More

    ಅಮ್ಮನ ಹಬ್ಬಕ್ಕೆ ಟಗರುಗಳ ಖರೀದಿ ಭರಾಟೆ

    ಬೀರೂರು: ಗ್ರಾಮದೇವತೆ ಅಂತರಘಟ್ಟಮ್ಮ ದೇವಿ ಜಾತ್ರಾ ಮಹೋತ್ಸವ ಫೆ.20ರಂದು ನಡೆಯಲಿದ್ದು ಪಟ್ಟಣದಲ್ಲಿ ಭರದ ಸಿದ್ಧತೆ ನಡೆದಿದೆ.
    ಅಮ್ಮನ ಹಬ್ಬಕ್ಕೆ ಬಾಡೂಟ ವಿಶೇಷ. ಪ್ರತಿ ಮನೆಯಲ್ಲೂ ಸಂಬಂಧಿಕರು, ಬಂಧುಗಳನ್ನು ಆಹ್ವಾನಿಸಲಾಗುತ್ತದೆ.
    ಭಾನುವಾರದಿಂದಲೇ ನಾಗರಿಕರು ಟಗರು, ಕುರಿಗಳ ವ್ಯಾಪಾರಕ್ಕೆ ಮುಂದಾಗಿದ್ದರು. ಮನೆಗಳಿಗೆ ಸುಣ್ಣ-ಬಣ್ಣ ಬಳಿದು ಅಲಂಕರಿಸಲಾಗಿದೆ. ಹಬ್ಬಕ್ಕಾಗಿ ಮನೆಯ ಮಕ್ಕಳಿಗೆ ಹೊಸ ಬಟ್ಟೆ, ಆಭರಣ, ಮನೆಗೆ ಸಾಮಗ್ರಿ ಖರೀದಿಸಿದ್ದಾರೆ. ಪಟ್ಟಣದ ಹಲವು ಯುವಕರು ಹಬ್ಬಕ್ಕೆ ಶುಭಾಶಯ ಕೋರಿ ಪಟ್ಟಣದ ವಿವಿಧ ಭಾಗಗಳಲ್ಲಿ ಈಗಾಗಲೇ ದೊಡ್ಡ ಬ್ಯಾನರ್, ಕಟೌಟ್‌ಗಳನ್ನು ಅಳವಡಿಸಿದ್ದಾರೆ.
    ದೇವಾಲಯ ಬೀದಿಯನ್ನು ವಿದ್ಯುತ್‌ದೀಪಗಳಿಂದ ಸಿಂಗರಿಸಲಾಗಿದೆ. ಎತ್ತಿನಗಾಡಿಗಳನ್ನು ಹೂಡುವವರು ಗಾಡಿ ಮತ್ತು ಎತ್ತುಗಳನ್ನು ತೊಳೆದು, ಕೋಡುಗಳಿಗೆ ಬಣ್ಣ ಬಳಿದು ಸಿದ್ಧಗೊಳಿಸುತ್ತಿದ್ದಾರೆ. ಭಾನುವಾರ ಅಮ್ಮನ ಹಬ್ಬದ ಮುನ್ನ ಅಜ್ಜಿ ಹಬ್ಬವನ್ನು ನೆರವೇರಿಸಿ ಸಿಹಿ ಪದಾರ್ಥಗಳನ್ನು ತಯಾರಿಸಿ ಕಲಶ ಹೂಡಿ ಮನೆಯಲ್ಲಿ ಪೂಜಿಸಲಾಗುತ್ತಿದೆ.
    ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಬೀರೂರು ಮತ್ತು ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ತಾವು ಸಾಕಿದ ಟಗರು, ಕುರಿ, ಮೇಕೆ ಹಾಗೂ ಆಡುಗಳನ್ನು ಕರೆತಂದು ಮಾರಾಟಕ್ಕೆ ಮುಂದಾದರು. ಅಲ್ಲದೆ ವಾರದ ಮೊದಲೇ ಹೊಸದುರ್ಗ, ಚಿತ್ರದುರ್ಗ, ಕಡೂರು, ತರೀಕೆರೆ, ಭದ್ರಾವತಿಗೆ ತೆರಳಿ ಟಗರುಗಳನ್ನು ಖರೀದಿಸಿದ್ದಾರೆ.
    ಈ ಬಾರಿ ವಿಶೇಷವೆಂದರೆ ದಾವಣಗೆರೆ ಭಾಗದ ಟಗರುಗಳು ಮಾರುಕಟ್ಟೆಯಲ್ಲಿ ಖರೀದಿದಾರರನ್ನು ಆಕರ್ಷಿಸಿದವು. ಒಂದು ಟಗರಿಗೆ 20-40 ಸಾವಿರ ರೂ.ವರೆಗೂ ದಾಟಿತ್ತು. ಇನ್ನೂ ಕುರಿ ಹಾಗೂ ಮೇಕೆಗಳು 15-20 ಸಾವಿರ ರೂ.ಗೆ ಮಾರಾಟವಾದವು. ಬರದ ಛಾಯೆ ಆವರಿಸಿದ್ದರೂ ಜಾತ್ರೆ ಸಂಭ್ರಮ ಜೋರಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts