More

    ಅಪಾಯ ಆಹ್ವಾನಿಸುವ ಸೇತುವೆ ತಡೆಗೋಡೆ

    ಹಿರೇಕೆರೂರ: ಪಟ್ಟಣದ ಮಿನಿ ವಿಧಾನಸೌಧದ ಪಕ್ಕದಿಂದ ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ತೆರಳುವ ಮಾರ್ಗದ ಸೇತುವೆಯ ಒಂದು ಬದಿಯ ತಡೆಗೋಡೆ ಒಡೆದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

    ಕಳೆದ ವರ್ಷ ಅತಿವೃಷ್ಟಿಯಾದ ಸಂದರ್ಭದಲ್ಲಿ ದುರ್ಗಾದೇವಿ ಕೆರೆ ಕಾಲುವೆ ಸೇತುವೆ ಬಳಿ ತ್ಯಾಜ್ಯ ಸಂಗ್ರಹವಾಗಿ ನೀರು ಹರಿಯಲು ತೊಂದರೆಯಾಗಿತ್ತು. ಅಲ್ಲದೆ, ಕಾಲುವೆಯಲ್ಲಿ ಬಾಲಕನೊಬ್ಬ ತೇಲಿ ಹೋಗಿದ್ದ. ಈ ಹಿನ್ನೆಲೆಯಲ್ಲಿ ಬಾಲಕನ ಶವ ಹುಡುಕಾಟ ನಡೆಸುತ್ತಿದ್ದ ವೇಳೆ ಕಸ ಸಂಗ್ರಹಗೊಂಡಿದ್ದನ್ನು ಗಮನಿಸಿದ್ದ ತಹಸೀಲ್ದಾರ್ ರಿಯಾಜುದ್ದಿನ್ ಬಾಗವಾನ್, ಜೆಸಿಬಿ ಯಂತ್ರದಿಂದ ಸೇತುವೆಯ ಒಂದು ಭಾಗದ ತಡೆಗೋಡೆ ಒಡೆಸಿ ಹಾಕಿಸಿದ್ದರು. ಆದರೆ, ನಂತರ ದುರಸ್ತಿಪಡಿಸಲಿಲ್ಲ. ಸೇತುವೆ ತೀವ್ರ ತಿರುವಿನಿಂದ ಕೂಡಿದ್ದು, ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ.

    ಈ ಮಾರ್ಗದಲ್ಲಿ ತಾಲೂಕಿನ ಸೋಮನಹಳ್ಳಿ, ನೂಲಗೇರಿ, ಕಳಗೊಂಡ, ಬಸರೀಹಳ್ಳಿ ಹಾಗೂ ಪಟ್ಟಣದ ಅಂಬೇಡ್ಕರ್ ಕಾಲನಿ ಸೇರಿ ವಿವಿಧ ಗ್ರಾಮಗಳ ಜನರು, ಖಾಸಗಿ ಮತ್ತು ಸರ್ಕಾರಿ ಶಾಲಾ ಕಾಲೇಜ್​ಗಳ ವಿದ್ಯಾರ್ಥಿಗಳು ಹಾಗೂ ದುರ್ಗಾದೇವಿ ದೇವಸ್ಥಾನಕ್ಕೆ ಜನರು ಪ್ರತಿನಿತ್ಯ ಓಡಾಡುತ್ತಾರೆ. ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಯಾಗಿರುವ ತಹಸೀಲ್ದಾರ್ ರಿಯಾಜುದ್ದಿನ್ ಬಾಗವಾನ್ ಅವರು ಈ ಬಗ್ಗೆ ಗಮನಹರಿಸಿ ಕೂಡಲೆ ತಡೆಗೋಡೆ ದುರಸ್ತಿ ಮಾಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಸೇತುವೆಯ ಮಾರ್ಗವಾಗಿ ದುರ್ಗಾದೇವಿ ದೇವಸ್ಥಾನಕ್ಕೆ ನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನಕ್ಕೆ ತೆರಳುತ್ತಾರೆ ಹಾಗೂ ಶಾಲಾ ಕಾಲೇಜ್​ಗಳಿಗೆ ವಿದ್ಯಾರ್ಥಿಗಳು, ಹಳ್ಳಿಗಳಿಗೆ ಜನತೆ ಇದೇ ಮಾರ್ಗವಾಗಿ ಸಾಗುತ್ತಾರೆ. ಸ್ವಲ್ಪ ಮೈಮರೆತರೆ ಅಪಾಯ ತಪ್ಪಿದ್ದಲ್ಲ. ಕೂಡಲೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನಹರಿಸಿ ಸರಿಪಡಿಸಬೇಕು.
    | ರಘು ಮಾಳಮ್ಮನವರ, ಪ.ಪಂ. ಮಾಜಿ ಸದಸ್ಯ

    ಸೇತುವೆ ಬಳಿ ಕಸ ಸಂಗ್ರಹಗೊಂಡು ಶ್ರೀ ದುರ್ಗಾದೇವಿ ಕೆರೆಗೆ ನೀರು ಸರಾಗವಾಗಿ ಹರಿದು ಹೋಗಲು ತೊಂದರೆಯಾಗಿತ್ತು. ಅಲ್ಲದೆ, ಆ ಸಮಯದಲ್ಲಿ ನೀರಿನಲ್ಲಿ ತೇಲಿ ಹೋಗಿದ್ದ ಬಾಲಕನ ಶವ ಎಷ್ಟೇ ಶೋಧ ನಡೆಸಿದರೂ ಸಿಕ್ಕಿರಲಿಲ್ಲ. ಕಾರಣ ಅಲ್ಲಿನ ಕಸ ತೆಗೆಯಲು ಒಂದು ಬದಿಯ ತಡೆಗೋಡೆ ಒಡೆಸಿ ಹಾಕಲಾಗಿತ್ತು. ಶೀಘ್ರವೇ ಸರಿಪಡಿಸಲಾಗುವುದು.
    | ರಿಯಾಜುದ್ದಿನ್ ಭಾಗವಾನ್, ತಹಸೀಲ್ದಾರ್, ಪ.ಪಂ. ಆಡಳಿತಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts