More

    ಅಭಿವೃದ್ಧಿಗೆ 1.70 ಲಕ್ಷ ಗ್ರಾಪಂ ಆಯ್ಕೆ

    ಬೆಳಗಾವಿ: ಹಳ್ಳಿಗಳನ್ನು ಸಮಗ್ರ ಅಭಿವೃದ್ಧಿಪಡಿಸುವುದು, ಮಹಿಳೆಯ ರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ 1.70 ಲಕ್ಷ ಗ್ರಾಪಂ ಆಯ್ಕೆ ಮಾಡಿ ಕೋಟ್ಯಂತರ ರೂ.ಅನುದಾನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಸಹಕಾರ ಇಲಾಖೆ ರಾಜ್ಯ ಸಚಿವ ಬಿ.ಎಲ್.ವರ್ಮಾ ಹೇಳಿದರು.

    ನೆಹರು ನಗರದ ವಿ.ಡಿ. ಪಾಟೀಲ ಸಭಾಂಗಣದಲ್ಲಿ ಶನಿವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರಣಾಳಿಕೆ ಸಲಹೆ ಸಂಗ್ರಹ ಅಭಿಯಾನ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಕುರಿತು ನಿರಂತರ ಪ್ರಚಾರದ ಜತೆಗೆ ಕಾರ್ಯಾಗಾರಗಳು ನಡೆಯುತ್ತಿವೆ. ಕೆಲ ಕಾರ್ಯಾಗಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಭಾಗವಹಿಸಿದ್ದಾರೆ ಎಂದರು.

    ಯೋಜನೆ ಎಲ್ಲರಿಗೂ ತಲುಪಲಿ: ದೇಶದ ಪ್ರತಿಯೊಬ್ಬ ಪ್ರಜೆಗೆ ಸರ್ಕಾರದ ಯೋಜನೆಗಳು ಮುಟ್ಟಬೇಕು, ಗುಣಮಟ್ಟದ ಸೌಲಭ್ಯಗಳು ಸಿಗಬೇಕು ಎಂಬ ಉದ್ದೇಶದಿಂದ ಪ್ರಧಾನಿ ಮೋದಿ ಸಾಕಷ್ಟು ಯೋಜನೆ ಅನುಷ್ಠಾನಗೊಳಿಸಿದ್ದಾರೆ. ಅಲ್ಲದೆ, 1.70 ಲಕ್ಷ ಗ್ರಾಪಂಗಳ ವ್ಯಾಪ್ತಿಯ ಹಳ್ಳಿಗಳನ್ನು ಸಮಗ್ರ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ವಿವಿಧ ಯೋಜನೆ ಕಾಮಗಾರಿಗಳಿಗೆ ವೇಗ ನೀಡುತ್ತಿದ್ದಾರೆ. ಗ್ರಾಪಂಗಳಿಗೆ ಒಟ್ಟು 2,500 ಕೋಟಿ ರೂ. ಅನುದಾನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.

    ಮಹಿಳಾ ಸಬಲೀಕರಣಕ್ಕೆ ಆದ್ಯತೆ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಪೂರಕವಾದ ಕಾಮಗಾರಿಗಳಿಗೆ ವೇಗ ನೀಡುತ್ತಿದ್ದಾರೆ. ಕೆಲ ರಾಜ್ಯಗಳು ತಂತ್ರಜ್ಞಾನ ಅಳವಡಿಸಿಕೊಂಡು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿವೆ. ಇನ್ನೂ ಕೆಲ ರಾಜ್ಯಗಳಲ್ಲಿ ತಂತ್ರಜ್ಞಾನ ಅಳವಡಿಕೆ ಪ್ರಗತಿ ಹಂತದಲ್ಲಿದೆ. ಹೆಚ್ಚಿನ ಸಂಖ್ಯೆಯಲ್ಲಿರುವ ಮಹಿಳೆಯರಿಗೆ ಸ್ವಉದ್ಯೋಗ, ಕೌಶಲ ತರಬೇತಿ ನೀಡಿ ಅವರೆಲ್ಲರನ್ನೂ ಮುಖ್ಯವಾಹಿನಿಗೆ ತರಲು ಪ್ರಧಾನಿ ಮೋದಿ ಅವರು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ಸರ್ಕಾರದ ಯೋಜನೆಗಳ ಕುರಿತು ಪ್ರತಿಯೊಬ್ಬರಿಗೆ ಮಾಹಿತಿ ನೀಡುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದರು.

    ಸಹಕಾರ ಕ್ಷೇತ್ರಕ್ಕೆ ಬಲ: ದೇಶದಲ್ಲಿ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದ್ದು, ಕಾಗದ ರಹಿತ ವ್ಯವಹಾರಕ್ಕೆ ಉತ್ತೇಜನ ನೀಡಲಾಗುತ್ತಿದೆ. ಸಹಕಾರಿ ಬ್ಯಾಂಕ್‌ಗಳ ಮೂಲಕ ಮಹಿಳಾ ಸಂಘಗಗಳಿಗೆ ಹೆಚ್ಚಿನ ಆರ್ಥಿಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರ ಸಂಪೂರ್ಣ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅನುಷ್ಠಾನಕ್ಕೆ ಬರಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳು, ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಬೇಕು. ಅಲ್ಲದೆ, ಅಭಿವೃದ್ಧಿಗೆ ಪೂರಕವಾಗಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಬೇಕು. ಆಯಾ ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ನೀಡಬೇಕು ಎಂದು ವರ್ಮಾ ಹೇಳಿದರು.

    ಶಾಸಕ ಅನಿಲ ಬೆನಕೆ, ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಬಿಜೆಪಿ ವಕ್ತಾರ ಎಂ.ಬಿ.ಝಿರಲಿ, ಮುರುೇಂದ್ರಗೌಡ ಪಾಟೀಲ, ಶರದ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts