More

    ಅರೆಹೊಟ್ಟೆಯಲ್ಲೇ ಪಾಠ ಕೇಳುವ ಮಕ್ಕಳು

    ಬೂದಿಕೋಟೆ: ಸರ್ಕಾರವು ಶಾಲೆಗಳನ್ನು ಆರಂಭಿಸಿ ಮೂರು ತಿಂಗಳ ಮೇಲಾಗಿದ್ದು, ವಿದ್ಯಾರ್ಥಿಗಳಿಗೆ ಬಿಸಿಯೂಟ ಆರಂಭಿಸದ ಕಾರಣ ಅರೆಹೊಟ್ಟೆಯಲ್ಲೇ ಪಾಠ ಆಲಿಸುವಂತಾಗಿದೆ.

    ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ 6ರಿಂದ 10ನೇ ತರಗತಿವರೆಗಿನ ಶಾಲೆಗಳು ಹಾಗೂ ಕಾಲೇಜುಗಳು ಆರಂಭವಾಗಿದೆ. ಸರಿಯಾದ ಬಸ್ ಸಂಪರ್ಕ ಇಲ್ಲದಿದ್ದರೂ ದೂರದ ಗ್ರಾಮಗಳಿಂದ ಮಕ್ಕಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ಹಾಜರಾಗುತ್ತಿದ್ದಾರೆ. ಕರೊನಾದಿಂದಾಗಿ ಮಧ್ಯಾಹ್ನದ ಬಿಸಿಯೂಟ ಸ್ಥಗಿತಗೊಳಿಸಿರುವ ಕಾರಣ ಮಕ್ಕಳು ಮನೆಯಿಂದಲೇ ಊಟ ತರಬೇಕಾಗಿದೆ. ಊಟ ತರಲು ಸಾಧ್ಯವಾಗದ ಕೆಲ ವಿದ್ಯಾರ್ಥಿಗಳು ಹಸಿದ ಹೊಟ್ಟೆಯಲ್ಲೇ ಪಾಠ ಕೇಳುವಂತಾಗಿದೆ.

    ಊಟ ಕೆಡುತ್ತಿದೆ: ಬೆಳಗ್ಗೆ 8 ಗಂಟೆಗೆ ಮನೆ ಬಿಡುವ ವಿದ್ಯಾರ್ಥಿಗಳು ರಾತ್ರಿ ಮಾಡಿದ ಅನ್ನ ಅಥವಾ ಮುದ್ದೆ ತಿಂದು ಬರಬೇಕಾದ ಪರಿಸ್ಥಿತಿ ಇದೆ. ಮನೆಯಲ್ಲಿ ಮಾಡಿದ ಮುದ್ದೆಯನ್ನು ಶಾಲೆಗೆ ತರಲು ಮುಜುಗರ ಒಂದು ಕಡೆಯಾದರೆ, ಊಟ ತಂದರೂ ಬಿಸಿಲಿನ ತಾಪಕ್ಕೆ ಊಟ ಕೆಡುತ್ತಿದ್ದು, ತಿನ್ನಲು ಸಾಧ್ಯವಾಗದೆ ಬಿಸಾಡುವಂತಾಗಿದೆ. ಮಧ್ಯಾಹ್ನ ಊಟವಿಲ್ಲದೆ ಸಂಜೆ ಮನೆಗೆ ವಾಪಸ್ ನಾಲ್ಕೈದು ಕಿಮೀ ನಡೆದುಕೊಂಡು ಹೋಗಲು ವಿದ್ಯಾರ್ಥಿಗಳು ಕಷ್ಟಪಡುತ್ತಿದ್ದಾರೆೆ.

    ಹೆಚ್ಚಿದ ಹೊರೆ: ಶಾಲೆಯಲ್ಲಿ ಬಿಸಿಯೂಟ ಇಲ್ಲದ ಕಾರಣ ಮನೆಯಿಂದ ಊಟ ಮತ್ತು ನೀರು ತರಬೇಕಿದೆ. ಶಾಲಾ ಪಠ್ಯ ಪುಸ್ತಕಗಳು ತುಂಬಿದ ತೂಕದ ಬ್ಯಾಗ್ ಹೊತ್ತು ನಡೆದು ಬರುವುದೇ ಕಷ್ಟವಾಗಿದೆ. ಈಗ ಊಟದ ಡಬ್ಬ ಹಾಗೂ ನೀರಿನ ಬಾಟಲ್ ಇನ್ನಷ್ಟು ಹೊರೆ ಹೆಚ್ಚಿಸಿದೆ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ಹೆಚ್ಚುವರಿ ತರಗತಿಗಳು: ಶಾಲೆಗೆ ಮಧ್ಯಾಹ್ನದ ಊಟದ ಡಬ್ಬಿ ತರದ ಹಾಗೂ ತಂದಂತಹ ಮಕ್ಕಳು ಹಂಚಿಕೊಂಡು ತಿನ್ನುತ್ತಿದ್ದು, ಯಾರಿಗೂ ಹೊಟ್ಟೆ ತುಂಬುತ್ತಿಲ್ಲ. ಇನ್ನು 10ನೇ ತರಗತಿ ಮಕ್ಕಳಿಗೆ ಬೆಳಗ್ಗೆ ಮತ್ತು ಸಂಜೆ ಒಟ್ಟು 2 ಗಂಟೆ ಹೆಚ್ಚುವರಿ ತರಗತಿ ನಡೆಸುತ್ತಿರುವ ಕಾರಣ ಅರ್ಧ ಹೊಟ್ಟೆಯಲ್ಲಿ ಪಾಠ ಕೇಳಲು ಆಸಕ್ತಿ ಇಲ್ಲದಂತಾಗಿದೆ. ಶಾಲೆಗಳಲ್ಲಿ ಬಿಸಿಯೂಟ ಇಲ್ಲದ ಕಾರಣ ಅಡುಗೆ ತಯಾರಿಸುವ ಸಿಬ್ಬಂದಿ ಪೈಕಿ ಕೆಲವರು ಶಾಲೆಗಳಿಗೆ ಹಾಜರಾಗಿ ಶಾಲೆಯ ಇತರ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಉಳಿದ ಸಿಬ್ಬಂದಿ ಶಾಲೆಗಳಿಗೆ ಹಾಜರಾಗದೆ ಇದ್ದರೂ ಸಂಬಳ ಮಾತ್ರ ಕೈ ಸೇರುತ್ತಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ.

    ಕರೊನಾ ಕಾರಣದಿಂದ ನಿರ್ಬಂಧ ಹೇರಲಾಗಿದ್ದ ಮದುವೆಗಳು, ಹೋಟೆಲ್, ಬಸ್ ಪ್ರಮಾಣ, ಸಂತೆ ಸೇರುವುದು ಸೇರಿ ಬಹುತೇಕ ಕಾರ್ಯಕ್ರಮಗಳು ಸರಾಗವಾಗಿ ನಡೆಯುತ್ತಿದ್ದು, ಯಾವುದಕ್ಕೂ ನಿರ್ಬಂಧವಿಲ್ಲ. ಶಾಲೆಗಳ ಆರಂಭಕ್ಕೆ ಹಾಕಿದ್ದ ನಿರ್ಬಂಧ ತೆಗೆದು, ಶಾಲಾ-ಕಾಲೇಜುಗಳನ್ನು ಆರಂಭಿಸಿರುವುದು ಸಂತಸದ ವಿಷಯ. ಅಂತೆಯೇ ಬಿಸಿಯೂಟ ಪ್ರಾರಂಭಿಸಿದರೆ ಪೂರ್ಣ ಮನಸ್ಸಿನಿಂದ ವಿದ್ಯಾಭ್ಯಾಸದ ಕಡೆ ಮಕ್ಕಳು ಗಮನಹರಿಸಲು ಸಾಧ್ಯವಾಗುತ್ತದೆ ಎಂಬುದು ಪಾಲಕರ ಹಾಗೂ ಮಕ್ಕಳ ಅಭಿಪ್ರಾಯ.

    ಬೆಳಗ್ಗೆ ಬೇಗ ಮನೆ ಬಿಡುವ ಕಾರಣ ಅಷ್ಟೊತ್ತಿಗೆ ಅಡುಗೆ ಆಗಿರುವುದಿಲ್ಲ. ಶಾಲೆಗೆ ತಡವಾಗುತ್ತದೆ ಎಂದು ರಾತ್ರಿ ಮಾಡಿದ ಅಡುಗೆಯನ್ನೇ ತಿಂದು ಅದನ್ನೇ ಶಾಲೆಗೆ ತರುತ್ತಿದ್ದೇವೆ. ಕೆಲವೊಮ್ಮೆ ಅದು ಕೆಡುತ್ತಿದೆ. ಮಧ್ಯಾಹ್ನ ಸರಿಯಾಗಿ ಊಟವಿಲ್ಲದೆ ಪಾಠದ ಕಡೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಬೇಗ ಬಿಸಿಯೂಟ ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
    ಸಿಂಚನಾ, 9ನೇ ತರಗತಿ ವಿದ್ಯಾರ್ಥಿ, ಕೆಪಿಎಸ್ ಶಾಲೆ ಬೂದಿಕೋಟೆ

    ಕರೊನಾ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭಿಸಲು ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದರೆ ಮಾತ್ರ ಬಿಸಿಯೂಟ ಆರಂಭಿಸುತ್ತೇವೆ.
    ಬಿ.ಪಿ.ಕೆಂಪಯ್ಯ, ಬಿಇಒ ಬಂಗಾರಪೇಟೆ

    ಗ್ರಾಮೀಣ ಮಕ್ಕಳ ಮನೆಗಳಲ್ಲಿ ಪರಿಸ್ಥಿತಿ ಹೇಗಿರುತ್ತದೋ ಗೊತ್ತಿಲ್ಲದ ಕಾರಣ ಹಲವು ಮಕ್ಕಳು ಊಟ ತರುವುದಿಲ್ಲ. ಊಟವಿಲ್ಲದೆ ಮಕ್ಕಳು ಪಾಠಗಳ ಕಡೆ ಗಮನ ಹರಿಸಲು ಕಷ್ಟವಾಗುತ್ತಿದೆ. ಆದಷ್ಟು ಬೇಗ ಬಿಸಿಯೂಟ ಆರಂಭಿಸಿದರೆ ಉತ್ತಮ.
    ಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts