More

    ಅಮರಗೋಳದಲ್ಲಿ ಜೆಸಿಬಿ ಗರ್ಜನೆ

    ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಮುಖ್ಯರಸ್ತೆಯಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಜೆಸಿಬಿಗಳು ಗರ್ಜನೆ ಮಾಡಿದವು. ಕಳೆದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ ವಿಸ್ತರಣೆಗೆ ಕಾರ್ಯಕ್ಕೆ ಮುಹೂರ್ತ ನಿಗದಿ ಮಾಡಿದ್ದ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡರು.

    ನನೆಗುದಿಗೆ ಬಿದ್ದಿದ್ದ ರಸ್ತೆ ವಿಸ್ತರಣೆ ಕಾರ್ಯಕ್ಕೆ ಮುಹೂರ್ತ ನಿಗದಿ ಮಾಡಿದ್ದ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡರು.

    ಈ ಬಗ್ಗೆ ಪೊಲೀಸರು ಮನೆ ಮಾಲೀಕರಿಗೆ ಮೊದಲೇ ತಿಳಿಸಿದ್ದರಿಂದ ಶನಿವಾರ ರಾತ್ರಿಯಿಂದಲೇ ಕೆಲವರು ಸ್ವಯಂ ಪ್ರೇರಣೆಯಿಂದ ತೆರವಿಗೆ ಮುಂದಾಗಿದ್ದರು. ಅಂಗಡಿ- ಮುಂಗಟ್ಟುಗಳಲ್ಲಿದ್ದ ಸರಕು ಸರಂಜಾಮುಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದರು.

    ಭಾನುವಾರ ಬೆಳಗ್ಗೆ 6 ಗಂಟೆಗೆ ನಾಲ್ಕೈದು ಜೆಸಿಬಿ, ಇನ್ನೂರಕ್ಕೂ ಹೆಚ್ಚು ಪೊಲೀಸರು, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ತೆರವು ಕಾರ್ಯಾಚರಣೆಗೆ ಸಜ್ಜಾದರು.

    15 ಮೀಟರ್ ರಸ್ತೆ ವಾಸ್ತವದಲ್ಲಿ ಬರೀ 3.5 ಮೀಟರ್ ಉಳಿದಿತ್ತು. ಅಂದಾಜು 3 ಕೋಟಿ ರೂ. ಕೇಂದ್ರ ರಸ್ತೆ ನಿಧಿಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ವಿಸ್ತರಣೆ ಹಾಗೂ ಸುಧಾರಣೆ ಕಾರ್ಯ ಕೈಗೊಂಡಿದೆ. ಆದರೆ, ಗ್ರಾಮದಲ್ಲಿ ಅತಿಕ್ರಮಣ ಇದ್ದಿದ್ದರಿಂದ ಕಾಮಗಾರಿ ಬಾಕಿ ಉಳಿದಿತ್ತು. ಅದಕ್ಕಾಗಿ ಮಹಾನಗರ ಪಾಲಿಕೆ ಸಹಕಾರದೊಂದಿಗೆ ತೆರವು ಮಾಡಲಾಯಿತು. ಧಾರ್ವಿುಕ ಕೇಂದ್ರಗಳೂ ಸೇರಿ ಅಂದಾಜು 50- 60 ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಅಧಿಕಾರಿಗಳು ಗುರುತು ಮಾಡಿದಂತೆ ಕೆಲವೆಡೆ ಪೂರ್ತಿ, ಇನ್ನೂ ಕೆಲವು ಶೇ. 20ರಿಂದ 50ರಷ್ಟು ಭಾಗ ಕಟ್ಟಡಗಳನ್ನು ತೆರವು ಮಾಡಲಾಯಿತು.

    ಅಮರಗೋಳ- ಅಮ್ಮಿನಬಾವಿ ಜಿಲ್ಲಾ ಮುಖ್ಯರಸ್ತೆ ಇದಾಗಿದ್ದು, ಗ್ರಾಮದ ಮಧ್ಯಭಾಗದಲ್ಲಿ ಅಂದಾಜು 400 ಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಇಕ್ಕಟ್ಟಾಗಿ ಸಂಚಾರ ಸಂಕಟಮಯವಾಗಿತ್ತು.

    ಜಾಗ ಕಳೆದುಕೊಳ್ಳುವ ಮನೆಗಳ ಮಾಲೀಕರಿಗೆ ಪರ್ಯಾಯವಾಗಿ ಆಶ್ರಯ ಕಾಲನಿಯಲ್ಲಿ ಒಂದೊಂದು ನಿವೇಶನ ನೀಡಲು ತೀರ್ವನಿಸಿ, ಅದರಂತೆ ಅಂದಾಜು 95 ಜನರಿಗೆ ನಿವೇಶನ ಗುರುತು ಮಾಡಲಾಗಿದೆ.

    ಆರಂಭದಲ್ಲಿ ವಿರೋಧ: ಭಾನುವಾರ ಬೆಳಗ್ಗೆ ಜೆಸಿಬಿಗಳು ಬಂದು ನಿಲ್ಲುತ್ತಿದ್ದಂತೆ ಹತ್ತಾರು ಮಹಿಳೆಯರು, ಮನೆ ಮಾಲೀಕರು ತೆರವಿಗೆ ವಿರೋಧ ವ್ಯಕ್ತಪಡಿಸಿದರು. ಈಗ ಮಳೆಗಾಲ ಇದೆ. ಮನೆಯಿಂದ ಹೊರಗೆ ಹಾಕಿದರೆ ಎಲ್ಲಿಗೆ ಹೋಗಬೇಕು? ಇನ್ನಷ್ಟು ದಿನ ಅವಕಾಶ ನೀಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.

    ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಈಗಾಗಲೇ ಸಾಕಷ್ಟು ಅವಕಾಶ ನೀಡಲಾಗಿದೆ. ನೀವಾಗಿಯೇ ತೆರವು ಮಾಡಿಕೊಳ್ಳಿ, ಯಾರಿಗೆ ತೀರಾ ಆಸರೆ ಇಲ್ಲವೋ ಅಂತವರಿಗೆ ಪರ್ಯಾಯ ಆಸರೆ ಕಲ್ಪಿಸಲಾಗುವುದು. ಆಶ್ರಯ ಬಡಾವಣೆಯಲ್ಲಿ ಪರ್ಯಾಯ ನಿವೇಶನದ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಮನವೊಲಿಸಿದರು. ಇದರಿಂದ ಹೆಚ್ಚು ಪ್ರತಿರೋಧ ಒಡ್ಡದೇ ಬಹುತೇಕ ಜನರು ತೆರವಿಗೆ ಸಹಕಾರ ನೀಡಿದರು. ಕೆಲವರು ಸ್ವ ಇಚ್ಛೆಯಿಂದ ತೆರವು ಮಾಡಿಕೊಂಡರು.

    15 ಮೀ. ದ್ವಿಪಥ: ಒಟ್ಟು 15 ಮೀಟರ್ ಅಗಲದ ದ್ವಿಪಥ ಇದಾಗಲಿದ್ದು, ಶೀಘ್ರ ಲೋಕೋಪಯೋಗಿ ಇಲಾಖೆಯವರು ಕಾಮಗಾರಿ ಆರಂಭಿಸಲಿದ್ದಾರೆ. ನಿರಾಶ್ರಿತರಾದವರಿಗೆ ಕಾನೂನುಬದ್ಧವಾಗಿ ಪರ್ಯಾಯ ನಿವೇಶನ ನೀಡಲಾಗುತ್ತಿದೆ. ಯಾರೊಬ್ಬರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

    ತಹಸೀಲ್ದಾರ್ ಶಶಿಧರ ಮಾಡ್ಯಾಳ, ವಲಯ ಕಚೇರಿ 4ರ ಸಹಾಯಕ ಆಯುಕ್ತ ಆರ್.ಡಿ. ಕೊಕ್ಕಳಕಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಡಿಸಿಪಿ ಆರ್.ಡಿ. ಬಸರಗಿ, ಎಸಿಪಿಗಳಾದ ಶಂಕರ ರಾಗಿ, ಅನುಷಾ, ಎಸ್.ಎಂ. ಸಂದಿಗವಾಡ, ಪುಷ್ಪಲತಾ, ಇನ್​ಸ್ಪೆಕ್ಟರ್ ಪ್ರಭು ಸೂರಿನ್, ಇತರ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

    ಮನೆ ಮಾಲೀಕರು ಒಪ್ಪಿದ್ದಾರೆ: ಅಮರಗೋಳ ಮುಖ್ಯರಸ್ತೆಯಲ್ಲಿನ ಎಲ್ಲ ಮನೆ ಮಾಲೀಕರು ಶಾಸಕ ಅರವಿಂದ ಬೆಲ್ಲದರೊಂದಿಗೆ ಸಭೆ ನಡೆಸಿದ್ದೇವೆ. ಮನವರಿಕೆ ಮಾಡಿ ಸ್ಥಳ ಬಿಟ್ಟುಕೊಡುವಂತೆ ಬಹಳ ಹಿಂದೆಯೇ ಕೋರಿದ್ದೆವು. ಅವರು ಒಪ್ಪಿದ್ದರು. ಅಲ್ಲದೆ ಆಶ್ರಯ ಬಡಾವಣೆಯಲ್ಲಿ ಪರ್ಯಾಯ ನಿವೇಶನ ಸಹ ನೀಡಲಾಗಿದೆ’ ಎಂದು ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts