More

    ಅವಧಿಯೊಳಗೆ ಸಾಲ ವಸೂಲಿ ಮಾಡಿ; ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿಸಿ ಬ್ಯಾಂಕ್​ ಸಿಬ್ಬಂದಿಗೆ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸೂಚನೆ

     

    ಕೋಲಾರ: ಬ್ಯಾಂಕ್​ ಸಿಬ್ಬಂದಿಯಲ್ಲಿ ಇಚ್ಛಾಶಕ್ತಿ, ಬದ್ಧತೆ ಮೂಡಬೇಕು. ಕಾಲಮಿತಿಯೊಳಗೆ ಠೇವಣಿ ಸಂಗ್ರಹ, ಸಾಲ ವಸೂಲಿಗೆ ನೀಡಿರುವ ಗುರಿ ಸಾಧಿಸಬೇಕು ಎಂದು ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ ನೀಡಿದರು.

    ನಗರದ ಜಿಲ್ಲಾ ಸಹಕಾರಿ ಯೂನಿಯನ್​ ಸಭಾಂಗಣದಲ್ಲಿ ಇ&-ಶಕ್ತಿ ಅನುಷ್ಠಾನ, ಠೇವಣಿ ಸಂಗ್ರಹ, ಸಾಲ ವಸೂಲಾತಿಯಲ್ಲಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಡಿಸಿಸಿ ಬ್ಯಾಂಕ್​ಗೆ ನಬಾರ್ಡ್​ 440 ಕೋಟಿ ರೂ.ಗಳ ಠೇವಣಿ ಸಂಗ್ರಹದ ಗುರಿ ನೀಡಿದೆ. ಈ ಗುರಿ ಸಾಧಿಸಿದರೆ ಮಾತ್ರವೇ ನಾವು 2 ಜಿಲ್ಲೆಗಳಲ್ಲಿ ಮಹಿಳೆಯರು, ರೈತರ ನಿರೀಕ್ಷೆಗೆ ತಕ್ಕಂತೆ ಸಾಲ ಸೌಲಭ್ಯ ಒದಗಿಸಲು ಸಾಧ್ಯ ಎಂಬ ಸತ್ಯ ಅರಿತು ಕೆಲಸ ನಿರ್ವಹಿಸಿ ಎಂದು ತಾಕೀತು ಮಾಡಿದರು.

    ಮಹಿಳೆಯರು ಬ್ಯಾಂಕಿನ ಆಧಾರ ಸ್ತಂಭವಾಗಿದ್ದಾರೆ. ಅವರ ನಿರೀಕ್ಷೆಗಳನ್ನು ಹುಸಿ ಮಾಡಿದರೆ ನಿಮಗೆ ಒಳ್ಳೆಯದಾಗುವುದಿಲ್ಲ. ಸಾಲ ಮರು ಪಾವತಿಸುವ ಮಹಿಳಾ ಸಂಘಗಳಿಗೆ ತಕ್ಷಣ ಸಾಲ ಒದಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಠೇವಣಿ ಸಂಗ್ರಹವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ತೊಂದರೆಗೆ ಸಿಲುಕಬೇಕಾಗುತ್ತದೆ. ಇಡೀ ನಿಮ್ಮ ಕುಟುಂಗಳ ಪೋಷಣೆಯನ್ನು ಬ್ಯಾಂಕ್​ ಮಾಡುತ್ತಿದೆ. ಹೀಗಾಗಿ ಬ್ಯಾಂಕ್​ ಋಣ ತೀರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

    ಸಾಲಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಮರುಪಾವತಿಸುವ ಸಾಮರ್ಥ್ಯ ಅರಿತು ಶಿಫಾರಸ್ಸು ಮಾಡಿದ್ದೀರಿ. ಸಾಲ ವಿತರಣೆಯಲ್ಲಿ ತಡವಾದರೆ ತಕ್ಷಣ ಒತ್ತಡ ತಂದು ಸಾಲ ಮಂಜೂರು ಮಾಡಿಸಿದ್ದೀರಿ. ಆದರೆ ವಸೂಲಿಯಲ್ಲಿ ಮೈಗಳ್ಳತನ ಏಕೆ? ಹೀಗಾದರೆ ವೇತನ ಕಡಿತ ಮಾಡಬೇಕಾದೀತು ಎಂದು ಎಚ್ಚರಿಸಿದರು.

    ರೈತರು, ಉಳ್ಳವರನ್ನು ಭೇಟಿ ಮಾಡಿ ಬ್ಯಾಂಕಿನಿಂದ ಸಿಗುವ ಬಡ್ಡಿ ಪ್ರಮಾಣ ಮತ್ತಿತರ ಅಂಶಗಳನ್ನು ತಿಳಿಸಿದರೆ ಜನ ಠೇವಣಿ ಇಡುತ್ತಾರೆ. ಠೇವಣಿ ವಿಚಾರದಲ್ಲಿ ಗಂಭೀರವಾಗಿ ಕೆಲಸ ಮಾಡಿ. ಪ್ರತಿ ಶಾಖೆಯವರು 10 ಕೋಟಿ ರೂ. ಗುರಿ ಹಾಕಿಕೊಳ್ಳಬೇಕು, ಬರಿ ಭರವಸೆಗಳು ನನಗೆ ಬೇಕಾಗಿಲ್ಲ ಎಂದರು.

    ಕೊಟ್ಟಿರುವ ಸಾಲವನ್ನು ನೂರರಷ್ಟು ವಸೂಲಿ ಮಾಡಿ. ನಬಾರ್ಡ್​ ಅಧಿಕಾರಿಗಳು ಆಗಮಿಸುತ್ತಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಲೆಕ್ಕ ಪರಿಶೋಧನೆ ವರದಿ ಸಲ್ಲಿಸಬೇಕು. ಜು 9ರೊಳಗೆ ಬಾಕಿ ಸಾಲ ವಸೂಲಿಯಾಗಬೇಕು. ಎನ್​ಪಿಎ ಕಡಿಮೆ ಮಾಡಬೇಕು ಎಂದರು.

    ವಿ-ಸಾಫ್ಟ್​ ಸಿಬ್ಬಂದಿ ಇ-ಶಕ್ತಿ ಅಳವಡಿಕೆ, ಗಣಕೀಕರಣ ಕಾರ್ಯವನ್ನು ಶೀಘ್ರ ಮುಗಿಸಲು ತಾಕೀತು ಮಾಡಿದ ಅವರು, ನಿಮಗೆ ವಹಿಸಿದ ಕೆಲಸವನ್ನು ಕಾಲಮಿತಿಯಲ್ಲಿ ಮುಗಿಸಿಕೊಡಿ, ಗೊಂದಲಗಳಿದ್ದರೆ ನಿವಾರಿಸಿ ಎಂದು ಸೂಚಿಸಿದರು.
    ಎಜಿಎಂಗಳಾದ ಶಿವಕುಮಾರ್​, ಖಲೀಮುಲ್ಲಾ, ಬಾಲಾಜಿ, ಅರುಣ್​ಕುಮಾರ್​, ಭಾನು ಪ್ರಕಾಶ್​, ಲಿಂಗರಾಜು, ವಿ-ಸಾಫ್ಟ್​ನ ಫರ್ನಾಂಡೀಸ್​, ನಾಗೇಶ್​, ಸಚಿನ್​, ನಾಗರಾಜ್​ ಮತ್ತಿತರರಿದ್ದರು.

    ಬ್ಯಾಂಕ್​ ವಿಚಾರದಲ್ಲಿ ಎಷ್ಟೇ ಗಂಭೀರವಾಗಿ ಕೆಲಸ ಮಾಡಿದರೂ, ನಿಮ್ಮ ರ್ನಿಲಕ್ಷ್ಯ ಧೋರಣೆಯನ್ನು ಕಟು ಮಾತುಗಳಲ್ಲಿ ಟೀಕಿಸುವುದರಿಂದ ನನಗೇನು ಕಿರೀಟ ಬರೋದಿಲ್ಲ. ಬ್ಯಾಂಕ್​ ಉಳಿಸಬೇಕು ಎಂಬುದು ಮಾತ್ರ ನನ್ನ ಧ್ಯೇಯವಾಗಿದೆ. ದಿವಾಳಿಯಾಗಿ, ಜನರ ಮನದಿಂದ ದೂರವಾಗಿದ್ದ ಬ್ಯಾಂಕ್​ ಇಂದು ಉನ್ನತಿ ಸಾಧಿಸಲು ಆ ಧ್ಯೇಯವೇ ಕಾರಣ. ಜನರು ನಂಬಿಕೆಯಿಂದ ಇತ್ತ ನೋಡುವಂತಾಗಿದೆ.
    | ಬ್ಯಾಲಹಳ್ಳಿ ಗೋವಿಂದಗೌಡ, ಅಧ್ಯಕ್ಷರು, ಡಿಸಿಸಿ ಬ್ಯಾಂಕ್​, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts