More

    ಆಂಬುಲೆನ್ಸ್​ಗಾಗಿ ಮೊರೆಯಿಟ್ಟ ಶಂಕಿತ

    ಹುಬ್ಬಳ್ಳಿ: ಕರೊನಾ ಲಕ್ಷಣಗಳು ಕಾಣಿಸಿಕೊಂಡ ಉತ್ತರ ಪ್ರದೇಶ ಮೂಲದ ರೈಲ್ವೆ ಗುತ್ತಿಗೆದಾರನೊಬ್ಬ ಆಂಬುಲೆನ್ಸ್​ಗಾಗಿ ಪರದಾಡಿದ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಲಾಡ್ಜ್ ಒಂದರಲ್ಲಿ ಗುತ್ತಿಗೆದಾರ ನಾಲ್ಕು ತಿಂಗಳಿಂದ ತಂಗಿದ್ದ. ಆರೋಗ್ಯ ಸೇತು ಆಪ್ ಮೂಲಕ ತನಗೆ ಸೋಂಕು ಇರುವ ಸಾಧ್ಯತೆಯನ್ನು ಖಚಿತಪಡಿಸಿಕೊಂಡಿದ್ದ. ತನಗೆ ಕರೊನಾ ಲಕ್ಷಣಗಳು ಇರುವುದನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದ. ತಾನಾಗಿಯೇ ಆಸ್ಪತ್ರೆ ಸೇರಬೇಕೆಂದುಕೊಂಡಿದ್ದರೂ ಆಂಬುಲೆನ್ಸ್ ಬಾರದೆ ತತ್ತರಿಸಿದ್ದ. ಶನಿವಾರ ರಾತ್ರಿಯಿಂದ ಎಲ್ಲ ಅಧಿಕಾರಿಗಳ ಮೊರೆ ಹೋದರೂ ಸ್ಪಂದನೆ ಸಿಕ್ಕಿರಲಿಲ್ಲ.

    ಭಾನುವಾರ ಬೆಳಗ್ಗೆ ಲಾಡ್ಜ್​ನಿಂದ ಹೊರಗೆ ಬಂದು, ಚನ್ನಮ್ಮ ವೃತ್ತದಲ್ಲಿ ನಿಂತಿದ್ದ ಪೊಲೀಸರ ಮುಂದೆ ತನ್ನ ಸಮಸ್ಯೆ ಹೇಳಿಕೊಂಡಿದ್ದ. ಇದನ್ನು ಕೇಳಿದ್ದ ಪೊಲೀಸರು ಹೌಹಾರಿದ್ದರು. ಅಲ್ಲಿಯೇ ಇದ್ದ ಕೆಲವರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು. ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಆಂಬುಲೆನ್ಸ್ ಕಳುಹಿಸಿಕೊಟ್ಟ ಬಳಿಕ ಆತನನ್ನು ಸಂಜೀವಿನಿ ಆಯುರ್ವೆದ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

    ಒಂದರ ಹಿಂದೊಂದು: ಶನಿವಾರದಿಂದಲೇ ಆಂಬುಲೆನ್ಸ್​ಗಾಗಿ ಮೊರೆ ಇಟ್ಟಿದ್ದರೂ ಕ್ಯಾರೆ ಅಂದಿರಲಿಲ್ಲ. ಆದರೆ ಜಿಲ್ಲಾಧಿಕಾರಿ ಸೂಚನೆ ನೀಡುತ್ತಿದ್ದಂತೆ ಒಂದರ ಹಿಂದೆ ಮತ್ತೊಂದರಂತೆ ಮೂರು ಆಂಬುಲೆನ್ಸ್ ಬಂದು ಸಾಲುಗಟ್ಟಿ ನಿಂತಿದ್ದವು. ಒಂದು ಆಂಬುಲೆನ್ಸ್​ನಲ್ಲಿ ಸೋಂಕಿತ ವ್ಯಕ್ತಿಯನ್ನು ಕರೆದೊಯ್ಯಲಾಯಿತು ಎಂಬ ಮಾಹಿತಿ ಸಿಗುತ್ತಿದ್ದಂತೆ ಉಳಿದ ಆಂಬುಲೆನ್ಸ್​ಗಳು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸಾದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts