More

    ಅನಧಿಕೃತವಾಗಿ ನೀರು ಬಳಸಿದರೆ ಕ್ರಮ

    ಕೋಲಾರ: ಕೆಸಿ ವ್ಯಾಲಿಯಿಂದ ಕೆರೆಗಳಿಗೆ ಹರಿಯುತ್ತಿರುವ ನೀರನ್ನು ಅನಧಿಕೃತವಾಗಿ ಬಳಕೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
    ಜಿಲ್ಲಾ ಆಡಳಿತ, ಜಿಪಂ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಕೋಲಾರಮ್ಮ ಕೆರೆ ಸುಂದರೀಕರಣ ಹಾಗೂ ಕೆಸಿ ವ್ಯಾಲಿಯಿಂದ ಹೆಚ್ಚುವರಿಯಾಗಿ 40 ಎಂಎಲ್‌ಡಿ ನೀರು ಹರಿಸುವ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

    ಕೆಸಿ ವ್ಯಾಲಿ ನೀರನ್ನು ಅನಧಿಕೃತವಾಗಿ ಬಳಸುತ್ತಿರುವವರ ವಿರುದ್ಧ ಕ್ರಮಕ್ಕೆ ಅಭ್ಯಂತರವಿಲ್ಲ, ಹಸ್ತಕ್ಷೇಪ ಮಾಡುವುದಿಲ್ಲವೆಂದು ಜನಪ್ರತಿನಿಧಿಗಳು ಒಪ್ಪಿಗೆ ಸೂಚಿಸಿರುವಾಗ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ, ಆರೋಪಿಗಳ ಪರ ವಕಾಲತ್ತು ವಹಿಸಿ ಫೋನ್ ಮಾಡಿದರೆ ನನ್ನ ಗಮನಕ್ಕೆ ತನ್ನಿ, ಆಗ ಕಳ್ಳರು ಯಾರು, ನಿಜವಾದ ರೈತ ಯಾರು ಎಂಬುದು ತಿಳಿಯುತ್ತದೆ ಎಂದರು.

    ಕೆಸಿ ವ್ಯಾಲಿ 2ನೇ ಹಂತದ ಕಾಮಗಾರಿಗೆ 450 ಕೋಟಿ ರೂ. ಬಿಡುಗಡೆಗೆ ಆಡಳಿತಾತ್ಮಕ ಹಾಗೂ ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕಿರುವ ಮಾಹಿತಿಯಿದೆ. ಶೀಘ್ರ ಸಣ್ಣ ನೀರಾವರಿ ಇಲಾಖೆ ಸಚಿವ ಜಿ.ಸಿ.ಮಾಧುಸ್ವಾಮಿ, ಮುಖ್ಯ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು, ಯೋಜನೆಯಡಿ ಕಟ್ಟ ಕಡೆಯ ಕೆರೆಗೆ ನೀರು ಹರಿಯಲು ಟೈಲ್‌ಎಂಡ್ ಪಾಲಿಸಿ ಜಾರಿಗೆ ಇಲಾಖೆ ಗಮನ ಹರಿಸಬೇಕು ಎಂದರು.

    ಶಾಸಕ ಸಿ.ಕೃಷ್ಣಬೈರೇಗೌಡ ಮಾತನಾಡಿ, ಕೆಸಿ ವ್ಯಾಲಿ ಯೋಜನೆಯ 2ನೇ ಹಂತದ ಕಾಮಗಾರಿಗೆ ಅನುಮೋದನೆ ಸಿಕ್ಕಿರುವುದರಿಂದ ಮರು ಟೆಂಡರ್ ಕರೆಯುವ ಅಗತ್ಯವಿಲ್ಲ. ಆಡಳಿತಾತ್ಮಕ ಹಾಗೂ ಆರ್ಥಿಕ ಇಲಾಖೆ ಅನುಮೋದನೆಯಾಗಿ ಟೆಂಡರ್ ಕರೆದು ಗುತ್ತಿಗೆ ಸಂಸ್ಥೆ ಆಯ್ಕೆ ಮಾಡಿ 4 ತಿಂಗಳಾಗಿದೆ. ಇದಕ್ಕೆ ಕ್ಲಿಯರೆನ್ಸ್ ನೀಡಿದರೆ ಸಾಕು, ಮರು ಟೆಂಡರ್‌ಗೆ ಹೋಗುವ ಅವಶ್ಯಕತೆ ಇಲ್ಲ ಎಂದರು.

    ಮೊದಲ ಹಂತದಲ್ಲಿ 400 ಎಂಎಲ್‌ಡಿ ನೀರು ಒದಗಿಸಬೇಕೆಂದು ಒಪ್ಪಂದವಾಗಿದ್ದರೂ ಪ್ರತಿದಿನ 87 ಎಂಎಲ್‌ಡಿ ನೀರು ಖೋತಾ ಮಾಡಲಾಗುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲು ಉನ್ನತಮಟ್ಟದ ಸಭೆ ಏರ್ಪಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದರು.

    ಕೆಸಿ ವ್ಯಾಲಿ ಮೂಲಕ ಪ್ರತಿದಿನ 400 ಎಂಎಲ್‌ಡಿ ನೀರು ಹರಿಸಬೇಕು, ಪ್ರಸ್ತುತ 310 ಎಂಎಲ್‌ಡಿ ನೀರು ಹರಿಸಲಾಗುತ್ತಿದೆ, ಜಿಲ್ಲೆಯ 126 ಕೆರೆಗಳಿಗೆ ನೀರು ಹರಿಸುವ ಗುರಿಗೆ 80 ಕೆರೆಗಳಿಗೆ ಮಾತ್ರ ನೀರು ಹರಿದಿದ್ದು ಉಳಿದ ಕೆರೆಗಳಿಗೆ ನೀರು ತುಂಬಿಸುವುದು ಯಾವಾಗ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಪ್ರಶ್ನಿಸಿದರು. ಒಪ್ಪಂದದ ಪ್ರಕಾರ ನೀರು ಹರಿಸಲು ಬಿಡಬ್ಲುೃಎಸ್‌ಎಸ್‌ಬಿಗೆ ಸಮಸ್ಯೆ ಏನೆಂಬುದು ಅರ್ಥವಾಗುತ್ತಿಲ್ಲ, ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

    ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಕೋಲಾರಮ್ಮ ಕೆರೆಯನ್ನು 50 ಲಕ್ಷ ರೂ. ಖರ್ಚು ಮಾಡಿ ಸ್ವಚ್ಛಗೊಳಿಸಲಾಗಿದೆ. ಕೆಸಿ ವ್ಯಾಲಿ ನೀರು ತುಂಬಿದರೆ ಇದೊಂದು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳುತ್ತದೆ ಎಂದರು. ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಎತ್ತಿನಹೊಳೆ ವಿಚಾರದಲ್ಲಿ ಕೋಲಾರ ಭಾಷಣಕ್ಕೆ ಮುಂದು, ನೀರಿಗೆ ನೆರೆ ಜಿಲ್ಲೆಯವರು ಮುಂದೆ ಎಂಬಂತಾಗಿದೆ. ಎತ್ತಿನ ಹೊಳೆ ಯೋಜನೆ ಕಾಮಗಾರಿ ಬೇಗಮುಗಿಸಲು ಪರಿಹಾರ ಕಂಡುಕೊಳ್ಳಬೇಕು ಎಂದರು.

    ಸಿಎಂ ಜತೆ ಸಭೆಗೆ ಪ್ರಯತ್ನ: ಎತ್ತಿನಹೊಳೆ ಯೋಜನೆ ಕಾಮಗಾರಿ ಚುರುಕುಗೊಳಿಸಲು ಸಿಎಂ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳೊಂದಿಗೆ ಸಭೆ ಏರ್ಪಡಿಸಲು ಪ್ರಯತ್ನ ಮಾಡುವೆ, ಕೋಲಾರಮ್ಮ ಕೆರೆಯ ಸಮಗ್ರ ಅಭಿವೃದ್ಧಿಗೆ 8 ಕೋಟಿ ರೂ. ಜತೆಗೆ ಕೊರತೆಯಾಗುವ 3 ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಿ, ಸರ್ಕಾರದಿಂದ ಸಾಧ್ಯವಾಗದಿದ್ದರೆ ಸಿಎಸ್‌ಆರ್ ನಿಧಿಯಿಂದ ಹಣದ ವ್ಯವಸ್ಥೆ ಮಾಡಿಸುವೆ ಎಂದು ಲಿಂಬಾವಳಿ ಹೇಳಿದರು.

    ಶಾಸಕರಾದ ಕೆ.ಶ್ರೀನಿವಾಸಗೌಡ, ಎಚ್.ನಾಗೇಶ್, ಎಮ್ಮೆಲ್ಸಿಗಳಾದ ನಸೀರ್ ಅಹಮ್ಮದ್, ಇಂಚರ ಗೋವಿಂದರಾಜು, ನಗರಸಭೆ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಪ್ರವೀಣ್‌ಗೌಡ, ಕೂಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ನಗರಸಭೆ ಸದಸ್ಯ ಮುಬಾರಕ್, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ ಎಂ.ನಾಗರಾಜ್, ಎಸ್ಪಿ ಕಿಶೋರ್ ಬಾಬು, ಎಎಸ್‌ಪಿ ನಾರಾಯಣಸ್ವಾಮಿ, ಎಸಿ ಸೋಮಶೇಖರ್, ತಹಸೀಲ್ದಾರ್ ಶೋಭಿತಾ, ಸಣ್ಣ ನೀರಾವರಿ ಇಲಾಖೆಯ ಇಇ ಸುರೇಶ್ ಬಾಬು, ಎಇಇ ಬಸವೇಗೌಡ, ಕೆಸಿ ವ್ಯಾಲಿ ಯೋಜನೆಯ ಎಇಇ ಕೃಷ್ಣಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts