More

    ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮನ ಶಿಲಾಮಯ ದೇವಸ್ಥಾನಕ್ಕೆ ಶಿಲಾನ್ಯಾಸ; ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸಾನ್ನಿಧ್ಯ

    ರಿಪ್ಪನ್‌ಪೇಟೆ: ಪ್ರಾಕೃತಿಕ ಸಿರಿಯಲ್ಲಿ ನೆಲೆನಿಂತ ಜೇನುಕಲ್ಲಮ್ಮ ದೇವಿಯ ಸಾನ್ನಿಧ್ಯ ಉತ್ತರೋತ್ತರವಾಗಿ ಅಭಿವೃದ್ಧಿಯನ್ನು ಹೊಂದಿ ವಿಶ್ವದಲ್ಲಿಯೇ ಅದ್ಭುತ ಕ್ಷೇತ್ರವಾಗಿ ಬೆಳಗಲಿ ಎಂದು ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹರಸಿದರು.
    ಸೋಮವಾರ ಅಮ್ಮನಘಟ್ಟದ ಜೇನುಕಲ್ಲಮ್ಮನ ನೂತನ ಶಿಲಾಮಯ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಈ ಕ್ಷೇತ್ರಕ್ಕೆ ಬಂದಾಕ್ಷಣ ಇಲ್ಲಿನ ಪ್ರಕೃತಿ ಸೊಬಗನ್ನು ಕಂಡು ನಾವೆಷ್ಟು ಸಣ್ಣವರು, ಇಲ್ಲಿನ ಅದ್ಭುತಗಳ ಮುಂದೆ ನಾವುಗಳು ಅಣುಮಾತ್ರವೆಂದು ಯಾರಿಗಾದರೂ ಅನ್ನಿಸದಿರದು ಎಂದರು.
    ಇಲ್ಲಿನ ಮಹತ್ವವೆಂದರೆ ಅಮ್ಮ ಎಂದಿಗೂ ಕಲ್ಲಾಗಲು ಸಾಧ್ಯವಿಲ್ಲ, ಆಕೆ ಎಂದಿಗೂ ವಾತ್ಸಲ್ಯಮಯಿ, ಆದರೆ ಇಲ್ಲಿ ಕಲ್ಲೇ ಅಮ್ಮನಾಗಿದ್ದು ಅದರಲ್ಲಿ ಜೇನುಸೂಸುವ ಪ್ರೀತಿಯಿಂದ ಭಕ್ತರನ್ನು ಪೊರೆಯುತ್ತಿದ್ದು ಜೇನುಕಲ್ಲಮ್ಮಳೆಂದು ಪ್ರಖ್ಯಾತಿ ಪಡೆದಿದ್ದಾಳೆ. ಬೇರೆಡೆಗಳಲ್ಲಿ ಎಂತಹ ಸ್ವರ್ಣಮೂರ್ತಿಗಳೇ ಇದ್ದರೂ ಇದಕ್ಕೆ ಸರಿಸಾಟಿಯಿಲ್ಲದ ವೈಭವದ ಸಾನಿಧ್ಯವಾಗಿದೆ. ಜೋಗದ ಜಲವೈಭವಕ್ಕೂ ಇಲ್ಲಿನ ಶಿಲಾವೈಭವಕ್ಕೂ ವ್ಯತ್ಯಾಸವೇನೂ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಸಮಸ್ತ ಅಭಿವೃದ್ಧಿಯನ್ನು ಕಂಡು ಪ್ರಪಂಚದ ಗಮನಸೆಳೆಯುವುದರೊಂದಿಗೆ ಅದ್ಭುತ ಧಾರ್ಮಿಕ ಕ್ಷೇತ್ರವಾಗಲಿ ಎಂದು ಹೇಳಿದರು.
    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಮಲೆನಾಡಿನ ಭಾಗದ ಜನರ ಸಮಸ್ಯೆ ಪರಿಹರಿಸುವ ಪ್ರಯತ್ನದಲ್ಲಿ ನಾವು ಸಾಗುತ್ತಿದ್ದೇವೆ. ಈ ಕ್ಷೇತ್ರಕ್ಕೆ ಸಾಧ್ಯವಾದಷ್ಟು ಅನುದಾನ ಮಂಜೂರು ಮಾಡಿಸುವುದರೊಂದಿಗೆ ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
    ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಸರ್ಕಾರದಿಂದ ಅನುದಾನ ಪಡೆಯುವುದು ಭಿಕ್ಷೆಯಲ್ಲ. ಜನರ ಹಕ್ಕು. ದೇವರ ಕಾರ್ಯದಲ್ಲಿ ಜಾತಿ, ಕುಲವಿಲ್ಲ. ಇಲ್ಲಿ ಎಲ್ಲರೂ ಒಂದೇ ಎಂದು ಹೇಳಿದರು.
    ಒಂದು ಕೋಟಿ ರೂ. ಅನುದಾನ:  ಪುರಾಣ ಪ್ರಸಿದ್ಧವಾದ ಈ ಕ್ಷೇತ್ರವನ್ನು ಇನ್ನಷ್ಟು ಸೌಲಭ್ಯ ಸಹಿತ ಅಭಿವೃದ್ಧಿ ಮಾಡುವ ಉದ್ದೇಶದಿಂದ ಸರ್ಕಾರ 1 ಕೋಟಿ ರೂ. ಅನುದಾನ ನೀಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಈ ಭಾಗದ ಶ್ರದ್ಧಾ ಕೇಂದ್ರವಾದ ಅಮ್ಮನಘಟ್ಟ ಭಕ್ತಾದಿಗಳಿಗೆ ನೆಮ್ಮದಿ ನೀಡುವ ತಾಣವಾಗಿದೆ. ಎಂತಹ ಸಮಸ್ಯೆಗಳು ಎದುರಾದರೂ ಈಭಾಗದ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಬದಲಿಗೆ ಅಮ್ಮನ ಆಶೀರ್ವಾದ ಪಡೆದು ತೆರಳಿದರೆ ಬದುಕುವ ಭರವಸೆ ಮತ್ತೆಮೂಡುತ್ತಿತ್ತು ಎನ್ನಲಾಗುತ್ತಿದೆ. ಇಂತಹ ಪುಣ್ಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದು ಸರ್ವರ ಜವಾಬ್ದಾರಿಯಾಗಿದ್ದು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts