More

    ಅಭ್ಯರ್ಥಿಗಳ ಹಣೆಬರಹ ನಿರ್ಧಾರ ಇಂದು

    ಧಾರವಾಡ: ಜಿಲ್ಲೆಯ 7 ತಾಲೂಕುಗಳಿಗೆ ಜರುಗಿದ್ದ ಗ್ರಾ.ಪಂ. ಚುನಾವಣೆಯ ಫಲಿತಾಂಶ ಬುಧವಾರ ಹೊರಬೀಳಲಿದೆ. ಡಿ. 22 ಹಾಗೂ 27ರಂದು 2 ಹಂತಗಳಲ್ಲಿ ಮತದಾನ ಜರುಗಿತ್ತು. ಆಯಾ ತಾಲೂಕು ಕೇಂದ್ರಗಳಲ್ಲಿ ಬುಧವಾರ ಬೆಳಗ್ಗೆ 8 ಗಂಟೆಯಿಂದ ಏಕಕಾಲಕ್ಕೆ 3 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

    ಮೊದಲ ಹಂತದಲ್ಲಿ ಧಾರವಾಡ ತಾಲೂಕಿನ 34, ಅಳ್ನಾವರದ 4 ಹಾಗೂ ಕಲಘಟಗಿಯ 27 ಸೇರಿ 65 ಗ್ರಾ.ಪಂ.ಗಳಿಗೆ ಚುನಾವಣೆ ನಡೆದಿದೆ. 3 ತಾಲೂಕುಗಳ 2,81,274 ಮತದಾರರ ಪೈಕಿ 2,33,833 ಮತದಾರರು ಹಕ್ಕು ಚಲಾಯಿಸಿದ್ದು, ಶೇ. 83.13ರಷ್ಟು ಮತದಾನವಾಗಿತ್ತು. ಎರಡನೇ ಹಂತದಲ್ಲಿ ಕುಂದಗೋಳ ತಾಲೂಕಿನ 23, ನವಲಗುಂದ 14, ಅಣ್ಣಿಗೇರಿ 8, ಹುಬ್ಬಳ್ಳಿ ತಾಲೂಕಿನ 26 ಸೇರಿ 71 ಗ್ರಾ.ಪಂ.ಗಳಿಗೆ ಮತದಾನ ಜರುಗಿದೆ. 4 ತಾಲೂಕುಗಳ 3,13,800 ಮತದಾರರ ಪೈಕಿ 2,52,455 ಮತದಾರರು ಹಕ್ಕು ಚಲಾಯಿಸಿದ್ದು, ಶೇ. 80.41ರಷ್ಟು ಮತದಾನವಾಗಿದೆ.

    ಧಾರವಾಡ: ತಾಲೂಕಿನ 34 ಪಂಚಾಯಿತಿಯ, 185 ವಾರ್ಡ್​ಗಳಲ್ಲಿ 533 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿದೆ. 30 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 503 ಸ್ಥಾನಗಳಿಗೆ 1,602 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮತ ಎಣಿಕೆಗೆ 68 ಟೇಬಲ್​ಗಳ ವ್ಯವಸ್ಥೆ ಮಾಡಲಾಗಿದೆ.

    ಅಳ್ನಾವರ: ತಾಲೂಕಿನ 4 ಪಂಚಾಯಿತಿಗಳು 16 ವಾರ್ಡ್ ಹೊಂದಿವೆ. 47 ಸದಸ್ಯ ಸ್ಥಾನದ ಪೈಕಿ ಒಬ್ಬ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 46 ಸ್ಥಾನಗಳಿಗೆ 156 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತ ಎಣಿಕೆಗೆ 7 ಟೇಬಲ್ ವ್ಯವಸ್ಥೆ ಇದೆ.

    ಕಲಘಟಗಿ: ತಾಲೂಕಿನ 27 ಪಂಚಾಯಿತಿಗಳು 127 ವಾರ್ಡ್ ಹೊಂದಿವೆ. 340 ಸದಸ್ಯ ಸ್ಥಾನದ ಪೈಕಿ 17 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 323 ಸ್ಥಾನಗಳಿಗೆ 989 ಜನ ಸ್ಪರ್ಧಿಸಿದ್ದಾರೆ. ಎಣಿಕೆಗೆ 46 ಟೇಬಲ್ ವ್ಯವಸ್ಥೆ ಮಾಡಲಾಗಿದೆ.

    ಹುಬ್ಬಳ್ಳಿ: ತಾಲೂಕಿನ 26 ಪಂಚಾಯಿತಿಗಳು 127 ಮತಕ್ಷೇತ್ರ ಹೊಂದಿವೆ. 373 ಸದಸ್ಯ ಸ್ಥಾನ ಪೈಕಿ 24 ಜನ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 349 ಸ್ಥಾನಗಳಿಗೆ 1036 ಆಕಾಂಕ್ಷಿಗಳು ಕಣದಲ್ಲಿದ್ದಾರೆ. ಎಣಿಕೆಗಾಗಿ 46 ಟೇಬಲ್​ಗಳಿವೆ.

    ಕುಂದಗೋಳ: ತಾಲೂಕಿನಲ್ಲಿ 23 ಪಂಚಾಯಿತಿಗಳಿದ್ದು, 117 ವಾರ್ಡ್​ಗಳಿವೆ. 346 ಸದಸ್ಯ ಸ್ಥಾನಗಳ ಪೈಕಿ 21 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. 325 ಸ್ಥಾನಗಳಿಗೆ 1081 ಸ್ಪರ್ಧಾಳುಗಳು ಕಣದಲ್ಲಿ ಉಳಿದಿದ್ದಾರೆ. ಎಣಿಕೆಗಾಗಿ 46 ಟೇಬಲ್ ಇವೆ.

    ನವಲಗುಂದ: ತಾಲೂಕಿನಲ್ಲಿ 14 ಪಂಚಾಯಿತಿಗಳಿಗೆ ಚುನಾವಣೆ ಜರುಗಿದ್ದು, 69 ವಾರ್ಡ್ ಹೊಂದಿದೆ. 204 ಸ್ಥಾನಗಳ ಪೈಕಿ 19 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 185 ಸ್ಥಾನಗಳಿಗೆ 538 ಸ್ಪರ್ಧಾಳುಗಳು ಕಣದಲ್ಲಿದ್ದಾರೆ. ಎಣಿಕೆಗೆ 25 ಟೇಬಲ್ ವ್ಯವಸ್ಥೆ ಮಾಡಲಾಗಿದೆ.

    ಅಣ್ಣಿಗೇರಿ: ತಾಲೂಕಿನಲ್ಲಿ 8 ಪಂಚಾಯಿತಿಗಳಿದ್ದು, 35 ಮತಕ್ಷೇತ್ರ ಹೊಂದಿದೆ. 109 ಸದಸ್ಯ ಸ್ಥಾನಗಳ ಪೈಕಿ ನಾಲ್ವರು ಅವಿರೋಧ ಆಯ್ಕೆಯಾಗಿದ್ದಾರೆ. ಬಾಕಿ 105 ಸ್ಥಾನಗಳಿಗೆ 319 ಸ್ಪರ್ಧಾಳುಗಳು ಅಖಾಡದಲ್ಲಿದ್ದಾರೆ. ತಾಲೂಕಿನ ಮತ ಎಣಿಕೆಗೆ 13 ಟೇಬಲ್ ವ್ಯವಸ್ಥೆ ಇದೆ.

    ನಿಷೇಧಾಜ್ಞೆ ಜಾರಿ: ಧಾರವಾಡ: ಗ್ರಾ.ಪಂ. ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಡಿ. 30ರ ಬೆಳಗ್ಗೆ 6ರಿಂದ ಡಿ. 31ರ ಬೆಳಗ್ಗೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ. 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ, ಸಮಾರಂಭ ನಿಷಿದ್ಧ. ದೇಹಕ್ಕೆ ಅಪಾಯ ಉಂಟು ಮಾಡಬಹುದಾದ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಪ್ರತಿಬಂಧಿಸಲಾಗಿದೆ. ಬಹಿರಂಗ ಘೊಷಣೆ, ಪದ ಹಾಡುವುದು, ವಾದ್ಯ ಬಾರಿಸುವುದನ್ನು ನಿಷೇಧಿಸಲಾಗಿದೆ. ಶವಸಂಸ್ಕಾರ, ಮದುವೆ ಮತ್ತು ಧಾರ್ವಿುಕ ಮೆರವಣಿಗೆಗಳಿಗೆ ಹಾಗೂ ಕೊವೀಡ್ ಕಾರ್ಯಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಮದ್ಯಪಾನ, ಸಾಗಣೆ ನಿಷೇಧ
    ಧಾರವಾಡ:
    ಜಿಲ್ಲೆಯಲ್ಲಿ ಗ್ರಾ.ಪಂ. ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಡಿ. 30ರಂದು ಶುಷ್ಕ ದಿನ ಎಂದು ಘೋಷಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ. ಧಾರವಾಡ ಗ್ರಾಮೀಣ, ಅಳ್ನಾವರ, ಹುಬ್ಬಳ್ಳಿ ಗ್ರಾಮೀಣ, ಕಲಘಟಗಿ, ಕುಂದಗೋಳ, ನವಲಗುಂದ ಮತ್ತು ಅಣ್ಣಿಗೇರಿ ತಾಲೂಕಿನ ವ್ಯಾಪ್ತಿಯಲ್ಲಿ ಡಿ. 29ರಂದು ರಾತ್ರಿ 12ರಿಂದ ಡಿ. 31ರ ಬೆಳಗ್ಗೆ 6ರವರೆಗೆ ಮತ ಎಣಿಕೆ ಜರುಗುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮದ್ಯಪಾನ, ಮಾರಾಟ, ಸಾಗಣೆ ಹಾಗೂ ಸಂಗ್ರಹಣೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts