More

    ಅನ್ಯಾಯದ ವಿರುದ್ಧ ಧೈರ್ಯವಾಗಿ ಮಾತನಾಡಿ

    ಚಿತ್ರದುರ್ಗ: ಅನ್ಯಾಯದ ವಿರುದ್ಧ ಧೈರ್ಯವಾಗಿ ಮಾತನಾಡಬೇಕು. ಆಗ ಮಾತ್ರ ನ್ಯಾಯ ಒದಗಿಸಲು ಸಾಧ್ಯ. ತೊಂದರೆಯಲ್ಲಿ ಇರುವವರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಿ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಎಸ್.ರೇಖಾ ಸಲಹೆ ನೀಡಿದರು.

    ಜಿಪಂ ಸಭಾಂಗಣದಲ್ಲಿ ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಸರಸ್ವತಿ ಕಾನೂನು ಕಾಲೇಜಿನಿಂದ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಗುರುವಾರ ನಡೆದ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅರೆಕಾಲಿಕ ಕಾನೂನು ಸ್ವಯಂ ಸೇವಕರಾಗಬೇಕು. ಎಲ್ಲಿಯೇ ಸಮಸ್ಯೆ ಕಂಡು ಬಂದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಕಿವಿಮಾತು ಹೇಳಿದರು.

    ಬಾಲ್ಯವಿವಾಹ ಸೇರಿ ಇತರೆ ಪ್ರಕರಣ ಕಂಡು ಬಂದಾಗ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು. ಆದರೆ, ಯಾರೂ ಇದನ್ನು ಮಾಡುತ್ತಿಲ್ಲ. ಈ ಮನಸ್ಥಿತಿಯಿಂದ ಹೊರಬಂದು, ಇದು ಕೂಡ ನಮ್ಮ ಕರ್ತವ್ಯವೆಂದು ತಿಳಿದು ಕಾರ್ಯಪ್ರವೃತ್ತರಾಗಿ ಎಂದು ಕರೆ ನೀಡಿದರು.

    ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಮಾತನಾಡಿ, ಜಿಲ್ಲಾಡಳಿತಕ್ಕೂ ಮುನ್ನ ನಮ್ಮ ಪ್ರಾಧಿಕಾರಕ್ಕೆ ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಸಂಬಂಧ ಅರ್ಜಿ ಸಲ್ಲಿಸುತ್ತಿದ್ದಾರೆ. ಇದು ಸಂಸ್ಥೆಯ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದರು.

    ಪ್ರಾಧಿಕಾರದಿಂದ ಜಿಲ್ಲೆಯಲ್ಲಿ ಈ ವರ್ಷ 127 ಕಾನೂನು ಅರಿವು ಕಾರ್ಯಕ್ರಮ, 10 ಕಾರ್ಯಾಗಾರ, 3 ಬೃಹತ್ ಲೋಕ ಅದಾಲತ್ ಮೂಲಕ 8,177 ಬಾಕಿ ಪ್ರಕರಣ ಇತ್ಯರ್ಥ ಪಡಿಸಲಾಗಿದೆ. 62.59 ಕೋಟಿ ರೂ. ಸಂದಾಯವಾಗಿದೆ. 70 ಪ್ರಕರಣಗಳಲ್ಲಿ ನೆರವು ನೀಡಲಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ 51 ಜನರನ್ನು ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನಾಗಿ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.

    ವಕೀಲ ಕೆ.ಎಸ್.ವಿಜಯ್, ಪ್ರಾಚಾರ್ಯೆ ಪ್ರೊ.ಎಂ.ಎಸ್.ಸುಧಾ ದೇವಿ, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts