More

    ಹಳಿ ಏರದ ಬೆಳಗಾವಿ ರೈಲು ಮಾರ್ಗ

    ವಿಕ್ರಮ ನಾಡಿಗೇರ ಧಾರವಾಡ
    ಬಹು ನಿರೀತ ಧಾರವಾಡ&ಬೆಳಗಾವಿ ನೇರ ರೈಲ್ವೆ ಮಾರ್ಗಕ್ಕೆ ಕಾಲ ಕೂಡಿ ಬರದಂತಾಗಿದೆ. ಸುಮಾರು 4 ವರ್ಷಗಳಿಂದ ಒಂದಿಲ್ಲ ಒಂದು ಕಾರಣಕ್ಕೆ ರೈಲು ಮಾರ್ಗ ಹಳಿ ತಪ್ಪುತ್ತಲೇ ಇದೆ. ಮುಂದಾಲೋಚನೆ ಇಲ್ಲದೆ ಆಗುತ್ತಿರುವ ಎಡವಟ್ಟುಗಳಿಂದ ಯೋಜನೆ ಮತ್ತಷ್ಟು ವಿಳಂಬವಾಗುತ್ತಿದೆ.
    ಯೋಜನೆ ಆರಂಭದಲ್ಲೇ ಸಾಕಷ್ಟು ಅಡೆತಡೆಗಳು ಎದುರಾಗುತ್ತಿವೆ. ಒಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗುತ್ತಿದೆ. ಈ ಯೋಜನೆ ಪ್ರಕಾರ ರೈಲು ಮಾರ್ಗ ನಿರ್ಮಾಣಕ್ಕೆ ಸರ್ವೇ ನಡೆಸಿದ ಸಮಯದಲ್ಲಿ ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿನ ಯುಪ್ಲೆಕ್ಸ್​ ಕಂಪನಿ ಭೂಮಿ ನೀಡಲು ವಿರೋಧಿಸಿತ್ತು. ಆ ಸಮಸ್ಯೆ ಪರಿಹರಿಸಿದ ಬಳಿಕ ಮುಮ್ಮಿಗಟ್ಟಿ ರೈತರು, ಗ್ರಾಮಸ್ಥರು ಭೂಮಿ ನೀಡುವುದಿಲ್ಲ ಎಂದು ಪಟ್ಟು ಹಿಡಿದಿರುವುದು ಯೋಜನೆಗೆ ಹಿನ್ನಡೆಯಾಗಿದೆ.
    ಧಾರವಾಡ &ಬೆಳಗಾವಿ ಮಧ್ಯೆ ರಸ್ತೆ ಮಾರ್ಗ 76 ಕಿ.ಮೀ. ಇದ್ದು, 1 ಗಂಟೆ 15 ನಿಮಿಷದಲ್ಲಿ ಕ್ರಮಿಸಬಹುದು. ಆದರೆ ರೈಲಿನಲ್ಲಿ ಅಂದಾಜು 2.30 ಗಂಟೆ ಪ್ರಯಾಣ ಮಾಡಬೇಕು. ಇದರಿಂದ ನೂತನ ರೈಲು ಮಾರ್ಗ ಮಾಡಲು ಈ ಹಿಂದೆ ರೈಲೆ ಇಲಾಖೆ ರಾಜ್ಯ ಸಚಿವ ರಾಗಿದ್ದ ಸುರೇಶ ಅಂಗಡಿ ಕನಸು ಕಂಡಿದ್ದರು. ಆ ಯೋಜನೆ ಕೇಂದ್ರದ ಆಯ&ವ್ಯಯದಲ್ಲಿ ಸಹ ಘೋಷಣೆ ಆಗಿತ್ತು. ಯೋಜನೆಯಂತೆ ಸದ್ಯ ಧಾರವಾಡ ತಾಲೂಕಿನ ಕ್ಯಾರಕೊಪ್ಪ, ಮುಮ್ಮಿಗಟ್ಟಿ ಮಾರ್ಗ, ಹೈಕೋರ್ಟ್​ ಬಳಿಯಿಂದ ಬೆಳಗಾವಿಯತ್ತ ಮಾರ್ಗ ಗುರುತಿಸಲಾಗಿದೆ. ಇದಕ್ಕೆ 927.42 ಕೋಟಿ ರೂ. ಅನುದಾನ ಮೀಸಲಿದೆ. ಜಿಲ್ಲೆಯಲ್ಲಿ 225 ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 602 ಎಕರೆ ಜಮೀನು ಬೇಕು. ರಾಜ್ಯ ಸರ್ಕಾರ ಶೇ. 80ರಷ್ಟು ಭೂ ಸ್ವಾಧಿನ ಮಾಡಿಕೊಟ್ಟಾಗ ಕೇಂದ್ರ ಸರ್ಕಾರ ಹಂತ ಹಂತವಾಗಿ ಕಾಮಗಾರಿ ಆರಂಭಿಸಲಿದೆ.
    ಆದರೆ ಈ ಯೋಜನೆಗೆ ಭೂ ಸ್ವಾಧಿನ ಪ್ರಕ್ರಿಯೆಯೇ ತಲೆ ನೋವಾಗಿದೆ. ಮುಮ್ಮಿಗಟ್ಟಿ ಗ್ರಾಮದ ಸರ ಹದ್ದಿನಲ್ಲಿ ಸುಮಾರು 3800 ಎಕರೆ ಜಮೀನಿದೆ. ಇದರಲ್ಲಿನ ಬಹುತೇಕ ಜಮೀನನ್ನು ಕೈಗಾರಿಕೆ ಸೇರಿ ಇತರ ಕಾರ್ಯಗಳಿಗೆ ರೈತರು ಬಿಟ್ಟು ಕೊಟ್ಟಿದ್ದಾರೆ. ಇದೀಗ ರೈಲು ಮಾರ್ಗಕ್ಕೆ ಎಂದು ಜಮೀನು ನೀಡಿದರೆ ನೀಡಿದರೆ ಗತಿ ಏನು? ಎಂಬುದು ಅವರ ಚಿಂತೆ ಎದುರಾಗಿದೆ. ಇದೇ ಕಾರಣಕ್ಕೆ ಗ್ರಾಮಸ್ಥರು ಜಮೀನು ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
    ಗ್ರಾಮ ಹಾಗೂ ಸುತ್ತಲಿನ ಭೂಮಿ ಸೇರಿ ಸುಮಾರು 39 ಎಕರೆ ಜಾಗ ಸ್ವಾಧಿನಕ್ಕೆ 20ಕ್ಕೂ ಹೆಚ್ಚು ರೈತರಿಗೆ ನೋಟಿಸ್​ ನೀಡಲಾಗಿದೆ. ಆದರೆ ಅವುಗಳನ್ನು ರೈತರು ಮರಳಿ ಇಲಾಖೆಗೆ ಕಳುಹಿಸಿದ್ದಾರೆ. ಈ ಮಾರ್ಗ ಕೈ ಬಿಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಒಂದು ಕಂಪನಿಗೆ ಮಣಿದ ಸರ್ಕಾರ ನಮ್ಮ ಬೇಡಿಕೆಗೂ ಸ್ಪಂದಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.
    ಮುಮ್ಮಿಗಟ್ಟಿ ಗ್ರಾಮಸ್ಥರ ವಿರೋಧಕ್ಕೆ ಸರ್ಕಾರ ಮಾರ್ಗ ಬದಲಾವಣೆಗೆ ಒಪ್ಪಿಕೊಂಡಲ್ಲಿ ಪುನಃ ರೈಲು ಮಾರ್ಗದ ಸಮೀಕ್ಷೆ ನಡೆಯಬೇಕು. ಆ ಬಳಿಕ ಭೂ ಸ್ವಾಧಿನ ಪ್ರಕ್ರಿಯೆ ನಡೆಯಬೇಕು. ಇದೆಲ್ಲ ನಡೆಯಲು ತಿಂಗಳುಗಳೇ ಬೇಕು. ಹೀಗಾಗಿ ಧಾರವಾಡ-&ಬೆಳಗಾವಿ ಮಧ್ಯೆ ಕಡಿಮೆ ಸಮಯದಲ್ಲಿ ರೈಲು ಓಡಾಡುವ ಕನಸು ಸದ್ಯಕ್ಕಂತೂ ನನಸಾಗೋ ಸಾಧ್ಯತೆ ಇಲ್ಲ ಎಂಬುದು ಸ್ಪಷ್ಟ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts