More

  ಪಶುಸಖಿಯರ ಕೈಲಿದೆ ರಾಸುಗಳ ಆರೋಗ್ಯ   ತರಬೇತಿ ಕಾರ್ಯಾಗಾರದಲ್ಲಿ ಡಾ. ಜಿ.ಕೆ. ಜಯದೇವಪ್ಪ ಹೇಳಿಕೆ

  ದಾವಣಗೆರೆ: ರಾಸುಗಳ ಆರೋಗ್ಯ ವೃದ್ಧಿ ಹಾಗೂ ಜಾನುವಾರುಗಳ ಮಾಲೀಕರ ಆದಾಯ ದ್ವಿಗುಣಗೊಳಿಸುವಲ್ಲಿ ಪಶುಸಖಿಯರ ಪಾತ್ರ ಮಹತ್ವದ್ದಾಗಿದೆ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ. ಜಿ.ಕೆ. ಜಯದೇವಪ್ಪ ಹೇಳಿದರು.
  ಜಿಲ್ಲೆಯ ವಿವಿಧ ತಾಲೂಕಿನ 31 ಪಶು ಸಖಿಯರಿಗೆ ನಗರದ ಪಶುಪಾಲನಾ ಮತ್ತು ವಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಸೋಮವಾರ  ಹಮ್ಮಿಕೊಂಡಿದ್ದ, 17 ದಿನಗಳ ಎ-ಹೆಲ್ಪ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
  ಪಶು ಸಖಿಯರು ಗ್ರಾಪಂ ಮಟ್ಟದಲ್ಲಿ ಕಾರ್ಯ ನಿರ್ವಹಿಸುವರು. ಜಾನುವಾರುಗಳಲ್ಲಿ ಸಮತೋಲನ ಆಹಾರ ನಿರ್ವಹಣೆ, ಪಶು ಆಹಾರದ ಮಹತ್ವ, ಪ್ರಥಮ ಚಿಕಿತ್ಸೆ, ವಿವಿಧ ಲಸಿಕಾ ಅಭಿಯಾನದ ಬಗ್ಗೆ ಜನರಿಗೆ ಮಾಹಿತಿ ನೀಡುವುದು, ರಾಸುಗಳ ಆರೋಗ್ಯ ಹಾಗೂ ಹೈನುಗಾರಿಕೆ ವೃದ್ಧಿಸುವಲ್ಲಿ ಸಕಾಲಿಕ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
  ಪಶು ಸಂಗೋಪನಾ ಮತ್ತು ಸೇವಾ ಇಲಾಖೆಯ ಕಾರ್ಯಕ್ರಮಗಳನ್ನು ಸಮುದಾಯದ ಸದಸ್ಯರಿಗೆ ತಲುಪಿಸುವುದು ಪಶು ವೈದ್ಯರ ಕೆಲಸವಾಗಿದೆ. ರಾಸುಗಳಲ್ಲಿ ಹಾಲಿನ ಇಳುವರಿ ಹೆಚ್ಚಿಸುವುದು, ಕೃತಕ ಗರ್ಭಧಾರಣೆ ಇತ್ಯಾದಿ ಕುರಿತಂತೆ ಪಶು ವೈದ್ಯರ ಸಲಹೆ, ಮಾರ್ಗದರ್ಶನ ಪಡೆದು ಗ್ರಾಮೀಣ ರೈತ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕೆಂದು ಸಲಹೆ ನೀಡಿದರು.
  ಜಿಪಂ ಜಿಲ್ಲಾ ಯೋಜನಾ ವ್ಯವಸ್ಥಾಪಕ ಭೋಜರಾಜ ಮಾತನಾಡಿ ಕೇಂದ್ರ ಸರ್ಕಾರ ಗ್ರಾಮ ಮಟ್ಟದಲ್ಲಿ ಮಹಿಳಾ ಸಬಲೀಕರಣದ ಹಿನ್ನೆಲೆಯಲ್ಲಿ ಪಶು ಸಖಿಯರನ್ನು ಪರಿಚಯಿಸಿದೆ. ಹೀಗಾಗಿ ಅವರು ಎ-ಹೆಲ್ಪ್ ಕಾರ್ಯಕರ್ತೆಯರಾಗಿ ನಿರ್ವಹಿಸಬೇಕಾದ ಕೆಲಸಗಳ ಬಗ್ಗೆ ಗಮನ ಹರಿಸಬೇಕು ಎಂದರು.
  ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಬಿ.ಜಿ.ಗುರುಶಾಂತಪ್ಪ ಮಾತನಾಡಿ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸುವಲ್ಲಿ ಪಶುಸಖಿಗಳ ಕೆಲಸ ಬಹುಮುಖ್ಯವಾಗಿದೆ. ಎರಡನೇ ಬ್ಯಾಚ್‌ನ ತರಬೇತಿಯಲ್ಲಿ ಪಾಲ್ಗೊಂಡಿರುವ  ಎಲ್ಲ ಪಶು ಸಖಿಯರಿಗೂ ಊಟ- ವಸತಿ ಸಹಿತ ತರಬೇತಿ ನೀಡಲಾಗುತ್ತಿದೆ ಎಂದರು.
  ಮಾಸ್ಟರ್ ತರಬೇತಿದಾರರಾದ ಡಾ.ಬಿ.ಕೆ.ಸುಮಂತಕುಮಾರ್ ಹಾಗೂ ಡಾ.ಎಸ್.ಪ್ರಜ್ವಲ್ ಪಶುಸಖಿಯರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು. ಎಸ್‌ಆರ್‌ಎಲ್‌ಎಂನ ಜಿಲ್ಲಾ ವ್ಯವಸ್ಥಾಪಕ ಎನ್.ಬಸವರಾಜ್ ಕಾರ್ಯಕ್ರಮ ನಿರ್ವಹಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts