More

    ಆಕ್ಸಿಜನ್ ಪೂರೈಕೆಗೆ ಸಿದ್ಧತೆ, ಕೇರಳದಿಂದ ಪೂರೈಕೆ ಶುರು

    ಮಂಗಳೂರು: ದ.ಕ.ಜಿಲ್ಲೆಯಲ್ಲಿ ಸದ್ಯಕ್ಕೆ ಬೇಕಾಗುವಷ್ಟು ಆಕ್ಸಿಜನ್ ಲಭ್ಯವಿದೆ. ತಕ್ಷಣಕ್ಕೆ ಯಾವುದೇ ಸಮಸ್ಯೆ ಇಲ್ಲ. ಇನ್ನಷ್ಟು ಆಕ್ಸಿಜನ್ ಸಿಲಿಂಡರ್‌ಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.

    ಜಿಲ್ಲೆಯ ಎಂಟು ಖಾಸಗಿ ಆಸ್ಪತ್ರೆಗಳ ಪ್ಲಾಂಟ್‌ಗಳಲ್ಲಿ ಆಕ್ಸಿಜನ್ ದಾಸ್ತಾನು ಇದೆ. ಮಂಗಳೂರು ನಗರದಲ್ಲಿ ಮೂರು ರೀಫಿಲ್ಲಿಂಗ್ ಘಟಕಗಳಲ್ಲಿ 10 ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತಿವೆ. ಪ್ರತಿ ವಾರ 20 ಟನ್ ಆಮ್ಲಜನಕವನ್ನು ಹೊರ ಜಿಲ್ಲೆಗಳಿಂದ ತರಿಸಲಾಗುತ್ತಿದೆ. ಹಾಗಾಗಿ ಸದ್ಯದ ಮಟ್ಟಿಗೆ ಜಿಲ್ಲೆಯ ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಲಭ್ಯವಿದೆ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಇನ್ನೂ 800 ಜಂಬೋ ಸಿಲಿಂಡರ್ ಆಕ್ಸಿಜನ್ ಕೇರಳದ ಪಾಲಕ್ಕಾಡ್‌ನಿಂದ ಪೂರೈಕೆಯಾಗಲಿದೆ. ಬಳ್ಳಾರಿಯ ಜಿಂದಾಲ್ ಪ್ಲಾಂಟ್‌ನಿಂದಲೂ ಆಕ್ಸಿಜನ್ ತರಿಸಲಾಗುತ್ತಿದೆ. ನಾಲ್ಕೈದು ದಿನಗಳಿಂದ ಮಂಗಳೂರಿಗೆ ಆಕ್ಸಿಜನ್ ಪೂರೈಕೆಯಾಗಿರಲಿಲ್ಲ. ಸದ್ಯ ಪೂರೈಕೆ ಶುರುವಾಗಿ ಸಮಸ್ಯೆ ಇಲ್ಲ. ಜಿಲ್ಲೆಗೆ ಬೇಕಾಗುವ ಶೇ.80ರಷ್ಟು ಆಕ್ಸಿಜನ್ ಬಳ್ಳಾರಿಯಿಂದ, ಶೇ.20 ಪಾಲಕ್ಕಾಡ್‌ನಿಂದ ಬರುತ್ತಿದೆ ಎಂದರು.

    ಐಸಿಯು ಬೆಡ್‌ಗಳು ಭರ್ತಿ: ಉಡುಪಿ: ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಉಸಿರಾಟ ಸಮಸ್ಯೆ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಮುಂದಿನ 36 ಗಂಟೆಗೆ ಬೇಕಾದಷ್ಟೇ ಆಕ್ಸಿಜನ್ ಲಭ್ಯವಿದೆ. ಆದರೆ, ಎಂದು ಸಮಸ್ಯೆ ಎದುರಿಸಲು ಸಿದ್ಧತೆ ಮಾಡಿಕೊಂಡಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ.
    ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಮತ್ತು ವೆಂಟಿಲೇಟರ್ ಬೆಡ್‌ಗಳು ಕೂಡ ಭರ್ತಿಯಾಗಿದ್ದು, ರೋಗಿಗಳು ಸರ್ಕಾರಿ-ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಗೆ 4 ರಿಂದ 6 ಟನ್ ಆಕ್ಸಿಜನ್ ಅಗತ್ಯವಿದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 6 ಕಿಲೋ ಲೀಟರ್, ಮಣಿಪಾಲ ಕೆಎಂಸಿಯಲ್ಲಿ 20 ಕೆಎಲ್ ಆಕ್ಸಿಝನ್ ಲಿಕ್ವಿಡ್ ಸ್ಟೋರೇಜ್ ಘಟಕವಿದೆ. ಸದ್ಯ ಇರುವ ಆಕಿಜನ್ ಇನ್ನೆರಡು ದಿನಕ್ಕೆ ಸಾಕು.

    ಉಡುಪಿಗೆ ಮಂಗಳೂರಿನಿಂದ ಪೂರೈಕೆಯಾಗುತ್ತಿದೆ. ಮಂಗಳೂರಿನಿಂದ ಆಕ್ಸಿಜನ್ ಬಂದರೆ ನಾಲ್ಕು ದಿನ ನಿರ್ವಹಣೆ ಮಾಡಬಹುದು. ಮಂಗಳೂರಿಗೆ ಕೇರಳದ ಪಾಲಕ್ಕಾಡ್‌ನಿಂದ ಆಕ್ಸಿಜನ್ ಪೂರೈಕೆಯಾಗುತ್ತಿದ್ದು, ಸದ್ಯ ಪೂರೈಕೆಯಲ್ಲಿ ಕೊಂಚ ವ್ಯತ್ಯಯ ವಾಗಿದೆ. ಇದರ ಪರಿಣಾಮ ಮಂಗಳೂರಿನಿಂದ ಉಡುಪಿಗೆ ಆಕ್ಸಿಜನ್ ಪೂರೈಕೆ ವ್ಯತ್ಯಯ ಉಂಟಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳ್ಳಾರಿಯಿಂದಲೂ ಆಕ್ಸಿಜನ್ ತರಿಸಿಕೊಳ್ಳಲು ಪ್ರಯತ್ನ ಮುಂದುವರಿದಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಐಸಿಯು, ವೆಂಟಿಲೇಟರ್ ಬೆಡ್‌ಗಳು ಭರ್ತಿ: ಜಿಲ್ಲೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು, ವೆಂಟಿಲೇಟರ್ ಬೆಡ್‌ಗಳು ಭರ್ತಿಯಾಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ 571 ಬೆಡ್‌ಗಳು ಭರ್ತಿಯಾಗಿವೆ. ಕುಂದಾಪುರ ಸರ್ಕಾರಿ ಆಸ್ಪತ್ರೆ 10 ಐಸಿಯು ಬೆಡ್, ಕಾರ್ಕಳದ 6 ಐಸಿಯು ಬೆಡ್ ಭರ್ತಿಯಾಗಿದ್ದು, 4 ಖಾಲಿ ಇದೆ. 177 ಆಕ್ಸಿಜನ್ ಬೆಡ್, 63 ಐಸಿಯು ಬೆಡ್, 38 ವೆಂಟಿಲೇಟರ್ ಬೆಡ್, ಎಚ್‌ಡಿಯು 36, ಎಚ್‌ಎನ್‌ಸಿ 7 ಬೆಡ್‌ಗಳು ಸೇರಿದಂತೆ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಬೆಡ್‌ಗಳು ಭರ್ತಿಯಾಗಿವೆ.

    ಅಸಹಾಯಕತೆಯಲ್ಲಿ ಕರೊನಾ ರೋಗಿಗಳು: ಕರೊನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಮಾಹಿತಿಗೆ ಕರೆ ಮಾಡಿದರೆ ಕಾಲ್ ಸೆಂಟರ್ ಸರಿಯಾಗಿ ಸ್ಪಂದಿಸುತ್ತಿಲ್ಲ. ಬೆಡ್‌ಗಳು ಭರ್ತಿಯಾಗಿವೆ ಎಂದು ರೋಗಿಗಳ ಸಂಬಂಧಿಕರು ಅಸಹಾಯಕತೆ ತೋಡಿಕೊಂಡಿದ್ದಾರೆ. ಪರಿಸ್ಥಿತಿ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ ಸ್ಥಳೀಯ, ಹುಸೇನ್ ಕೋಡಿಬೇಂಗ್ರೆ, ಗಂಗೊಳ್ಳಿಯ ನಮ್ಮ ಸಂಬಂಧಿಕರಿಗೆ ಸೋಂಕು ದೃಢಪಟ್ಟು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದೆವು. ವೆಂಟಿಲೇಟರ್ ಐಸಿಯು ಇರಲಿಲ್ಲ. ರೋಗಿರ ಸ್ಥಿತಿ ಗಂಭೀರವಾಗಿದೆ, ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ವೈದ್ಯರು ಸಲಹೆ ನೀಡಿದರು. ಆದರೆ ಎಲ್ಲಿಯೂ ಸೌಲಭ್ಯ ಇಲ್ಲ ಎಂದು ತಿಳಿಸಿದರು. ಜಿಲ್ಲಾಸ್ಪತ್ರೆ ಬಳಿ ಸಾಯಂಕಾಲ ಕೋವಿಡ್ ಸೋಂಕಿತ ರೊಬ್ಬರು ಪಾಸಿಟಿವ್ ವರದಿ ಹಿಡಿದು ಬೆಡ್‌ಗಾಗಿ ಪರದಾಡುತ್ತಿದ್ದರು. ಬೆಳಗ್ಗೆ 11 ಗಂಟೆಯಿಂದ ಚಿಕಿತ್ಸೆಗಾಗಿ ಸರ್ಕಾರಿ-ಖಾಸಗಿ ಎಂದು ಅಲೆದಾಡಿದ ಮಹಿಳೆಗೆ ಸಾಯಂಕಾಲ 6 ಗಂಟೆಗೆ ಬೆಡ್ ವ್ಯವಸ್ಥೆ ಮಾಡಲಾಯಿತು.

    ದಿನಕ್ಕೆ ಆಗುವಷ್ಟು ಆಕ್ಸಿಜನ್ ಇದೆ. ಮಂಗಳೂರಿನಿಂದ ಪೂರೈಕೆಯಾದರೆ ನಾಲ್ಕೈದು ದಿನಕ್ಕೆ ಸಾಕು. ಬಳ್ಳಾರಿಯಿಂದ ಆಕ್ಸಿಜನ್ ಪೂರೈಸುವಂತೆ ಜಿಲ್ಲಾಡಳಿತ ಸಹಿತ ಎಲ್ಲ ಶಾಸಕರು ಸೇರಿ ಪ್ರಯತ್ನಿಸುತ್ತಿದ್ದೇವೆ. ಉಸಿರಾಟ ಗಂಭೀರ ಪ್ರಕರಣ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳು ಭರ್ತಿಯಾಗಿವೆ. ಹೆಚ್ಚುವರಿ ಆಕ್ಸಿಜನ್ ಸಹಿತ ಐಸಿಯು, ವೆಂಟಿಲೇಟರ್ ಬೆಡ್‌ಗಳನ್ನು ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗುತ್ತಿದೆ.
    – ಜಿ.ಜಗದೀಶ್, ಜಿಲ್ಲಾಧಿಕಾರಿ. ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts