More

    ಅಪ್ರಾಪ್ತರು ವಾಹನ ಓಡಿಸಿದ್ರೆ ಪಾಲಕರಿಗೆ ಶಾಸ್ತಿ -ಎಎಸ್ಪಿ ವಿಜಯಕುಮಾರ್ ಎಚ್ಚರಿಕೆ -ಸಂಚಾರ ಅರಿವು ಕಾರ್ಯಕ್ರಮ 

    ದಾವಣಗೆರೆ: ಅಪ್ರಾಪ್ತ ಮಕ್ಕಳಿಗೆ ಬೈಕ್ ಇತರೆ ವಾಹನ ಚಲಾಯಿಸಲು ಪಾಲಕರು ಅವಕಾಶ ನೀಡಬಾರದು. ಪೊಲೀಸರು ಒಂದೆರಡು ಬಾರಿ ತಿಳಿವಳಿಕೆ ನೀಡಿ ಕಳಿಸಬಹುದು. ಇದೇ ವರಸೆ ಮುಂದುವರಿಸಿದರೆ ದಂಡಂ ದಶಗುಣಂ ಅನಿವಾರ್ಯ ಎಂದು ಎಎಸ್ಪಿ ವಿಜಯಕುಮಾರ್ ಎಂ. ಸಂತೋಷ್ ಎಚ್ಚರಿಕೆ ನೀಡಿದರು.
    ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಗರದ ಸಂಚಾರ ವೃತ್ತ ನಿರೀಕ್ಷಕರ ಕಚೇರಿ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಶುಕ್ರವಾರ, ವಾಹನ ಚಲಾಯಿಸುವ ಅಪ್ರಾಪ್ತ ವಯಸ್ಸಿನ ಚಾಲಕರು, ವಾಹನ ಮಾಲೀಕರಿಗೆ ಹಮ್ಮಿಕೊಂಡಿದ್ದ ಸಂಚಾರ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
    ಅಪ್ರಾಪ್ತರು ವಾಹನ ಚಲಾಯಿಸಿದರೆ ನ್ಯಾಯಾಲಯವು ಪಾಲಕರಿಗೆ 25 ಸಾವಿರ ರೂ.ವರೆಗೆ ದಂಡದ ಜತೆಗೆ ಶಿಕ್ಷೆಯನ್ನೂ ನೀಡಬಹುದು. ವಾಹನ ವಶಪಡಿಸಿಕೊಂಡು ಚಾಲನಾ ಪರವಾನಗಿ ರದ್ದುಪಡಿಸಲಾಗುವುದು. ಈ ಅಪ್ರಾಪ್ತರಿಗೆ 25 ವರ್ಷದವರೆಗೆ ಡ್ರೈವಿಂಗ್ ಲೈಸೆನ್ಸ್ ನೀಡದಿರುವ ಕಾನೂನಿದೆ ಎಂದು ವಿವರಿಸಿದರು.
    ದಾವಣಗೆರೆ ಜಿಲ್ಲೆಯಲ್ಲಿ ಕಳೆದ ವರ್ಷ ರಸ್ತೆ ಅಪಘಾತಗಳಲ್ಲಿ 284 ಮಂದಿ ಮೃತಪಟ್ಟಿದ್ದಾರೆ, 700 ಜನ ಗಾಯಗೊಂಡಿದ್ದಾರೆ. ಇನ್ನು ದೇಶವ್ಯಾಪಿ ಮೃತಪಟ್ಟವರ ಸಂಖ್ಯೆ ಹೆಚ್ಚಬಹುದು. ಹೀಗಾಗಿ ಮಕ್ಕಳು ವಾಹನ ಚಲಾಯಿಸಲು ಪಾಲಕರು ಅನುಮತಿ ನೀಡಬಾರದು.
    ಕೆಲವರು ರಸ್ತೆಯಲ್ಲಿ ಅಜಾಗರೂಕ ಚಾಲನೆ ಅಥವಾ ತ್ರಿಬಲ್ ರೈಡಿಂಗ್ ಮಾಡಬಹುದು. ಕೆಲವು ಮಕ್ಕಳು ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿದ ಉದಾಹರಣೆಗಳೂ ಇವೆ. ಮಕ್ಕಳು, ಪಾಲಕರು ಜಾಗೃತಿಯಿಂದ ಅರ್ಧದಷ್ಟು ಅಪರಾಧ ತಗ್ಗಿದರೆ ನಮ್ಮ ಪ್ರಯತ್ನ ಸಾರ್ಥಕವಾಗಲಿದೆ ಎಂದರು.
    ದಾವಣಗೆರೆಯಲ್ಲಿ ಬೈಕ್ ಚಲಾಯಿಸುತ್ತಿದ್ದ 18 ವರ್ಷ ವರ್ಷದೊಳಗಿನ 34 ಮಕ್ಕಳನ್ನು (ಒಬ್ಬ ಕಾರು ಚಾಲನೆ ಮಾಡುತ್ತಿದ್ದ) ಸಂಚಾರ ಠಾಣೆ ಪೊಲೀಸರು ಹಿಡಿದು ಪಾಲಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಕರಣ ದಾಖಲಿಸದೆ ತಿಳಿವಳಿಕೆ ನೀಡುತ್ತಿದ್ದೇವೆ. ಇದೇ ಪ್ರವೃತ್ತಿ ಮುಂದುವರಿದಲ್ಲಿ ಪಾಲಕರಿಗೆ ದಂಡ, ಶಿಕ್ಷೆ ತಪ್ಪಿದ್ದಲ್ಲ ಎಂದು ಹೇಳಿದರು.
    ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಮಾತನಾಡಿ ಕರೊನಾದಿಂದ ಮೃತಪಟ್ಟವರ ಸಂಖ್ಯೆಯ ನಾಲ್ಕು ಪಟ್ಟು ಸಾವು ರಸ್ತೆ ಅಪಘಾತಗಳಿಂದ ಆಗಿದೆ. ಇಂದಿನ ಒತ್ತಡದ ಬದುಕಿನಲ್ಲಿ ಪಾಲಕರು ಮಕ್ಕಳ ಕಡೆ ಗಮನ ನೀಡಲು ಆಗುತ್ತಿಲ್ಲ. ಆದರೆ ಇದೇ ಕಾರಣಕ್ಕೆ ಮಕ್ಕಳ ಕೈಗೆ ಬೈಕ್ ನೀಡಬಾರದು. ಟ್ಯೂಷನ್ ಇತರೆ ಸದುದ್ದೇಶಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಪಾಲಕರಿಗೆ ಕಿವಿಮಾತು ಹೇಳಿದರು.
    ಬೈಕ್ ಕ್ರೇಜ್‌ನಿಂದಾಗಿ ಅಪ್ರಾಪ್ತ ಮಕ್ಕಳು ಅಜಾಗರೂಕ, ಅತಿ ವೇಗದ ಚಾಲನೆ ಮಾಡುತ್ತ ಅಪಘಾತಕ್ಕೆ ಕಾರಣವಾಗಬಹುದು. ಸಂಚಾರ ನಿಯಮ ಉಲ್ಲಂಘನೆ ಮಾಡುತ್ತ ಪೊಲೀಸರಿಂದ ತಪ್ಪಿಸಿಕೊಳ್ಳಲು ದುಸ್ಸಾಹಸ ಮಾಡಬಹುದು. ಪಾಲಕರು ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.
    ಇದೇ ವೇಳೆ ಮೊಬೈಲ್‌ಗಳಲ್ಲಿ ವಾಹನಗಳ ಫೋಟೋ ಕ್ಲಿಕ್ಕಿಸಿಕೊಂಡ ಪೊಲೀಸರು 34 ಅಪ್ರಾಪ್ತ ಮಕ್ಕಳ ಪಾಲಕರಿಗೆ ವಾಹನಗಳನ್ನು ಹಿಂತಿರುಗಿಸಿದರು. ಕಾರ್ಯಕ್ರಮದಲ್ಲಿ ಪ್ರೊಬೆಷನರಿ ಡಿವೈಎಸ್ಪಿ ಯಶವಂತ್, ಸಂಚಾರ ಠಾಣೆ ಪಿಎಸ್‌ಐ ಶೈಲಜಾ, ಕೆಟಿಜೆ ನಗರ ಠಾಣೆ ಪಿಎಸ್‌ಐ ಯು.ಜಿ.ಶಶಿಧರ, ಬಸವನಗರ ಠಾಣೆ ಪಿಎಸ್‌ಐ ಗುರುಬಸವರಾಜ್, ಬಡಾವಣೆ ಠಾಣೆ ಪಿಎಸ್‌ಐ ಮಲ್ಲಮ್ಮ ಚೌಬೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts