More

    ಅರಸೀಕೆರೆಯಲ್ಲಿ ಉತ್ತಮ ಪ್ರತಿಕ್ರಿಯೆ

    ಅರಸೀಕೆರೆ: ಪ್ರಜಾಪ್ರಭುತ್ವದ ಹಬ್ಬವೆಂದೇ ಕರೆಯುವ ವಿಧಾನಸಭಾ ಚುನಾವಣಾ ಮತದಾನಕ್ಕೆ ಬುಧವಾರ ತಾಲೂಕಿನ ಗಂಡಸಿ, ಬಾಣಾವರ, ಕಣಕಟ್ಟೆ, ಕಸಬಾ ಹಾಗೂ ನಗರ ಸೇರಿ ತಾಲೂಕಿನ ಒಟ್ಟು 276 ಮತಗಟ್ಟೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುತೇಕ ಎಲ್ಲೆಡೆ ಶಾಂತಿಯುತ ಮತದಾನ ನಡೆಯಿತು.

    ನಿಗದಿಯಂತೆ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿತ್ತು. ಮತದಾರರು ಹುರುಪಿನಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುತ್ತಿದ್ದ ದೃಶ್ಯ ಕಂಡುಬಂತು. ಆರಂಭದಲ್ಲಿ ಕೊಂಚ ನಿಧಾನವಾಗಿದ್ದರೆ ಮಧ್ಯಾಹ್ನದ ವೇಳೆಗೆ ಚುರುಕು ಪಡೆದಿದ್ದು ಸಂಜೆ ವೇಳೆಗೆ ಬಿರುಸುಗೊಂಡಿತ್ತು. ಇದೇ ಮೊದಲ ಬಾರಿಗೆ ಮತದಾನ ಮಾಡಲು ಅವಕಾಶ ಪಡೆದಿದ್ದ ಯುವಕ-ಯುವತಿಯರು ಉತ್ಸಾಹದಿಂದ ಹಕ್ಕು ಚಲಾಯಿಸಿದರು. ಜೆಡಿಎಸ್ ಅಭ್ಯರ್ಥಿ ಎನ್.ಆರ್.ಸಂತೋಷ್ ವಿವೇಕಾನಂದ ಬಿ.ಇಡಿ ಕಾಲೇಜಿನಲ್ಲಿ ಪತ್ನಿ ಹಾಗೂ ಕುಟುಂಬ ಸಹಿತ ಆಗಮಿಸಿ ಮತದಾನ ಮಾಡಿದರು.

    ಮತ್ತೊಂದೆಡೆ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಶಿವಲಿಂಗೇಗೌಡ ಮಾರುತಿನಗರ ಬಡಾವಣೆಯಲ್ಲಿರುವ ಸರ್ಕಾರಿ ಬಾಲಕರ ಪಪೂ ಕಾಲೇಜು ಹಾಗೂ ಬಿಜೆಪಿ ಅಭ್ಯರ್ಥಿ ಜಿವಿಟಿ ಬಸವರಾಜು ಗಂಜಿಗೆರೆ ಗ್ರಾಮದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ಮತಗಟ್ಟೆಯಲ್ಲಿ ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ, ಕೋಳಗುಂದ ಗ್ರಾಮದ ಮತಗಟ್ಟೆಯಲ್ಲಿ ಶ್ರೀ ಜಯಚಂದ್ರಶೇಖರ ಸ್ವಾಮೀಜಿ, ಡಿ.ಎಂ.ಕುರ್ಕೆ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

    ಮಾಜಿ ಶಾಸಕರಾದ ಕೆ.ಪಿ.ಪ್ರಭುಕುಮಾರ್, ಜಿ.ಎಸ್.ಪರಮೇಶ್ವರಪ್ಪ, ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಮತದಾನ ಮಾಡಿದ ಪ್ರಮುಖರು. ಮಾಲೇಕಲ್ ತಿರುಪತಿ ಮತಗಟ್ಟೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು ಸಕಾಲಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts