More

    ಅನುಭವ ಮಂಟಪದಿಂದ ಅಧ್ಯಾತ್ಮ ಕ್ರಾಂತಿ

    ಗದಗ: ಜಗತ್ತಿಗೆ ಕಾಯಕನಿಷ್ಠೆಯ ಮಹತ್ವವನ್ನು ಸಾರಿದ ಬಸವಾದಿ ಶರಣರು ಸತ್ಯ-ಶುದ್ಧ ಕಾಯಕದಿಂದ ಆತ್ಮಸಾಕ್ಷಾತ್ಕಾರ ಸಾಧಿಸಿದರು ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಹೇಳಿದರು.
    ನಗರದ ತೋಂಟದಾರ್ಯಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2599ನೇ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಅರಿತೊಡೆ ಶರಣ, ಮರೆತೊಡೆ ಮಾನವ ಎಂಬಂತೆ ಶರಣತ್ವ ಶ್ರೇಷ್ಠವಾಗಿದ್ದು, 12ನೇ ಶತಮಾನದಲ್ಲಿ ಜಾತಿಯ ಮೂಲವೇ ಕಾಯಕ ಎಂದು ತಿಳಿಸಿದ ಬಸವೇಶ್ವರರು ಭೇದಗಳನ್ನು ಅಲ್ಲಗಳೆದರು. ಎಲ್ಲ ಜಾತಿ-ಜನಾಂಗದವರು ಒಂದೇ ಸೂರಿನಡಿ ವಿಚಾರ ವಿನಿಯಮ ಮಾಡುವ ಅನುಭವ ಮಂಟಪವನ್ನು ಹುಟ್ಟುಹಾಕಿದ ಬಸವೇಶ್ವರರು ಇದರ ಮೂಲಕ ಆಧ್ಯಾತ್ಮಿಕ ಕ್ರಾಂತಿಯನ್ನೇ ಮಾಡಿದರು’ ಎಂದರು.
    ಹೆಂಡದ ಮಾರಯ್ಯ, ಕಸಗುಡಿಸುವ ಸತ್ಯಕ್ಕ ಹಾಗೂ ಸೂಳೆ ಸಂಕವ್ವೆಯಂಥವರು ಸಹ ಅದ್ಭುತ ವಚನಗಳನ್ನು ರಚಿಸಿದ್ದು ಗಮನಾರ್ಹ ವಿಷಯವಾಗಿದೆ. ಮಹಿಳೆಯರಿಗೆ ಸಾಮಾಜಿಕ-ಧಾರ್ವಿುಕ ಅಸ್ಥಿತ್ವವೇ ಇಲ್ಲದ ಕಾಲದಲ್ಲಿ ಬಸವೇಶ್ವರರು ಮಹಿಳಾ ಅಸ್ಮಿತೆಗೆ ಭದ್ರ ಬುನಾದಿ ಒದಗಿಸಿದರು. ಬಸವಾದಿ ಶರಣರ ಸಮಕಾಲೀನರಾಗಿದ್ದ ವೈದ್ಯ ಸಂಗಣ್ಣನವರು ಕಲ್ಯಾಣದಲ್ಲಿನ ಶರಣರ ಆರೋಗ್ಯದ ಕಾಳಜಿ ವಹಿಸುತ್ತಿದ್ದರು. ಆರೋಗ್ಯ ಇದ್ದಲ್ಲಿ ಆಧ್ಯಾತ್ಮ, ಆಧ್ಯಾತ್ಮ ಇದ್ದಲ್ಲಿ ಆರೋಗ್ಯ ಎನ್ನುವುದು ಇವರ ತತ್ವವಾಗಿತ್ತು ಎಂದರು.
    ಗಿರಿಜಕ್ಕ ಧರ್ಮರೆಡ್ಡಿ ಉಪನ್ಯಾಸ ನೀಡಿ, 12ನೇ ಶತಮಾನದ ವೈಚಾರಿಕ ಕ್ರಾಂತಿ ಜಗತ್ತಿನ ಅಭೂತಪೂರ್ವ ಕ್ರಾಂತಿಗಳಲ್ಲಿ ಒಂದಾಗಿದ್ದು, ವೈಯಕ್ತಿಕ ಅಭಿವೃದ್ಧಿಯ ಜತೆಗೆ ದೇಶದ ಅಭಿವೃದ್ಧಿ ಸಹ ಕಾಯಕದಿಂದ ಸಾಧ್ಯ ಎಂದು ಬಸವೇಶ್ವರರು ತಿಳಿಸಿದ್ದಾರೆ ಎಂದರು.
    ವೈದ್ಯ ಸಂಗಣ್ಣನವರ 24 ವಚನಗಳು ಲಭ್ಯವಾಗಿದ್ದು, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಇವರ ಅಂಕಿತವಾಗಿದೆ. ಬಹಿರಂಗ ಚಿಕಿತ್ಸೆಯ ಜತೆಗೆ ಅಂತರಂಗದ ಆಧ್ಯಾತ್ಮಿಕ ಚಿಕಿತ್ಸೆಗೂ ಮಹತ್ವ ನೀಡಿದ್ದ ಸಂಗಣ್ಣನವರು, ಶಿವಯೋಗವು ಎಲ್ಲ ರೋಗಗಳಿಗೆ ಪರಿಹಾರ ಎಂದರು. ಎಲ್ಲ ರೋಗಗಳಿಗಿಂತ ಭವರೋಗ ದೊಡ್ಡದಾಗಿದ್ದು, ಇದನ್ನು ನಿವಾರಿಸಲು ಶರಣರ ಸಂಗ ಅವಶ್ಯಕ ಎನ್ನುವುದು ಇವರ ನಿಲುವಾಗಿತ್ತು ಎಂದರು.
    ಸಿದ್ಧಲಿಂಗೇಶ ಮುದ್ಲಾಪೂರ ಧರ್ಮಗ್ರಂಥ ಪಠಿಸಿದರು. ಪುಷ್ಪಾವತಿ ಭಾಂಡಗೆ ವಚನಚಿಂತನಗೈದರು. ಗುರನಾಥ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ವಚನ ಸಂಗೀತ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts