More

    ಅಭಿವೃದ್ಧಿ ಕಾಣದ ತೆರೆದ ಬಾವಿಗಳು

    ಬೆಳಗಾವಿ: ಪುರಾತನ ಇತಿಹಾಸ ಹೊಂದಿರುವ ತೆರೆದ ಬಾವಿಗಳು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಶಿಥಿಲಗೊಂಡು ಅವನತಿಯ ಹಾದಿಹಿಡಿದಿದ್ದು ಬಾವಿಯಲ್ಲಿ ಲಭ್ಯವಿರುವ ನೀರಿನ ಬಳಕೆಯಾಗದ ಕಾರಣ ಗಬ್ಬೆದ್ದು ನಾರುತ್ತಿವೆ.

    ಗ್ರಾಮೀಣ ಪ್ರದೇಶಗಳಲ್ಲಿನ ಜನ, ಜಾನುವಾರುಗಳ ನೀರಿನ ದಾಹ ತಣಿಸುವ ಹಾಗೂ ಮಳೆ ನೀರು ಸಂಗ್ರಹಿಸಿ ಅಂತರ್ಜಲ ಕಾಪಾಡುತ್ತಿರುವ ತೆರೆದ ಬಾವಿಗಳು ಇದೀಗ ನಿರ್ವಹಣೆ ಇಲ್ಲದೆ ಅವನತಿಯತ್ತ ಸಾಗಿವೆ. ಮಾಹಿತಿ ಪ್ರಕಾರ ಜಿಲ್ಲೆಯ 480 ಗ್ರಾಪಂಗಳ ವ್ಯಾಪ್ತಿಯಲ್ಲಿ ಸುಮಾರು 4,350ಕ್ಕೂ ಅಧಿಕ ತೆರೆದ ಬಾವಿಗಳಿವೆ. ಈ ಬಾವಿಗಳಲ್ಲಿ ಕಲ್ಲು, ಮಣ್ಣು ಸೇರಿ ಇತರೆ ತ್ಯಾಜ್ಯ ಸೇರಿಕೊಂಡ ಕಾರಣ ನೀರು ಬಳಕೆಗೆ ಅಯೋಗ್ಯವಾಗಿದೆ. ನೀರಿನ ಸಂಗ್ರಹ ಹೆಚ್ಚಾದ ಕಾರಣ ಪಾಚಿ ಕಟ್ಟಿ ವಾಸನೆ ಬರುತ್ತಿದೆ.

    ಕೇಂದ್ರ ಮತ್ತು ರಾಜ್ಯ ಸರ್ಕಾರವು ನರೇಗಾ ಯೋಜನೆಯಡಿ ಗ್ರಾಮೀಣ ಭಾಗದಲ್ಲಿರುವ ತೆರೆದ ಬಾವಿ, ಗೋಕಟ್ಟೆ ಸೇರಿದಂತೆ ನೀರಿನ ಮೂಲಗಳ ಸಂರಕ್ಷಣೆಗೆ ವಾರ್ಷಿಕ ಕೋಟ್ಯಂತರ ರೂಪಾಯಿ ಅನುದಾನ ಮೀಸಲಿಡುತ್ತಿದೆ. ಆದರೆ, ಸ್ಥಳೀಯ ಆಡಳಿತ ಸಂಸ್ಥೆಗಳ ನಿರ್ಲಕ್ಷೃದಿಂದಾಗಿ ಬಾವಿಗಳು ಅಭಿವೃದ್ಧಿಯಾಗುತ್ತಿಲ್ಲ.
    ಸರ್ಕಾರದ ಅನುದಾನವೂ ಬಳಕೆಯಾಗುತ್ತಿಲ್ಲ.

    ಕ್ರಮಕ್ಕೆ ಮುಂದಾಗಿ: ಗ್ರಾಮೀಣ ಪ್ರದೇಶಗಳಲ್ಲಿ ತೆರೆದ ಬಾವಿಗಳಿಗೆ ಒಂದು ಪರಂಪರೆ ಇದೆ. ಇಂತಹ ಬಾವಿಗಳನ್ನು ಸ್ಥಳೀಯ ಆಡಳಿತ ಮಂಡಳಿ 20 ರಿಂದ 30 ಸಾವಿರ ರೂ. ಖರ್ಚು ಮಾಡಿ ಅಭಿವೃದ್ಧಿ ಮಾಡಿದರೆ ಬೇಸಿಗೆಯಲ್ಲಿ ಕುಡಿಯಲು ನೀರಿನ ಸಮಸ್ಯೆಯಾಗುವುದಿಲ್ಲ. ಅಲ್ಲದೇ ಬಾವಿ ನೀರು ಕುಡಿಯಲು ಸಹ ಯೋಗ್ಯ ಎಂದು ವೈಜ್ಞಾನಿಕ ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಅಧಿಕಾರಿಗಳು ಬೋರ್‌ವೆಲ್ ಕೊರೆಯಿಸಿ ಹಣ ಹಾಳುವ ಮಾಡುವ ಬದಲಾಗಿ ತೆರೆದ ಬಾವಿಗಳ ದುರಸ್ತಿಗೆ ಮುಂದಾಗಬೇಕು ಎನ್ನುವುದು ರೈತ ಹೋರಾಟಗಾರರಾದ ರವಿ ಸಿದ್ದಮನ್ನವರ, ರಾಜು ಪಾಟೀಲ, ರಾಮಪ್ಪ ಹರಿಜನ ಅವರ ಕೋರಿಕೆಯಾಗಿದೆ.

    1950 ಬಾವಿಗಳ ಅಭಿವೃದ್ಧಿ

    ಈಗಾಗಲೇ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ 489 ಗ್ರಾಪಂ ವ್ಯಾಪ್ತಿಯಲ್ಲಿ 1950 ತೆರೆದ ಬಾವಿ (ಕುಡಿಯುವ ನೀರು)ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೆಲ ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಸ್ಥಳೀಯರಿಗೆ ಅನುಕೂಲವಾಗಿದೆ. ಕೆಲ ಬಾವಿಗಳಲ್ಲಿ ನೀರಿಲ್ಲ. ಅಂತಹ ಬಾವಿಗಳನ್ನು ಮತ್ತೆ ಭರ್ತಿ ಮಾಡಲಾಗುತ್ತಿದೆ. ಇದೀಗ ಜೆಜೆಎಂ ಯೋಜನೆ ಅನುಷ್ಠಾನದಲ್ಲಿ ಎಲ್ಲರೂ ತೊಡಗಿಸಿಕೊಂಡಿದ್ದರಿಂದ ಈ ಬಾವಿಗಳ ಅಭಿವೃದ್ಧಿ ಕೆಲಸ ನನೆಗುದಿಗೆ ಬಿದ್ದಿದೆ ಎಂದು ಜಿಪಂ ನರೇಗಾ ನೋಡಲ್ ಅಧಿಕಾರಿಗಳು ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಸಾಕಷ್ಟು ತೆರೆದ ಬಾವಿಗಳಿವೆ. ಆದರೆ, ಸಮರ್ಪಕವಾಗಿ ನಿರ್ವಹಣೆ, ಅಭಿವೃದ್ಧಿ ಮಾಡದ ಕಾರಣ ಅವು ಹಾಳಾಗುತ್ತಿವೆ. ಈ ಬಾವಿಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತರುವ ಸಂಬಂಧ ಜಿಪಂ ಸಿಇಒ ಅವರೊಂದಿಗೆ ಚರ್ಚಿಸಲಾಗುತ್ತಿದೆ.
    | ಬಸವರಾಜ ಹೆಗ್ಗನಾಯಕ ಜಿಪಂ ಉಪ ಕಾರ್ಯದರ್ಶಿ (ಅಭಿವೃದ್ಧಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts