More

    ಅನುದಾನ ವಾಪಸು ಪಡೆಯಲು ಚಿಂತನೆ

    ಶಿರಸಿ: ಅಕ್ಷರ ದಾಸೋಹ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಬ್ಯಾಂಕ್ ಖಾತೆಯಲ್ಲಿ ಬಾಕಿ ಉಳಿದಿರುವ ಮೊತ್ತದ ಮಾಹಿತಿಯನ್ನು ಕ್ರೋಡೀಕರಿಸಿ ನೀಡುವಂತೆ ಅಕ್ಷರ ದಾಸೋಹ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆಯು ಸೂಚನೆ ನೀಡಿದ್ದು, ಶಿರಸಿ ಶೈಕ್ಷಣಿಕ ಜಿಲ್ಲೆಯೊಂದರಲ್ಲೇ 50 ಲಕ್ಷ ರೂಪಾಯಿಗೂ ಅಧಿಕ ಮೊತ್ತವು ಸರ್ಕಾರಕ್ಕೆ ವಾಪಸ್ ಆಗುವ ಸಾಧ್ಯತೆಯಿದೆ.

    ಕೋವಿಡ್- 19 ಹಿನ್ನೆಲೆಯಲ್ಲಿ ರಾಜ್ಯ ಆಹಾರ ಆಯೋಗವು, ಶಾಲೆಗಳಲ್ಲಿ ನೀಡುವ ಮಧ್ಯಾಹ್ನದ ಉಪಾಹಾರ ಯೋಜನೆಗೆ ಸಂಬಂಧಿಸಿದ ಮೊತ್ತವು ಖಾತೆಯಲ್ಲೇ ಉಳಿದಿರುವುದನ್ನು ಗಮನಿಸಿ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿತ್ತು. ಕಾರಣ ಶಾಲೆಗಳ ಖಾತೆಗಳಲ್ಲಿ ಉಳಿದಿರುವ ಅನುದಾನವನ್ನು ವಾಪಸ್ ಪಡೆಯುವ ಸಲುವಾಗಿ ಅನುದಾನದ ಮಾಹಿತಿಯನ್ನು ಅಕ್ಟೋಬರ್ 5ರೊಳಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶನಾಲಯಕ್ಕೆ ಸಲ್ಲಿಸುವಂತೆ ಆಯಾ ಜಿಲ್ಲೆಯ ಅಕ್ಷರ ದಾಸೋಹ ಅಧಿಕಾರಿಗಳಿಗೆ ಸೆ. 30ರಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಯೋಜನೆಗೆ ಸಂಬಂಧಿಸಿದಂತೆ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರು ಆಯಾ ತಾಲೂಕಿನ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದು ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಂಬಂಧಿಸಿದ ಅಕ್ಷರ ದಾಸೋಹ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪ್ರಸ್ತುತ ಮುಖ್ಯ ಶಿಕ್ಷಕರಿಂದ ಶಾಲೆಗಳಲ್ಲಿ ಉಳಿದಿರುವ ಮೊತ್ತದ ಮಾಹಿತಿ ಪಡೆಯಲಾಗುತ್ತಿದೆ.

    ಅಂದಾಜು 50 ಲಕ್ಷ ರೂಪಾಯಿ: ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಸೇರಿ 1259 ಶಾಲೆಗಳಿವೆ. 1ರಿಂದ 10ನೇ ತರಗತಿ ಒಳಗಿನ 85 ಸಾವಿರ ವಿದ್ಯಾರ್ಥಿಗಳು ಯೋಜನೆ ವ್ಯಾಪ್ತಿಯಲ್ಲಿ ಬರುತ್ತಾರೆ. ಅಕ್ಷರ ದಾಸೋಹಕ್ಕಾಗಿ ಸರ್ಕಾರವು 1ರಿಂದ 5ನೇ ತರಗತಿಯ ಮಗುವಿಗೆ ಪ್ರತಿ ದಿನಕ್ಕೆ ತರಕಾರಿಗಾಗಿ 1.50 ರೂ. ಹಾಗೂ 6 ರಿಂದ 10ನೇ ತರಗತಿಯ ಮಕ್ಕಳಿಗೆ ನಿತ್ಯ 2.70 ರೂ. ಖರ್ಚು ಮಾಡುತ್ತಿದೆ. ಶಿರಸಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ ಎಲ್ಲ ಶಾಲೆಗಳಿಂದ ಅಂದಾಜು 50 ಲಕ್ಷ ರೂ. ಮೊತ್ತ ಬಾಕಿಯಿರುವ ಸಾಧ್ಯತೆಯಿದೆ ಎಂಬುದು ಶಿಕ್ಷಣಾಧಿಕಾರಿಗಳ ಮಾಹಿತಿ.

    ಶಿಕ್ಷಣ ಇಲಾಖೆಯ ನಡೆಗೆ ಶಾಲಾಭಿವೃದ್ಧಿ ಸಮಿತಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಶಾಲೆಯ ಖಾತೆಯಲ್ಲಿರುವ ಮೊತ್ತ ಖಾತೆಯಲ್ಲಿಯೇ ಉಳಿದರೆ ಶಾಲೆ ಆರಂಭವಾದ ನಂತರ ಬಳಸಲು ಅನುಕೂಲ ಆಗುತ್ತಿತ್ತು. ಕೋವಿಡ್- 19 ಹಿನ್ನೆಲೆಯಲ್ಲಿ ಶಾಲೆಗಳು ಬಂದ್ ಆಗಿದ್ದರಿಂದ ಅನುದಾನ ಬಳಕೆಯಾಗದೆ ಉಳಿದಿದೆ. ಬಾಕಿ ಮೊತ್ತವನ್ನು ಇಲಾಖೆ ವಾಪಸ್ ಪಡೆಯಲು ಮುಂದಾಗಿದೆ. ತಕ್ಷಣ ಈ ಸುತ್ತೋಲೆ ವಾಪಸ್ ಪಡೆಯಬೇಕು.
    | ಕೆ.ಎಸ್. ಹೆಗಡೆ ಅಭಿವೃದ್ಧಿ ಸಮಿತಿಯ ಪ್ರಮುಖ

    ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಬ್ಯಾಂಕ್ ಖಾತೆಯಲ್ಲಿ ಬಾಕಿ ಉಳಿದಿರುವ ಮೊತ್ತದ ಮಾಹಿತಿ ನೀಡುವಂತೆ ಇಲಾಖೆ ನೀಡಿದ ಆದೇಶದನ್ವಯ ಆಯಾ ಶಾಲೆ ಮುಖ್ಯ ಶಿಕ್ಷಕರಿಂದ ಮಾಹಿತಿ ಕ್ರೋಡೀಕರಿಸಿ ಇಲಾಖೆ ಸೂಚಿಸಿದ ವೆಬ್​ಸೈಟ್​ಗೆ ಅಪ್​ಲೋಡ್ ಮಾಡಲು ತಿಳಿಸಲಾಗಿದೆ.
    | ದಿವಾಕರ ಶೆಟ್ಟಿ ಡಿಡಿಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts