More

    ಜೂನಿಯರ್ ಕಾಲೇಜಲ್ಲಿ ಮಧ್ಯಾಹ್ನ ಊಟ ಶುರು: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಯೋಜನೆ ಆರಂಭ

    ಹೊಸದುರ್ಗ: ಸರ್ಕಾರಿ ಜೂನಿಯರ್ ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಹಾರ ವ್ಯವಸ್ಥೆ ಮೂಲಕ ಶಾಸಕ ಗೂಳಿಹಟ್ಟಿ ಡಿ.ಶೇಖರ್ ರಾಜ್ಯದಲ್ಲೇ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.

    ಶನಿವಾರ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಣ ಬಡಿಸುವ ಮೂಲಕ ಉಪಹಾರ ಯೋಜನೆಗೆ ಚಾಲನೆ ನೀಡಿದರು.

    ಕಾಲೇಜಿನಲ್ಲಿ ಪ್ರಥಮ, ದ್ವಿತೀಯ ಪಿಯುಸಿಯಲ್ಲಿ ಅಂದಾಜು 800 ವಿದ್ಯಾರ್ಥಿಗಳಿದ್ದು, ಕರೊನಾ ಕಾರಣದಿಂದ 2019-20ನೇ ಶೈಕ್ಷಣಿಕ ವರ್ಷದ ತರಗತಿಗಳು ತಡವಾಗಿ ಆರಂಭವಾಗಿವೆ. ಪರೀಕ್ಷೆ ವೇಳೆಗೆ ಪಾಠಗಳನ್ನು ಮುಗಿಸುವ ಉದ್ದೇಶದಿಂದ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ತರಗತಿಗಳನ್ನು ನಡೆಸಲಾಗುತ್ತಿದೆ.

    ಗ್ರಾಮೀಣ ಪ್ರದೇಶದಿಂದ ಬರುವ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಬೆಳಗ್ಗೆ 7 ಗಂಟೆಗೆ ಮನೆ ಬಿಟ್ಟರೆ ತಲುಪಲು ಸಂಜೆ 6 ಗಂಟೆಯಾಗುತ್ತದೆ. ಬೆಳಗ್ಗೆ ಮನೆಯಲ್ಲಿ ತಿಂಡಿ ಮುಗಿಸುವ ಮಕ್ಕಳು, ಮಧ್ಯಾಹ್ನದ ಊಟಕ್ಕೆ ಪರದಾಡುವ ಸ್ಥಿತಿ ಇತ್ತು. ಹಣವಿದ್ದ ಕೆಲವರು ಹೊರಗೆ ಊಟ ಮಾಡಿದರೆ ಬಹುತೇಕರು ಉಪವಾಸವಿರುತ್ತಾರೆ. ಮಕ್ಕಳ ಸ್ಥಿತಿ ಕಂಡು ಕಾಲೇಜಿನಲ್ಲೇ ಅವರಿಗೆ ಊಟ ನೀಡಲು ಚಿಂತಿಸಿದ ಪ್ರಾಚಾರ್ಯ ಮಲ್ಲಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಗೂಳಿಹಟ್ಟಿ ಡಿ.ಶೇಖರ್ ಬಳಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಸಕಾರತ್ಮಕವಾಗಿ ಸ್ಪಂದಿಸಿದ ಅವರು, ಕ್ಯಾಟರಿಂಗ್ ಮಾಡುವವರನ್ನು ಕರೆಸಿ, ಮಧ್ಯಾಹ್ನದ ಊಟ ಒದಗಿಸುವಂತೆ ಸೂಚಿಸಿ, ಅದರ ಖರ್ಚನ್ನು ಸಂಪೂರ್ಣವಾಗಿ ತಾವೇ ಭರಿಸುವುದಾಗಿ ತಿಳಿಸಿದ್ದಾರೆ.

    ಒಬ್ಬರಿಗೆ ಊಟ ನೀಡಲು 25 ರೂ. ಖರ್ಚಾಗುತ್ತಿದ್ದು, ಮಕ್ಕಳಿಗೆ ಊಟದ ಮಹತ್ವ ಅರಿವಾಗುವ ಉದ್ದೇಶದಿಂದ 5 ರೂ. ಪಡೆದು ಉಳಿದ ಹಣವನ್ನು ಶಾಸಕರು ಸ್ವಂತ ಖರ್ಚಿನಿಂದ ನೀಡುತ್ತಿದ್ದಾರೆ. ತಿಂಗಳಿಗೆ 3 ಲಕ್ಷ ರೂ. ವೆಚ್ಚವಾಗುವ ಅಂದಾಜಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಯೋಜನೆ ಮುಂದುವರಿಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts