More

    ಅಭಿವೃದ್ಧಿಗಾಗಿ ಸರ್ಕಾರಿ ಶಾಲೆ ಸ್ವಾಧೀನ, ಅಧಿಕಾರಿಗಳ ಅವೈಜ್ಞಾನಿಕ ಅಧಿಕಾರ ಬಳಕೆ, ಅಂಗನವಾಡಿ ಕೇಂದ್ರಕ್ಕೂ ಧಕ್ಕೆ

    ಬರಗೇನಹಳ್ಳಿ ಚಿಕ್ಕರಾಜು ದಾಬಸ್‌ಪೇಟೆ
    ಅಭಿವೃದ್ಧಿ ಹೆಸರಿನಲ್ಲಿ ನಡೆಯುವ ಕಾಮಗಾರಿಗಳು ಮತ್ತು ಭೂಸ್ವಾಧೀನ ಪ್ರಕ್ರಿಯೆಗಳಲ್ಲಿ ಅಧಿಕಾರಿಗಳ ಅವೈಜ್ಞಾನಿಕ ಕ್ರಮಗಳಿಂದ ಅನನುಕೂಲವೇ ಹೆಚ್ಚು ಎಂಬುದಕ್ಕೆ ಸೋಂಪುರ ಹೋಬಳಿಯ ಎಡೇಹಳ್ಳಿ ಗ್ರಾಮದ ಕೃಷಿಭೂಮಿ ಜತೆಗೆ ಸರ್ಕಾರಿ ಶಾಲೆಯನ್ನೂ ಸ್ವಾಧೀನಪಡಿಸಿಕೊಂಡಿರುವುದೇ ತಾಜಾ ಉದಾಹರಣೆ.

    ಅಧಿಕಾರಿಗಳ ಈ ನಿಲುವಿನಿಂದಾಗಿ ಸರ್ಕಾರಿ ಶಾಲೆಯ ಜತೆಗೆ ಅದು ಆಶ್ರಯ ನೀಡಿದ್ದ ಅಂಗನವಾಡಿ ಕೇಂದ್ರ ಕೂಡ ಅತಂತ್ರ ಸ್ಥಿತಿಗೆ ಸಿಲುಕಿದೆ.

    ಎಡೇಹಳ್ಳಿಯ ಸರ್ವೇ ನಂ.91ರಲ್ಲಿ 22 ಗುಂಟೆ ಭೂಮಿ ಇದ್ದು, ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರವಿದೆ. ಟ್ರಕ್ ಟರ್ಮಿನಲ್‌ಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2014ರಲ್ಲಿ ಶಾಲೆಯ ಜಾಗ ಸೇರಿ ಒಟ್ಟು 15 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದೆ. ಕೃಷಿ ಭೂಮಿಗಳ ಮಾಲೀಕರಿಗೆ ಪರಿಹಾರಧನವನ್ನೂ ಬಿಡುಗಡೆ ಮಾಡಿದೆ. ಆದರೆ ಶಾಲೆಯ ಜಾಗಕ್ಕೆ ಮಾತ್ರ ಯಾವುದೇ ಪರಿಹಾರ ಒದಗಿಸಿಲ್ಲ ಹಾಗೂ ಕಾಮಗಾರಿಯೂ ಆರಂಭವಾಗಿಲ್ಲ. ಈ ಯೋಜನೆಗಾಗಿ ಸರ್ಕಾರಿ ಶಾಲೆಯ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈಗ ಗ್ರಾಮದಲ್ಲಿ ಶಾಲೆಗೆ ಪರ್ಯಾಯ ಜಾಗವೂ ಸಿಗದಂತೆ ಆಗಿದೆ. ಗ್ರಾಮದಲ್ಲಿ 1 ಅಡಿಗೆ 3 ಸಾವಿರ ರೂ. ಬೆಲೆ ಇರುವುದು ಇದಕ್ಕೆ ಕಾರಣವಾಗಿದೆ. ಯಾರೂ ಜಾಗ ಬಿಟ್ಟುಕೊಡಲು ಮುಂದಾಗುತ್ತಿಲ್ಲ.

    ಅಂಧಕಾರದಲ್ಲಿ 40ಕ್ಕೂ ಹೆಚ್ಚು ಮಕ್ಕಳ ಭವಿಷ್ಯ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 40ಕ್ಕೂ ಹೆಚ್ಚು ಮಕ್ಕಳು ಇದ್ದು, ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲಾ ಕಟ್ಟಡ ತೆರವುಗೊಳಿಸುವ ಭೀತಿಯಲ್ಲೇ ಈ ಶಿಕ್ಷಕರು 8 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

    ಪರ್ಯಾಯ ವ್ಯವಸ್ಥೆಗೆ ಮನವಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದೇ ಕೊಠಡಿ ಇದ್ದು, ಇಬ್ಬರು ಶಿಕ್ಷಕರಿಗೆ ಏಕಕಾಲಕ್ಕೆ ಪಾಠ ಮಾಡಲು ಕಷ್ಟವಾಗುತ್ತಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅನುವಾಗುವಂತೆ ಶಾಲೆಗೆ ಪರ್ಯಾಯ ಸ್ಥಳವನ್ನು ಕಲ್ಪಿಸುವ ಜತೆಗೆ ಹೆಚ್ಚುವರಿ ಕೊಠಡಿಗಳನ್ನೂ ನಿರ್ಮಿಸಿಕೊಡಬೇಕು ಎಂದು ಶಿಕ್ಷಣ ಇಲಾಖೆಯನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಶಾಲೆಯ ಜಾಗಕ್ಕೆ ಹೆದ್ದಾರಿ ಪ್ರಾಧಿಕಾರದಿಂದ ಹಣ ಬಿಡುಗಡೆಯಾಗಿದೆ. ಈ ಹಣ ಇನ್ನೂ ಪ್ರಾಧಿಕಾರದ ಖಾತೆಯಲ್ಲಿಯೇ ಉಳಿದಿದೆ. ನಮಗೆ ಹಣ ಬೇಡ, ಪರ್ಯಾಯ ಜಾಗ ಕೊಡಿ ಎಂದು ಇಲಾಖೆ ವತಿಯಿಂದ ಮನವಿ ಮಾಡಿಕೊಳ್ಳಲಾಗಿದೆ.
    ರಮೇಶ್, ಬಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts