More

    ಅನುದಾನ ತಂದು ಪೂಜೆ ನಡೆಸಲಿ, ಶಾಸಕರಿಗೆ ಸಚಿವರ ಸವಾಲು, ಹೊಸಕೋಟೆಯಲ್ಲಿ ಬೃಹತ್ ಲಸಿಕಾ ಅಭಿಯಾನಕ್ಕೆ ಎಂಟಿಬಿ ಚಾಲನೆ

    ಬೆಂಗಳೂರು ಗ್ರಾಮಾಂತರ: ನಮ್ಮ ಅವಧಿಯಲ್ಲಿ ಬಿಡುಗಡೆಯಾದ ಅನುದಾನದಿಂದ ಆರಂಭವಾಗಿರುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುವ ಶಾಸಕರು, ಸ್ವಂತ ಅನುದಾನ ತರಲು ಸಾಧ್ಯವಾಗದೆ ಬೇರೆಯವರ ಮೇಲೆ ವೃಥಾ ಆರೋಪ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ ಸ್ಥಳೀಯ ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಕಿಡಿಕಾರಿದರು.

    ಹೊಸಕೋಟೆಯಲ್ಲಿ ಶುಕ್ರವಾರ ಲಸಿಕಾ ಮೇಳಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರತಿ ಬಾರಿ ಪ್ರೋಟೋಕಾಲ್ ಬಗ್ಗೆ ಮಾತನಾಡುವ ಶಾಸಕರು ಪದೇಪದೆ ಪ್ರೋಟೋಕಾಲ್ ಉಲ್ಲಂಸುವುದು ಸಾಮಾನ್ಯವಾಗಿದೆ ಎಂದರು.
    ಸರ್ಕಾರದ ಅನುದಾನ ತರುವುದು ಬಿಟ್ಟು ಮಾತಿನಲ್ಲೆ ಮನೆಕಟ್ಟಲು ಪ್ರಯತ್ನಿಸುತ್ತಾರೆ. ಸರ್ಕಾರದಿಂದ ಅನುದಾನ ತಂದು ಭೂಮಿಪೂಜೆ ಮಾಡಲಿ, ಅದು ಬಿಟ್ಟು ನರೇಗಾ ಕಾಮಗಾರಿ, ನಮ್ಮ ಕಾಲದ ಅನುದಾನದಡಿ ನಡೆಯುತ್ತಿರುವ ಕಾಮಗಾರಿಗಳಿಗೆ ಚಾಲನೆ ನೀಡಿ, ಶಿಷ್ಟಾಚಾರ ಉಲ್ಲಂಘನೆ ಖ್ಯಾತೆ ತೆಗೆಯುವುದು ಏಕೆ ಎಂದು ಪ್ರಶ್ನಿಸಿದರು.

    ಸ್ಥಳೀಯ ಜನಪ್ರತಿನಿಧಿಗಳ ಜತೆಗೆ ಅಧಿಕಾರಿಗಳ ಗಮನಕ್ಕೂ ತರದೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಶಾಸಕರು ಬೇರೆಯವರಿಗೆ ಶಿಷ್ಟಾಚಾರದ ಬಗ್ಗೆ ಪಾಠ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

    ಹೊಸಕೋಟೆಯಲ್ಲಿ ಬೃಹತ್ ಮೇಳ: ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕರೊನಾ ನಿರ್ಮೂಲನೆಗೆ ರಾಮಬಾಣವಾಗಿರುವ ಕರೊನಾ ಲಸಿಕೆಯನ್ನು ಪ್ರತಿಯೊಬ್ಬರೂ ತಪ್ಪದೆ ಹಾಕಿಸಿಕೊಳ್ಳಬೇಕು ಎಂದು ಸಚಿವ ಎಂಟಿಬಿ ನಾಗರಾಜ್ ಮನವಿ ಮಾಡಿದರು.

    ಕರೊನಾ ಜನಜೀವನವನ್ನೇ ಬುಡಮೇಲು ಮಾಡಿದೆ, ಸಾಕಷ್ಟು ಸಾವುನೋವು ತಂದೊಡ್ಡಿದೆ. ಇಂಥ ಸೋಂಕಿನಿಂದ ರಕ್ಷಿಸಿಕೊಳ್ಳಲು ವ್ಯಾಕ್ಸಿನ್ ಕಡ್ಡಾಯವಾಗಿ ಪಡೆಯಬೇಕಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದರು.

    ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಎಲ್ಲಕಡೆಯಲ್ಲಿಯೂ ಬೃಹತ್ ಲಸಿಕಾ ಮೇಳ ಹಮ್ಮಿಕೊಂಡಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

    ಜಿಲ್ಲೆಯಲ್ಲಿ 60 ಸಾವಿರಕ್ಕೂ ಅಧಿಕ ಹಾಗೂ ಹೊಸಕೋಟೆ ತಾಲೂಕಿನಲ್ಲಿ 20 ಸಾವಿರಕ್ಕೂ ಹೆಚ್ಚು ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ, ತಾಲೂಕು ಆಸ್ಪತ್ರೆ, ತಾಲೂಕಿನ ಎಲ್ಲ ಆರೋಗ್ಯ ಕೇಂದ್ರಗಳು ಮತ್ತು ಗ್ರಾಮೀಣ ಭಾಗಗಳಲ್ಲಿ ಸಂಚಾರ ವಾಹನಗಳ ಮೂಲಕ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

    ಸೀರೆ ವಿತರಣೆ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ನಿಮಿತ್ತ ಶುಬಕೋರಿದ್ದ ಸಚಿವ ಎಂಟಿಬಿ, 1000 ಮಂದಿಗೆ ಸೀರೆ ವಿತರಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts