More

    ಅಮೆರಿಕದಲ್ಲಿ ಹಿಂದು ದೇವಾಲಯ

    ಮೈಸೂರು: ಅಮೆರಿಕದ ಮೇರಿಲ್ಯಾಂಡ್‌ನ ಗೇಥರ್ಸಬರ್ಗ್‌ನಲ್ಲಿರುವ ಜೆಎಸ್‌ಎಸ್ ಸ್ಪಿರಿಚ್ಯುಯಲ್ ಮಿಷನ್‌ನಲ್ಲಿ ಹಿಂದು ದೇವಾಲಯ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಲಾಯಿತು.

    ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮನುಷ್ಯನು ತನ್ನೆಲ್ಲ ಲೌಕಿಕ ಕಾರ್ಯಚಟುವಟಿಕೆಗಳ ನಡುವೆ ಆಧ್ಯಾತ್ಮಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

    ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಸದಾಶಯದಂತೆ ಜೆಎಸ್‌ಎಸ್ ಸ್ಪಿರಿಚ್ಯುಯಲ್ ಮಿಷನ್ ಸ್ಥಾಪನೆಯಾಗಿದೆ. ಭಾರತೀಯ ಸಂಸ್ಕೃತಿಯ ಪ್ರಸಾರಕ್ಕಾಗಿ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಪರಿಶುದ್ಧವಾದ ಮನಸ್ಸಿನಿಂದ ಭಕ್ತಿಯ ಆಚರಣೆ ಮಾಡಿದಾಗ ಫಲ ಸಿಗುತ್ತದೆ. ಭಗವಂತ ಶಕ್ತಿ ನೀಡಿದಾಗ ಅದನ್ನು ಸಮಾಜದ ಒಳಿತಿಗಾಗಿ ಬಳಸಬೇಕು. ಜೀವನದಲ್ಲಿ ಸಂಪಾದನೆ ಮಾಡಿದ್ದನ್ನು ಸತ್ಕಾರ್ಯಗಳಿಗೆ ವಿನಿಯೋಗಿಸುವುದು ಅತಿಮುಖ್ಯ. ಏನೇ ನೀಡಿದರೂ ಸದ್ಭಾವನೆಯಿಂದ ನೀಡಬೇಕು ಎಂದರು.

    ಮೈಸೂರಿನ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ಈ ಸ್ಥಳದಲ್ಲಿ ಆಧ್ಯಾತ್ಮಿಕ ವಾತಾವರಣ ಇದೆ. ಶಿಲಾಭಕ್ತಿ, ನರಭಕ್ತಿ ಮತ್ತು ಭೂಭಕ್ತಿಗಳು ಸೇರಿದಾಗ ಮಾತ್ರ ದೇವಸ್ಥಾನದ ನಿರ್ಮಾಣ ಸುಗಮವಾಗಿ ಆಗಲು ಸಾಧ್ಯ. ಇಂದು ಈ ಮೂರು ಭಕ್ತಿಗಳ ಸಮ್ಮಿಲನವಾಗಿದ್ದು ದೇವಸ್ಥಾನದ ಭೂಮಿಯಪೂಜೆಯ ಯೋಗ ಕೂಡಿ ಬಂದಿದೆ. ಇದಲ್ಲೆದಕ್ಕೂ ಮಕುಟುಪ್ರಾಯವಾಗಿ ಗುರುಯೋಗವು ಸೇರಿದೆ ಎಂದರು.
    ಮಾಂಟ್‌ಗೊಮರಿ ಕೌಂಟಿಯ ಕಾರ್ಯನಿರ್ವಾಹಕ ಮಾರ್ಕ್ ಎಲ್ರಿಚ್ ಮಾತನಾಡಿ, ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಮಾಂಟ್‌ಗೊಮರಿಯ ಕೌಂಟಿಯಲ್ಲಿದ್ದು, ಅವರೆಲ್ಲರ ಭಾವನೆಗಳಿಗೆ ಸಹಕರಿಸುವುದಾಗಿ ತಿಳಿಸಿದರು.

    ಮೇರಿಲ್ಯಾಂಡ್‌ನ ಮಾಜಿ ಡೆಲಿಗೇಟ್ ಅರುಣಾ ಮಿಲ್ಲರ್ ಮಾತನಾಡಿ, ಜೆಎಸ್‌ಎಸ್ ಮಿಷನ್ ಭಾರತದ ಸಂಸ್ಕೃತಿಯನ್ನು ಇಲ್ಲಿನ ಜನರಿಗೆ ನೀಡುತ್ತಿದೆ. 1999ರಲ್ಲಿ ಸಣ್ಣದಾಗಿ ಆರಂಭವಾಗಿ ಇಂದು ದೊಡ್ಡಮಟ್ಟದಲ್ಲಿ ಬೆಳೆಯುತ್ತಿದೆ ಎಂದರು.

    ಭಾರತದ ರಾಯಭಾರ ಕಚೇರಿಯ ಶೈಕ್ಷಣಿಕ ಮತ್ತು ಸಮುದಾಯ ವಿಭಾಗದ ಕೌನ್ಸಿಲರ್ ಅನ್ಸುಲ್ ಶರ್ಮಾ ಮಾತನಾಡಿ, ಜೆಎಸ್‌ಎಸ್ ಸ್ಪಿರಿಚ್ಯುಯಲ್ ಮಿಷನ್ ಭಾರತೀಯರೆಲ್ಲರನ್ನೂ ತಮ್ಮ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಮೂಲಕ ಒಗ್ಗೂಡಿಸಲು ನೆರವಾಗಿದೆ. ಜೆಎಸ್‌ಎಸ್ ಫಾರ್ಮಸಿ ಕಾಲೇಜು ಹಾಗೂ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯ ನಡುವೆ ಆಗಿರುವ ಪರಸ್ಪರ ಒಡಂಬಡಿಕೆ ಭಾರತ ಮತ್ತು ಅಮೆರಿಕ ದೇಶಗಳ ಶೈಕ್ಷಣಿಕ ಸಂಬಂಧ ಬಲಗೊಳಿಸಿದೆ. ಇದರಿಂದ ಎರಡು ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಅನುಕೂಲವಾಗಿದೆ ಎಂದರು.

    ಮೇರಿಲ್ಯಾಂಡ್ ಪ್ರಾಂತ್ಯದ ಅಂತರಧರ್ಮಿಯ ಸಂಬಂಧಗಳ ಮುಖಂಡ ಮ್ಯಾನ್ಸ್‌ಫೀಲ್ಡ್ ಕೇಸಿ ಕೆಸ್‌ಮನ್, ಮೇರಿಲ್ಯಾಂಡ್‌ನ ಡೆಲಿಗೇಟ್ ಲಿಲಿ ಕ್ಯು, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿದರು. ಹಾನ್‌ಸೆನ್ ಬೆಂಜಮಿನ್ ಎಲ್ ಕಾರ್ಡಿನ್‌ನ ಸಹಾಯಕ ಕೆನ್ ರಿಚರ್ಡ್, ಅಮೆರಿಕ ಸೆನೆಟ್ ಕ್ರಿಸ್ ವಾನ್ ಹಾಲನ್, ಅಕ್ಕ ಅಧ್ಯಕ್ಷ ಅಮರನಾಥ್‌ಗೌಡ, ಕೇರಳ ಸಂಘದ ಅಧ್ಯಕ್ಷ ಮಧುಸೂದನ್ ನಂಬಿಯಾರ್, ಉಮೇಶ್ ಜಿಮ್ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts