ್ಯವಧಾನ ಅವರಿಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸರಿಯಾದ ರೀತಿಯಲ್ಲಿ ನಡೆಸುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts