More

    ಅರಣ್ಯ ಭೂಮಿಯಲ್ಲಿ ಹಣ್ಣಿನ ಸಸಿ ನಾಟಿ

    ಶಿರಸಿ: ತೋಟ ಪಟ್ಟಿಗಳ ಸುತ್ತಮುತ್ತಲ ಅರಣ್ಯ ಭೂಮಿಯಲ್ಲಿ ವೈವಿಧ್ಯಮಯ ಹಣ್ಣಿನ ಗಿಡಗಳನ್ನು ನಾಟಿ ಮಾಡುವ ಮೂಲಕ ವನ್ಯಜೀವಿಗಳ ಕಾಟ ತಪ್ಪಿಸುವ ಜತೆಗೆ ಅರಣ್ಯಾಭಿವೃದ್ಧಿಗೆ ಕೆನರಾ ಅರಣ್ಯ ವೃತ್ತದ ಹಲವು ಗ್ರಾಮ ಅರಣ್ಯ ಸಮಿತಿಗಳು ಮುಂದಾಗಿವೆ.

    ಕೆನರಾ ಅರಣ್ಯ ವೃತ್ತದಲ್ಲಿ 636 ಗ್ರಾಮ ಅರಣ್ಯ ಸಮಿತಿಗಳಿವೆ. ಅವುಗಳಲ್ಲಿ 100ಕ್ಕೂ ಹೆಚ್ಚು ಸಮಿತಿಗಳು ಹಣ್ಣಿನ ಗಿಡಗಳ ನಾಟಿಗೆ ಮುಂದಾಗಿವೆ. ಗ್ರಾಮದ ಖಾಲಿ ಅರಣ್ಯ ಜಾಗದಲ್ಲಿ ಹಲವು ಬಗೆಯ ಹಣ್ಣಿನ ಗಿಡಗಳನ್ನು ನಾಟಿ ಮಾಡಿದರೆ ಆಹಾರ ಅರಸಿ ತೋಟಗಳಿಗೆ ಬರುವ ಮಂಗ, ಅಳಿಲು ಹಾಗೂ ಇತರ ಪ್ರಾಣಿಗಳನ್ನು ತಡೆಯುವ ಮುಂದಾಲೋಚನೆಯಿಂದ ಈ ಕ್ರಮ ವಹಿಸಲಾಗಿದೆ.

    ವಿದ್ಯುತ್ ಬೇಲಿಗಳು ವನ್ಯಜೀವಿಗಳಿಂದ ಬೆಳೆಹಾನಿ ತಡೆಯಲು ವಿಫಲವಾಗಿರುವುದನ್ನು ಅಧ್ಯಯನಗಳು ಸಾದರಪಡಿಸಿವೆ. ಇವುಗಳು ದುಬಾರಿ ಹಾಗೂ ಈ ಬೇಲಿಗಳ ನಿರ್ವಹಣೆಯನ್ನು ಕ್ರಮಬದ್ಧವಾಗಿ ಸಂಭಾಳಿಸಬೇಕು. ಈ ಶಿಸ್ತು ಖಾಸಗಿ ಹಾಗೂ ಸರ್ಕಾರಿ ವ್ಯವಸ್ಥೆಯಿಂದ ಆಗಲಿಲ್ಲ. ಹೀಗಾಗಿ ನೈಸರ್ಗಿಕ ಹಣ್ಣಿನ ಬೇಲಿ ನಿರ್ಮಾಣ ಮಾದರಿ ಸೂಕ್ತವಾಗಿದೆ. ಇದರಿಂದ ತೋಟಪಟ್ಟಿಗಳಿಗೆ ವನ್ಯಜೀವಿಗಳು ದಾಳಿ ಮಾಡುವುದನ್ನು ಭಾಗಶಃ ತಪ್ಪಿಸಬಹುದು ಎಂಬುದು ಪರಿಸರ ತಜ್ಞರ ಅಭಿಪ್ರಾಯ.

    ವಿವಿಧ ಜಾತಿಯ ಹಣ್ಣಿನ ಗಿಡಗಳು: ವೃತ್ತ ವ್ಯಾಪ್ತಿಯಲ್ಲಿ ಅಂದಾಜು 250 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಣ್ಣಿನ ಗಿಡಗಳ ನಾಟಿಗೆ ಚಿಂತನೆ ನಡೆಸಲಾಗಿದೆ. ಪ್ರತಿ ಗ್ರಾಮ ಅರಣ್ಯ ಸಮಿತಿಗಳು ಆಯಾ ಸಮಿತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಅರಣ್ಯ ಭೂಮಿ ಆಧಾರದ ಮೇಲೆ ಕನಿಷ್ಠ 1 ಎಕರೆಯಿಂದ ಆಧರಿಸಿ 5 ಎಕರೆವರೆಗೆ ನಾಟಿ ಮಾಡಲಿವೆ. ಪ್ರತಿ ಎಕರೆಗೆ ಸರಾಸರಿ 100 ಗಿಡಗಳಂತೆ ಅಂದಾಜು 15 ಸಾವಿರಕ್ಕೂ ಹೆಚ್ಚು ಹಣ್ಣಿನ ಗಿಡಗಳು ಗ್ರಾಮ ಅರಣ್ಯ ಸಮಿತಿಯವರ ಕೈ ಸೇರಿವೆ. ಈಗಾಗಲೇ ಕಾನಮೂಲೆ, ಕಾಗೇರಿ ಭಾಗದಲ್ಲಿ ಹಣ್ಣಿ ಗಿಡ ನಾಟಿಗೆ ಚಾಲನೆ ನೀಡಲಾಗಿದೆ. ಸೀತಾಫಲ, ಪೇರಲ, ಮುರುಗಲು, ಮಾವು ಸೇರಿ 15ಕ್ಕೂ ಹೆಚ್ಚು ಬಗೆಯ ಹಣ್ಣಿನ ಗಿಡಗಳು ಮಳೆಗಾಲದಲ್ಲಿ ವಿವಿಧೆಡೆ ನಾಟಿಯಾಗಲಿವೆ.

    ಅರಣ್ಯ ಪ್ರದೇಶ ಕ್ಷೀಣಿಸುತ್ತಿರುವ ಕಾರಣ ರೈತರ ತೋಟಗಳಿಗೆ ಕಾಡು ಪ್ರಾಣಿಗಳು ದಾಳಿ ಮಾಡಿ ಹಾನಿ ಮಾಡುತ್ತಿವೆ. ಇದು ಮಾನವ ಹಾಗೂ ವನ್ಯಜೀವಿ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು ತಪ್ಪಿಸಲು ವನ್ಯಜೀವಿಗಳಿಗೆ ಆಹಾರ ನೀಡುವ ಹಣ್ಣುಗಳ ಗಿಡ ಬೆಳೆಸುವುದು ಉತ್ತಮ ಮಾರ್ಗ. ಹಣ್ಣಿನ ಗಿಡ ನೆಡುವುದರಿಂದ ಹಸಿರೀಕರಣ ಹೆಚ್ಚುವ ಜತೆ ವನ್ಯಜೀವಿಗಳಿಗೆ ಆಹಾರ ಲಭಿಸಿ ಕೃಷಿ ಜಮೀನುಗಳಿಗೆ ನುಗ್ಗುವುದು ಕಡಿಮೆ ಆಗುತ್ತದೆ.
    | ಪರಮೇಶ್ವರ ಹೆಗಡೆ ಕಾಗೇರಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ

    ಪ್ರತಿ ವರ್ಷ ಕೆನರಾ ಅರಣ್ಯ ವೃತ್ತದಲ್ಲಿ ವನ್ಯಜೀವಿ ಹಾವಳಿಯಿಂದ ರೈತರು ನಲುಗುತ್ತಿದ್ದಾರೆ. ಹೀಗಾಗಿ ತೋಟಗಳ ಬಳಿಯ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರೆ ಈ ಹಾವಳಿ ನಿಯಂತ್ರಿಸಲು ಅನುಕೂಲವಾಗುತ್ತದೆ. ಹಣ್ಣಿನ ಗಿಡಗಳ ನಾಟಿಯ ನಿರಂತರ ಪ್ರಕ್ರಿಯೆಯಿಂದ ವನ್ಯಜೀವಿ- ಮಾನವ ಸಂಘರ್ಷ ತಪ್ಪಿಸಬಹುದು. ಜತೆಗೆ ಉತ್ತಮ ಜಾತಿಯ ಹಣ್ಣಿನ ಗಿಡಗಳನ್ನು ನಾಟಿ ಮಾಡಿದರೆ ಗ್ರಾಮ ಅರಣ್ಯ ಸಮಿತಿಗಳೂ ಆದಾಯ ಮಾಡಿಕೊಳ್ಳಬಹುದು.
    | ಎಸ್.ಜಿ. ಹೆಗಡೆ ಡಿಎಫ್​ಒ ಶಿರಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts