More

    ಅರಣ್ಯ ಇಲಾಖೆ ನರ್ಸರಿಯ ಸಸಿಗಳ ಬೆಲೆ ಇಳಿಕೆ

    ಗುಂಡ್ಲುಪೇಟೆ: ಅರಣ್ಯ ಇಲಾಖೆ ಸಸ್ಯ ಕ್ಷೇತ್ರದಲ್ಲಿ ಬೆಳೆಸಿರುವ ಸಸಿಗಳ ಬೆಲೆ ಏರಿಸಿದ್ದರಿಂದ ಖರೀದಿಸಲು ರೈತರು ಹಾಗೂ ಪರಿಸರ ಪ್ರೇಮಿಗಳು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ ಸಸಿಗಳ ಬೆಲೆ ಇಳಿಕೆಗೆ ಆದೇಶ ಹೊರಡಿಸಿದೆ.


    ಅರಣ್ಯ ಇಲಾಖೆ ಸಹಾಯಧನದ ಆಧಾರದಲ್ಲಿ ನೀಡುತ್ತಿದ್ದ ಸಸಿಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದ್ದರಿಂದ ಸಸಿಗಳ ಬೆಲೆ ಹೆಚ್ಚಳ ಮಾಡಿ ಅದೇಶ ಹೊರಡಿಸಿತ್ತು. ಕಳೆದ ಸಾಲಿನಲ್ಲಿ 6/9 ಸೈಜ್‌ನ ಚೀಲದಲ್ಲಿ ಬೆಳೆಸಿರುವ ಸಸಿಗಳನ್ನು ಕೇವಲ 1 ರೂ.ಗೆ, 8/12 ಸೈಜ್‌ನ ಚೀಲದಲ್ಲಿ ಬೆಳೆಸಲಾದ ಸಸಿಗಳನ್ನು 3 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಸರ್ಕಾರದ ಈ ಹಿಂದಿನ ಆದೇಶದಂತೆ 6/9 ಸೈಜ್‌ನ ಚೀಲದಲ್ಲಿ ಬೆಳೆಸಲಾದ ಸಸಿಗಳನ್ನು 6 ರೂ. 8/12 ಸೈಜ್‌ನ ಚೀಲಗಳಲ್ಲಿ ಬೆಳೆಸಲಾದ ಸಸಿಗಳನ್ನು 23 ರೂ.ಗೆ ಏರಿಕೆ ಮಾಡಿತ್ತು.


    ಇದರಿಂದ ಸಸಿಗಳ ಬೆಲೆ ದುಬಾರಿಯಾಗಿ ಪರಿಣಮಿಸಿದ್ದರಿಂದ ರೈತರು ತಮ್ಮ ಜಮೀನುಗಳಲ್ಲಿ ಅರಣ್ಯ ಕೃಷಿ ಮಾಡುವ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದರು. ಮಳೆಗಾಲದಲ್ಲಿ ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದ ಪರಿಸರ ಪ್ರೇಮಿಗಳೂ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದರು. ಮತ್ತೊಂದೆಡೆ ಮುಂಗಾರಿನಲ್ಲಿ ಸಸಿಗಳನ್ನು ಮಾರಾಟ ಮಾಡಲು ಸನ್ನದ್ಧವಾಗಿದ್ದ ಅರಣ್ಯ ಇಲಾಖೆ ಸಸಿಗಳನ್ನು ಯಾರೂ ಖರೀದಿ ಮಾಡಲು ಮುಂದಾಗದ ಪರಿಣಾಮ ನರ್ಸರಿಯಲ್ಲಿಯೇ ಉಳಿದಿತ್ತು.


    ತಾಲೂಕಿನಲ್ಲಿ ಮುಂಟೀಪುರ ಹಾಗೂ ಅರೇಪುರ ಸೇರಿದಂತೆ ಜಿಲ್ಲೆಯಲ್ಲಿರುವ ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸಸಿಗಳು ಮಾರಾಟಕ್ಕೆ ಸಿದ್ಧವಾಗಿದ್ದರೂ ಕೊಳ್ಳುವವರು ಇರಲಿಲ್ಲ. ಮುಂಗಾರು ಆರಂಭವಾದರೂ ಸಸಿಗಳ ಬೆಲೆ ಏರಿಕೆಯಿಂದ ಶೇ.2 ರಷ್ಟು ಸಸಿಗಳನ್ನು ಮಾರಾಟ ಮಾಡಲು ಅರಣ್ಯ ಇಲಾಖೆಗೆ ಸಾಧ್ಯವಾಗಿರಲಿಲ್ಲ.


    ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಇದೀಗ 5/8 ಸಸಿಗಳನ್ನು 2 ರೂ.ಗೆ, 1/9 ಸೈಜ್‌ನ ಚೀಲದಲ್ಲಿ ಬೆಳೆಸಲಾದ ಸಸಿಗಳನ್ನು 3 ರೂ. 8/12 ಸೈಜ್‌ನ ಚೀಲಗಳಲ್ಲಿ ಬೆಳೆಸಲಾದ ಸಸಿಗಳನ್ನು 6 ರೂ.ಗೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts