More

    ಅಧಿಕಾರ ಸಿಗುವಲ್ಲಿ ಹುಕ್ಕೇರಿ ಚುನಾವಣೆಗೆ ಸ್ಪರ್ಧೆ

    ಬೆಳಗಾವಿ: ಕಾಂಗ್ರೆಸ್ ಮುಖಂಡ ಪ್ರಕಾಶ ಹುಕ್ಕೇರಿ ಅವರಿಗೆ ಶಿಕ್ಷಕರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಅಂಥವರು ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಪ್ರಕಾಶ ಹುಕ್ಕೇರಿ ಎಲ್ಲಿ ಅಧಿಕಾರ ಸಿಗುತ್ತದೆಯೋ ಅಲ್ಲಿ ಚುನಾವಣೆಗೆ ನಿಲ್ಲುತ್ತಾರೆ ಎಂದು ಅರಣ್ಯ, ಆಹಾರ ಸಚಿವ ಉಮೇಶ ಕತ್ತಿ ಕಿಚಾಯಿಸಿದರು.

    ವಿಧಾನ ಪರಿಷತ್‌ನ ವಾಯವ್ಯ ಶಿಕ್ಷಕರ ಮತಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಸದಾಶಿವ ನಗರದ ಬಿಜೆಪಿ ನಗರ ಘಟಕದ ಕಚೇರಿ ಎದುರು ಗುರುವಾರ ಆಯೋಜಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು. ಮೂರು ಜಿಲ್ಲೆಗಳನ್ನು ಒಳಗೊಂಡಂತೆ ವಾಯವ್ಯ ಪದವೀಧರ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಕಳೆದ ವಾರದಿಂದ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಶಿಕ್ಷಕರ ಹಾಗೂ ಪದವೀಧರರ ಸಭೆಗಳನ್ನು ಮಾಡುತ್ತಿದ್ದೇವೆ.

    ಕಾಂಗ್ರೆಸ್‌ನವರು ಗೆಲ್ಲುವುದನ್ನು ಮಾತ್ರ ಹೇಳುತ್ತಾರೆ. ಆದರೆ, ಏನು ಬದಲಾವಣೆ ತರುತ್ತೇವೆ ಎಂದು ಹೇಳುವುದಿಲ್ಲ. ಪರಿಷತ್‌ನ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ನಿಂತಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರು ಈ ಜಿಲ್ಲೆಯಲ್ಲಿ ಸಂಸದರಾಗಿ, ವಿಧಾನಸಭೆ, ವಿಧಾನ ಪರಿಷತ್ ಎಲ್ಲ ಕಡೆಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. ಆದರೆ, ಪ್ರಕಾಶ ಹುಕ್ಕೇರಿ ಅವರಿಗೆ ಶಿಕ್ಷಕರ ಕುರಿತು ಕಿಂಚಿತ್ತೂ ಗೊತ್ತಿಲ್ಲ. ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಶಿಕ್ಷಕರ ಬಗ್ಗೆ ಕಾಳಜಿ ಹೊಂದಿದ್ದಾರೆ. ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವಲ್ಲಿ ಸದಾಕಾಲ ಕೆಲಸ ಮಾಡಿದ್ದಾರೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯದಲ್ಲಿ ಶಿಕ್ಷಕರ ಸಮಸ್ಯೆ ಹಾಗೂ ಶಿಕ್ಷಣ ವ್ಯವಸ್ಥೆ ಕುರಿತಂತೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ, ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ನಡುವೆ ಒಂದು ಬಹಿರಂಗ ಚರ್ಚೆಯಾಗಲಿ ಎಂದು ಬಹಿರಂಗ ಸವಾಲು ಹಾಕಿದರು. ನಮ್ಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಜ್ಜನ ರಾಜಕಾರಣಿ. ಈ ಭಾಗದಲ್ಲಿ ಶಿಕ್ಷಣ ನೀರಾವರಿ, ಹಾಗೂ ಅಭಿವೃದ್ಧಿ ಕುರಿತಂತೆ ಕಾಳಜಿ ಹೊಂದಿದ್ದಾರೆ. ಇಂತಹ ವ್ಯಕ್ತಿಗಳು ಈ ಕ್ಷೇತ್ರದಲ್ಲಿ ಆಯ್ಕೆಯಾದರೆ ನಮ್ಮ ಘನತೆ ಹೆಚ್ಚಾಗುತ್ತದೆ. ಹಾಗಾಗಿ, ಬಿಜೆಪಿ ಅಭ್ಯರ್ಥಿಗಳನ್ನು ಮತದಾರರು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

    ಅಭ್ಯರ್ಥಿಗಳಾದ ಅರುಣ ಶಹಾಪುರ, ಹಣಮಂತ ನಿರಾಣಿ ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ, ಮಾತನಾಡಿದರು. ಸಂಸದರಾದ ಮಂಗಲ ಅಂಗಡಿ, ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ, ಅಣ್ಣಾಸಾಹೇಬ ಜೊಲ್ಲೆ, ಸಚಿವೆ ಶಶಿಕಲಾ ಜೊಲ್ಲೆ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಶಾಸಕರಾದ ಮಹಾದೇವಪ್ಪ ಯಾದವಾಡ, ಮಹಾಂತೇಶ ದೊಡಗೌಡರ, ದುರ್ಯೋಧನ ಐಹೊಳೆ, ಮಾಜಿ ಶಾಸಕ ಸಂಜಯ ಪಾಟೀಲ ಹಾಗೂ ಪಕ್ಷದ ನಗರ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts