More

    ಅನಗತ್ಯವಾಗಿ ಬೀದಿಗಳಿದ್ರೆ ವಾಹನ ಸೀಜ್

    ಶಿವಮೊಗ್ಗ: ಜನರಲ್ಲಿ ಪೊಲೀಸರ ಬಗ್ಗೆ ಭಯ ಕಡಿಮೆ ಆಗಿದೆ. ಅಲ್ಲಲ್ಲಿ ಗುಂಪು ಸೇರುವ ಹಾಗು ಅನಗತ್ಯವಾಗಿ ಸುತ್ತಾಡುವವರಿಗೆ ತಕ್ಕ ಪಾಠ ಕಲಿಸಬೇಕು. ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ಸೀಜ್ ಮಾಡಿ ಮಧ್ಯಾಹ್ನ 2ರ ನಂತರ ಮತ್ತಷ್ಟು ಬಿಗಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೂಚನೆ ನೀಡಿದರು.

    ಡಿಎಆರ್ ಸಭಾಂಗಣದಲ್ಲಿ ಗುರುವಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಾಸ್ಕ್ ಧರಿಸದೆ ಓಡಾಡುವುದು ಹಾಗೂ ಅರ್ಧಂಬರ್ಧ ಮಾಸ್ಕ್ ಧರಿಸುವುದು ಫ್ಯಾಶನ್ ಆಗಿದೆ. ವಿನಾಕಾರಣ ಅಡ್ಡಾಡುವರಿಗೆ ಪೊಲೀಸ್ ಇಲಾಖೆ ಬಗ್ಗೆ ಭಯ ತರುವಂತೆ ಮಾಡುವ ಅನಿವಾರ್ಯತೆ ಇದೆ ಎಂದರು.

    ದ್ವಿಚಕ್ರ ವಾಹನಗಳಲ್ಲಿ ಓಡಾಡುವವರಿಗೆ ಕಡ್ಡಾಯವಾಗಿ ಕಡಿವಾಣ ಹಾಕಬೇಕು. ಮಾಸ್ಕ್ ಧರಿಸದ ಹಾಗೂ ಪರಸ್ಪರ ಅಂತರ ಕಾಪಾಡಿಕೊಳ್ಳದವರ ವಿರುದ್ಧ ಕಾನೂನಿನ ಮೂಲಕವೇ ಜಾಗೃತಿ ಮೂಡಿಸಬೇಕಿದೆ. ಕಟ್ಟುನಿಟ್ಟಿನ ಲಾಕ್​ಡೌನ್ ಸಂಬಂಧ ಇಲಾಖೆಗೆ ಎಲ್ಲ ಸೌಕರ್ಯ ಕಲ್ಪಿಸಲಾಗುವುದು. ಹೋಮ್ ಗಾರ್ಡ್​ಗಳ ಹೆಚ್ಚಳ, ಅಗತ್ಯ ವಾಹನಗಳ ವ್ಯವಸ್ಥೆ ಮಾಡಲಾಗುವುದೆಂದು ಭರವಸೆ ನೀಡಿದರು. ಡಿಸಿ ಕೆ.ಬಿ. ಶಿವಕುಮಾರ್, ಎಸ್ಪಿ ಕೆ.ಎಂ.ಶಾಂತರಾಜು, ಎಎಸ್ಪಿ ಡಾ. ಎಚ್.ಟಿ.ಶೇಖರ್ ಉಪಸ್ಥಿತರಿದ್ದರು.

    ಸೇನಾನಿಗಳಿಗೆ ಚಿಕಿತ್ಸೆಗೆ ವ್ಯವಸ್ಥೆ: ಪೊಲೀಸರು, ವೈದ್ಯರು ಸೇರಿ ಕರೊನಾ ಸೇನಾನಿಗಳಿಗೆ ಅನಾರೋಗ್ಯದ ನಿಮಿತ್ತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ಕುರಿತು ಈಗಾಗಲೇ ಒಂದು ಹಂತದ ಮಾತುಕತೆ ನಡೆಸಲಾಗಿದೆ. ಆದರೆ ಚಿಕಿತ್ಸೆ ನೀಡಬೇಕಾದ ವೈದ್ಯರು ಮತ್ತು ಸಿಬ್ಬಂದಿ ಮುಂದೆ ಬರಬೇಕು. ಆ ಬಗ್ಗೆಯೂ ಚರ್ಚೆ ನಡೆಸಿ ಸೇನಾನಿಗಳಿಗೂ ನಿಗದಿತ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಸಚಿವರು ಹೇಳಿದರು

    ವಾರ್ಡ್, ಬೂತ್ ಕಮಿಟಿ ರಚನೆ: ಕರೊನಾ ನಿಯಂತ್ರಿಸಲು ಪ್ರತಿ ವಾರ್ಡ್ ಹಾಗೂ ಬೂತ್​ವುಟ್ಟದಲ್ಲೂ ಜಿಲ್ಲಾದ್ಯಂತ ಕಮಿಟಿ ರಚಿಸಲಾಗಿದೆ. ಬಿಎಲ್​ಒಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಆಡಳಿತಾಧಿಕಾರಿಗಳು ಒಳಗೊಂಡಂತೆ ಹಲವು ಅಧಿಕಾರಿ ಮತ್ತು ಸಿಬ್ಬಂದಿ ಕಮಿಟಿಯಲ್ಲಿದ್ದಾರೆ. ಪ್ರತಿ ಕಂಟೇನ್ಮೆಂಟ್ ಜೋನ್ ಮತ್ತು ಮನೆ-ಮನೆಗೆ ತೆರಳಲು ಕಮಿಟಿಯವರಿಗೆ ಸೂಚಿಸಲಾಗಿದೆ. ಸರ್ಕಾರದಿಂದ ಅವರಿಗೆ ಶೀಘ್ರ ತರಬೇತಿ ನೀಡಲಾಗುತ್ತದೆ ಎಂದು ಡಿಸಿ ಕೆ.ಬಿ.ಶಿವಕುಮಾರ್ ಹೇಳಿದರು.

    ತಾಲೂಕು ಹಂತದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸರ್ವಲೆನ್ಸ್ ಮತ್ತು ಬೂತ್​ಕಮಿಟಿ ಇದ್ದು ಸ್ವಯಂಸೇವಕರಿಗೆ ತರಬೇತಿ ನೀಡಬಹುದು. ಕನಿಷ್ಠ ಪ್ರತಿ ವಾರ್ಡ್ ಅಥವಾ ಬೂತ್​ವುಟ್ಟದಲ್ಲಿ ಎರಡು ದಿನಕ್ಕೊಮ್ಮೆ ಸಭೆ ನಡೆಸಿ ಮಾಹಿತಿ ನೀಡಬೇಕು ಎಂದು ಹಿರಿಯ ಪೊಲೀಸರಿಗೆ ಸಲಹೆ ನೀಡಿದರು.

    ಜ್ವರದಿಂದ ಬಳಲುತ್ತಿದ್ದ ಎಎಸ್​ಐ ಅಲೆದಾಟ: ಶಿವಮೊಗ್ಗ ನಗರದಲ್ಲೇ ಜ್ವರದಿಂದ ಬಳಲುತ್ತಿದ್ದ 45 ವರ್ಷದ ಎಎಸ್​ಐ ಒಬ್ಬರು ಖಾಸಗಿ ಆಸ್ಪತ್ರೆಗಳಿಗೆ ಮೂರು ದಿನ ಅಲೆದಾಡಿದರೂ ಯಾರೊಬ್ಬರೂ ಒಳರೋಗಿಯಾಗಿ ದಾಖಲಿಸಿಕೊಳ್ಳದೇ ಸತಾಯಿಸಿದ್ದಾರೆ. ಆನಂತರ ಮೆಗ್ಗಾನ್ ಆಸ್ಪತ್ರೆಗೆ ಬಂದು ಅಡ್ಮಿಟ್ ಆಗಿರುವ ಘಟನೆ ಬೆಳಕಿಗೆ ಬಂದಿದೆ.

    ಇದನ್ನು ಸ್ವತಃ ದೊಡ್ಡಪೇಟೆ ಸಿಪಿಐ ವಸಂತ್​ಕುಮಾರ್ ಅವರು ಉಸ್ತುವಾರಿ ಸಚಿವರ ಗಮನಕ್ಕೆ ತಂದರು. ಕರೊನಾ ಟೆಸ್ಟ್ ಮಾಡಿಸಿದ್ದು ನೆಗೆಟಿವ್ ಎಂದು ಬಂದಿದ್ದರೂ ಯಾವ ಆಸ್ಪತ್ರೆಯಲ್ಲೂ ದಾಖಲಿಸಿಕೊಂಡಿಲ್ಲ. ಹೀಗಾದರೆ ಸಿಬ್ಬಂದಿ ಹೇಗೆ ಕೆಲಸ ಮಾಡಲು ಸಾಧ್ಯ? ಎಂದು ಬೇಸರ ವ್ಯಕ್ತಪಡಿಸಿದರು. ಹಾಗಾಗಿ ಸೇನಾನಿಗಳಿಗೆ ಖಾಸಗಿ ಆಸ್ಪತ್ರೆಯೊಂದನ್ನು ಕಾಯ್ದಿರಿಸಬೇಕು ಎಂದು ಮನವಿ ಮಾಡಿದರು.

    ಅಗತ್ಯ ವಸ್ತುಗಳಿಗೂ ವಿನಾಯಿತಿ ಬೇಡ: ಅಗತ್ಯ ವಸ್ತುಗಳ ನೆಪದಲ್ಲಿ ಜನ ರಸ್ತೆಗಳಿಯುವುದು ತಪ್ಪುತ್ತಿಲ್ಲ. ಹಾಗಾಗಿ ಅವಶ್ಯಕ ವಸ್ತುಗಳಿಗೂ ಸಮಯ ನಿಗದಿ ಮಾಡಬೇಕು. ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್​ಡೌನ್ ಜಾರಿಗೊಳಿಸಬೇಕು. ಅವಶ್ಯಕ ವಸ್ತುಗಳನ್ನು ಶುಕ್ರವಾರದೊಳಗೆ ಖರೀದಿಸುವಂತೆ ಜಾಗೃತಿ ಮೂಡಿಸಬೇಕು. ಇದರಿಂದ ಜನ ಸಂಚಾರಕ್ಕೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಬಹುದು ಎಂದು ಸೊರಬ ಸಿಪಿಐ ಮರುಳಸಿದ್ದಪ್ಪ ಹೇಳಿದರು.

    ಎದುರಾಗಿದೆ ಸಿಬ್ಬಂದಿ ಕೊರತೆ: ಜಿಲ್ಲೆಯಲ್ಲಿ ಕಂಟೇನ್ಮೆಂಟ್ ಜೋನ್ 200 ಗಡಿ ಸಮೀಪ ತಲುಪಿದೆ. 55 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿಗೆ ಕಚೇರಿಯಲ್ಲಿ ಕೆಲಸ ನೀಡಲಾಗಿದೆ. ಕೆಲ ಪೊಲೀಸರು ಕೋವಿಡ್-19ಗೆ ತುತ್ತಾಗಿದ್ದಾರೆ. ಇದರಿಂದ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿದ್ದು ಹೋಮ್ಾರ್ಡ್​ಗಳನ್ನು ತಾತ್ಕಲಿಕವಾಗಿ ನೇಮಕ ಮಾಡಬೇಕು. ಜತೆಗೆ ವಾಹನಗಳ ವ್ಯವಸ್ಥೆಯನ್ನೂ ಮಾಡಬೇಕಿದೆ ಎಂದು ಡಿವೈಎಸ್ಪಿ ಉಮೇಶ್ ನಾಯ್್ಕ ಸಚಿವರಿಗೆ ಮನವಿ ಮಾಡಿದರು.

    ಲಾಕ್​ಡೌನ್ ಪರಿಣಾಮಕಾರಿಗೊಳಿಸಲು ಮೆಡಿಕಲ್ ಶಾಪ್ ಹಾಗೂ ಆಸ್ಪತ್ರೆಗಳನ್ನು ಹೊರತುಪಡಿಸಿ ಕೆಲ ಅಗತ್ಯ ವಸ್ತುಗಳನ್ನು ನಿರ್ದಿಷ್ಟ ಅವಧಿ ನಂತರ ಬಂದ್ ಮಾಡುವ ಚಿಂತನೆ ಇದೆ. ಪ್ರಸ್ತುತ ಲಾಕ್​ಡೌನ್ ನಿಯಂತ್ರಣ ನೋಡಿಕೊಂಡು ಮುಂದೆ ಆ ಬಗ್ಗೆ ನಿರ್ಧರಿಸಲಾಗುವುದು.

    | ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ

    ಜನ ವಿನಾಕಾರಣ ಮನೆಯಿಂದ ಹೊರಗೆ ಬರುವುದನ್ನು ತಡೆಯಬೇಕು. ದಂಡ ವಿಧಿಸಿದರೂ ನಿರ್ಲಕ್ಷ್ಯ ಮನೋಭಾವ ಕಾಣುತ್ತಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಧ್ಯಾಹ್ನ 2 ಗಂಟೆ ನಂತರ ಕೆಳಹಂತದ ಪೊಲೀಸ್ ಸಿಬ್ಬಂದಿ ಶೇ.100ರಷ್ಟು ಕರ್ತವ್ಯ ನಿರ್ವಹಣೆ ಮಾಡಬೇಕು. ಜತೆಗೆ ಸಿಬ್ಬಂದಿ ಸುರಕ್ಷತೆಗೂ ಆದ್ಯತೆ ನೀಡಬೇಕು.

    | ಕೆ.ಬಿ.ಶಿವಕುಮಾರ್, ಡಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts