More

    ಅಧ್ಯಕ್ಷ ಪಟ್ಟಕ್ಕೆ ಮಹಿಳೆಯರ ಪೈಪೋಟಿ

    ರಾಣೆಬೆನ್ನೂರ: ಇಲ್ಲಿಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಆಕಾಂಕ್ಷಿಗಳಲ್ಲಿ ಪೈಪೋಟಿ ಜೋರಾಗಿದೆ.

    ನಗರಸಭೆ ಒಟ್ಟು 35 ಸದಸ್ಯರ ಬಲಾಬಲ ಹೊಂದಿದ್ದು, ಅಧ್ಯಕ್ಷ ಸ್ಥಾನ ‘ಹಿಂದುಳಿದ ಅ ವರ್ಗ ಮಹಿಳೆ’ ಹಾಗೂ ಉಪಾಧ್ಯಕ್ಷ ಸ್ಥಾನ ‘ಸಾಮಾನ್ಯ’ ವರ್ಗಕ್ಕೆ ಮೀಸಲಾಗಿದೆ.

    ಯಾರ್ಯಾರಿಗೆ ಅವಕಾಶ?: ಬಿಜೆಪಿಯಲ್ಲಿ ಹಿಂದುಳಿದ ಅ (ಮಹಿಳಾ) ವರ್ಗಕ್ಕೆ ಸೇರಿದ 1ನೇ ವಾರ್ಡ್​ನ ಸದಸ್ಯೆ ರೂಪಾ ಚಿನ್ನಿಕಟ್ಟಿ, 17ನೇ ವಾರ್ಡ್​ನ ಕವಿತಾ ಹೆದ್ದೇರಿ, 22ನೇ ವಾರ್ಡ್​ನ ಉಷಾ ಚಿನ್ನಿಕಟ್ಟಿ, 29ನೇ ವಾರ್ಡ್​ನ ಹೊನ್ನವ್ವ ಕಾಟಿ, 15ನೇ ವಾರ್ಡ್​ನ ರತ್ನವ್ವ ಪೂಜಾರ ಸೇರಿ 5 ಸದಸ್ಯೆಯರು ಇದ್ದಾರೆ. ಕಾಂಗ್ರೆಸ್​ನಲ್ಲಿ 3ನೇ ವಾರ್ಡ್​ನ ಚಂಪಕ ಬಿಸಲಹಳ್ಳಿ, ಜಯಶ್ರೀ ಪಿಸೆ ಹಾಗೂ ಕೆಪಿಜೆಪಿಯಲ್ಲಿ 14ನೇ ವಾರ್ಡ್ ಸದಸ್ಯೆ ಅರೀಫಾಖಾನಂ ಸೌದಾಗಾರಗೆ ಅವಕಾಶವಿದೆ.

    ಕೆಪಿಜೆಪಿ, ಪಕ್ಷೇತರರಿಗೆ ಗಾಳ: ನಗರಸಭೆಯಲ್ಲಿ ಬಿಜೆಪಿಯಿಂದ 15, ಕಾಂಗ್ರೆಸ್​ನಿಂದ 9, ಕೆಪಿಜೆಪಿಯಿಂದ 9 ಹಾಗೂ ಇಬ್ಬರು ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ 18 ಸದಸ್ಯರ ಬೆಂಬಲ ಬೇಕು. ಆದ್ದರಿಂದ 15 ಸದಸ್ಯರ ಬಲ ಹೊಂದಿದ ಬಿಜೆಪಿಗೆ ಅಧಿಕಾರದ ಗದ್ದುಗೆ ಏರಲು ಇನ್ನೂ 3 ಸದಸ್ಯರ ಬೆಂಬಲ ಬೇಕು. ಸಂಸದ, ಶಾಸಕ ಸೇರಿ 2 ಮತ ಬಂದರೂ ಇನ್ನೂ ಒಬ್ಬ ಸದಸ್ಯನ ಬೆಂಬಲ ಬೇಕಾಗುತ್ತದೆ. ಹೀಗಾಗಿ ಕೆಪಿಜೆಪಿ ಅಥವಾ ಪಕ್ಷೇತರ ಸದಸ್ಯರ ಬೆಂಬಲಕ್ಕಾಗಿ ಗಾಳ ಹಾಕುವುದು ಬಿಜೆಪಿಗೆ ಅನಿವಾರ್ಯವಾಗಿದೆ.

    ಕಾಂಗ್ರೆಸ್ ಹಾಗೂ ಕೆಪಿಜೆಪಿ ತಲಾ 9 ಸದಸ್ಯರನ್ನು ಹೊಂದಿದೆ. ಮಾಜಿ ಶಾಸಕ ಆರ್. ಶಂಕರ ಬಿಜೆಪಿ ಸೇರ್ಪಡೆಯಾಗಿರುವುದರಿಂದ ಕೆಪಿಜೆಪಿ ಸದಸ್ಯರು ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆ ಕಡಿಮೆ. ಹೀಗಾಗಿ, ಕಾಂಗ್ರೆಸ್​ಗೆ ನಗರಸಭೆ ಚುಕ್ಕಾಣಿ ಹಿಡಿಯುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ.

    ರೂಪಾ, ಕವಿತಾ, ಚಂಪಕ ಹೆಸರು ಮುಂಚೂಣಿಗೆ: ಬಿಜೆಪಿಯಿಂದ ರೂಪಾ ಚಿನ್ನಿಕಟ್ಟಿ ಹಾಗೂ ಕವಿತಾ ಹೆದ್ದೇರಿ ಮತ್ತು ಕಾಂಗ್ರೆಸ್​ನಿಂದ ಚಂಪಕ ಬಿಸಲಹಳ್ಳಿ ಹೆಸರು ಅಧ್ಯಕ್ಷ ಸ್ಥಾನದ ಚುನಾವಣೆಗೆ ಮಂಚೂಣಿಯಲ್ಲಿವೆ. ರೂಪಾ ಚಿನ್ನಿಕಟ್ಟಿ ಪತಿ ರಾಘವೇಂದ್ರ 2013ರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಆಯ್ಕೆಯಾಗಿದ್ದರು. 2016ರಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ-ಆರ್. ಶಂಕರ ಬೆಂಬಲಿಗರಿಗೆ ಬೆಂಬಲ ನೀಡಿ ನಗರಸಭೆಯಲ್ಲಿ ಕಾಂಗ್ರೆಸ್ ಅನ್ನು ಸೋಲಿಸಲು ಪ್ರಮುಖ ಕಾರಣೀಕರ್ತರಾದರು. ನಂತರ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಯಾದರು. ಈ ಬಾರಿಯ ಚುನಾವಣೆಯಲ್ಲಿ ಪತ್ನಿ ರೂಪಾ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸಿ 583 ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಜತೆಗೆ ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದಾರೆ. ಕವಿತಾ ಹೆದ್ದೇರಿ ಕೂಡ ಬಿಜೆಪಿಯಲ್ಲಿ ಗುರುತಿಕೊಂಡವರು. ಕಾಂಗ್ರೆಸ್​ನ ಚಂಪಕ ಬಿಸಲಹಳ್ಳಿ ಪಕ್ಷದಲ್ಲಿ ಗುರುತಿಸಿಕೊಂಡವರು. ಹೀಗಾಗಿ ಮೂವರಲ್ಲಿ ಭಾರಿ ಪೈಪೋಟಿ ನಡೆದಿದೆ.

    ಯಾರ ಪಾಲಿಗೆ ವಾಣಿಜ್ಯ ನಗರಿ ಗದ್ದುಗೆ?

    ನಗರಸಭೆ ಅಧ್ಯಕ್ಷರ ಆಯ್ಕೆ ಶಾಸಕ ಅರುಣಕುಮಾರ ಪೂಜಾರಗೆ ಪ್ರತಿಷ್ಠೆಯಾಗಿದ್ದರೆ, ಉಪ ಚುನಾವಣೆಯಲ್ಲಿ ಸೋಲು ಕಂಡಿರುವ ಕೆ.ಬಿ. ಕೋಳಿವಾಡಗೆ ಅನಿವಾರ್ಯವಾಗಿದೆ. ವಿಧಾನಸಭೆ ಉಪ ಚುನಾವಣೆಯಲ್ಲಿ ಆರ್. ಶಂಕರ ಬೆಂಬಲಿತ ಕೆಪಿಜೆಪಿಯ ನಾಲ್ಕು ಸದಸ್ಯರು ಬಿಜೆಪಿಗೆ ಬೆಂಬಲ ನೀಡಿದ್ದರೆ, 5 ಸದಸ್ಯರು ಕಾಂಗ್ರೆಸ್​ಗೆ ಬೆಂಬಲ ನೀಡಿದ್ದರು. ಇದೀಗ ನಗರಸಭೆ ಅಧ್ಯಕ್ಷರ ಆಯ್ಕೆಯಲ್ಲೂ ಕೆಪಿಜೆಪಿ ಸದಸ್ಯರು ಬಿಜೆಪಿಗೆ ಬೆಂಬಲ ನೀಡಿದರೆ, ಅಧಿಕಾರದ ಗದ್ದುಗೆ ಬಿಜೆಪಿಗೆ ಸುಲಭದ ತುತ್ತಾಗಲಿದೆ. ಎಲ್ಲರೂ ಕಾಂಗ್ರೆಸ್​ಗೆ ಬೆಂಬಲ ನೀಡಿದರೆ, ಬಿಜೆಪಿಗೆ ಸಂಸದ, ಶಾಸಕ ಹಾಗೂ ಇಬ್ಬರು ಪಕ್ಷೇತರ ಸದಸ್ಯರ ಬೆಂಬಲ ಅನಿವಾರ್ಯವಾಗಲಿದೆ. ಪಕ್ಷೇತರರಲ್ಲಿ ಒಬ್ಬ ಕಾಂಗ್ರೆಸ್ ಕಡೆ ವಾಲಿದರೆ, ಅಧಿಕಾರದ ಗದ್ದುಗೆ ಕಾಂಗ್ರೆಸ್ ಪಾಲಾಗಲಿದೆ. ಹೀಗಾಗಿ, 15 ಸದಸ್ಯರ ಬಲ ಹೊಂದಿದ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ನಾನಾ ಕಸರತ್ತು ನಡೆಸಿದೆ. ಕೇವಲ 9 ಸದಸ್ಯರನ್ನು ಹೊಂದಿದ ಕಾಂಗ್ರೆಸ್​ನವರು ಕೂಡ ಪ್ರಯತ್ನ ನಡೆಸಿದ್ದಾರೆ.

    ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಲಾಗಿದೆ. ಚುನಾವಣೆಯ ದಿನಾಂಕವನ್ನು ಸರ್ಕಾರದ ನಿರ್ದೇಶನ ಮೇರೆಗೆ ಜಿಲ್ಲಾಧಿಕಾರಿ ಘೊಷಿಸಲಿದ್ದಾರೆ. ನಂತರದಲ್ಲಿ ಚುನಾವಣೆ ನಡೆಸಲಾಗುವುದು.
    | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts