More

    ಅಧಿಕಾರ ಇದ್ದಾಗ ನಾಮನಿರ್ದೇಶನ ಮಾಡಲಿಲ್ಲ : ಎಚ್‌ಡಿಕೆಗೆ ಸಚಿವ ಯೋಗೇಶ್ವರ್ ಟಾಂಗ್

    ಚನ್ನಪಟ್ಟಣ : ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಈ ಕ್ಷೇತ್ರದ ಶಾಸಕರು ತಮ್ಮ ಪಕ್ಷದ ಯಾವ ಮುಖಂಡರನ್ನು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿರಲಿಲ್ಲ. ಇದೀಗ ನಾವು ನೇಮಕ ಮಾಡಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಮಾಜಿ ಸಿಎಂ ಎಚ್‌ಡಿಕೆಗೆ ಟಾಂಗ್ ನೀಡಿದರು.
    ನಗರದ ರಾಜಾಕೆಂಪೇಗೌಡ ಬಡಾವಣೆಯಲ್ಲಿರುವ ನಗರ ಯೋಜನಾ ಪ್ರಾಧಿಕಾರ ಕಚೇರಿಯಲ್ಲಿ ಗುರುವಾರ ಅಧ್ಯಕ್ಷ ಮತ್ತು ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಅಧಿಕಾರ ಇದ್ದರೂ ಪ್ರಾಧಿಕಾರಕ್ಕೆ ತಮ್ಮ ಪಕ್ಷದ ಮುಖಂಡರನ್ನು ನಾಮ ನಿರ್ದೇಶನ ಮಾಡಲು ಮನಸ್ಸು ಮಾಡಲಿಲ್ಲ.

    ಸಿಕ್ಕಸಿಕ್ಕ ಕಡೆ ಅಭಿವೃದ್ಧಿಯ ಮಾತುಗಳನ್ನು ಅವರು ಆಡುತ್ತಾರೆ ಎಂದು ಕುಟುಕಿದರು. ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಿಸುವ ವಿಚಾರದಲ್ಲಿ ತಡವಾಗಿಲ್ಲ. ನೂತನ ಅಧ್ಯಕ್ಷ ಮತ್ತು ಸದಸ್ಯರಿಗೆ ನಗರದ ಅಭಿವೃದ್ಧಿಯ ವಿಚಾರದಲ್ಲಿ ಸರ್ಕಾರದ ಸಂಪೂರ್ಣ ಸಹಾಯ ನೀಡಲಾಗುವುದು ಎಂದು ತಿಳಿಸಿದರು.

    ಒಕ್ಕಲಿಗರ ಮೀಸಲಾತಿ ಬಗ್ಗೆ ಪ್ರತಿಕ್ರಿಯಿಸಿದ ಸಿಪಿವೈ, ಇಡೀ ರಾಜ್ಯ ಸುತ್ತಾಡಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗೆ ಜನರ ನೋವು – ನಲಿವಿನ ಬಗ್ಗೆ ಅರಿವಿದೆ. ಹೀಗಾಗಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅವರ ಅಭಿಪ್ರಾಯಕ್ಕೆ ಬೇರೆ ವ್ಯಾಖ್ಯಾನ ನೀಡುವುದು ಬೇಕಿಲ್ಲ. ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ನೊಂದಿರುವ ಸಮುದಾಯಗಳು ತಮ್ಮ ಹಕ್ಕು ಪ್ರತಿಪಾದಿಸುತ್ತಿವೆ. ಈ ವಿಚಾರದಲ್ಲಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದರು.

    ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲವೇಗೌಡ ಮಾತನಾಡಿದರು. ಸದಸ್ಯರಾದ ಸಿ.ವಿ.ಮಂಜುನಾಥ್, ಬಸವರಾಜು, ಚಕ್ಕಲೂರುಚೌಡಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಟಿ.ಜಯರಾಮು, ನಗರ ಬಿಜೆಪಿ ಅಧ್ಯಕ್ಷ ಶಿವಕುಮಾರ್, ರಾಮನಗರ ಪ್ರಾಧಿಕಾರದ ಅಧ್ಯಕ್ಷ ಮುರುಳಿ, ಕನಕಪುರ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

    ಜೆಡಿಎಸ್ ಮುಖಂಡರಿಗೆ ನಾಚಿಕೆೆಯಾಗಬೇಕು : ಪ್ರಾಧಿಕಾರದ ನೂತನ ಅಧ್ಯಕ್ಷರ ಪದಗ್ರಹಣದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಪಿ.ಯೋಗೇಶ್ವರ್, ಭಾಷಣದುದ್ದಕ್ಕೂ ಮಾಜಿ ಸಿಎಂ ಎಚ್‌ಡಿಕೆ ಮತ್ತು ಜೆಡಿಎಸ್ ಮುಖಂಡರನ್ನು ಕುಟುಕಿದರು. ಅಧಿಕಾರ ಇದ್ದಾಗ ಜನರನ್ನು ಮರೆಯುವ ಮಾಜಿ ಮುಖ್ಯಮಂತ್ರಿ, ಅಧಿಕಾರ ಇಲ್ಲದಿದ್ದಾಗ ಜನರ ಮನೆ ಬಾಗಿಲಿಗೆ ಬಂದು ನಿಲ್ಲುತ್ತಾರೆ.

    ಪಕ್ಷ ಅಧಿಕಾರದಲ್ಲಿದ್ದಾಗ ಕಾರ್ಯಕರ್ತರಿಗೆ ಸ್ಥಾನಮಾನ ನೀಡಬೇಕು ಎಂಬುದು ನೆನಪಾಗುವುದಿಲ್ಲ. ಪಕ್ಷಕ್ಕಾಗಿ ದುಡಿಯುವ ಯಾವುದೇ ಮುಖಂಡರಿಗಾಗಲಿ, ಕಾರ್ಯಕರ್ತರಿಗಾಗಲಿ ವಿಧಾನಸೌಧದ ಮೆಟ್ಟಲು ಹತ್ತಲು ಬಿಡಲಿಲ್ಲ. ಇವರ ಹಿಂದೆ ಹೋಗುವುದಕ್ಕೆ ನಿಮಗೆ ನಾಚಿಕೆೆಯಾಗಬೇಕು, ನಿಮಗೆ ಸ್ವಾಭಿಮಾನ ಇಲ್ಲವೇ ಎಂದು ಜೆಡಿಎಸ್ ಮುಖಂಡರನ್ನು ಪ್ರಶ್ನಿಸಿದರು.

    ಅವರೇ ಹೇಳಿಕೊಳ್ಳುವಂತೆ ಅವರೊಬ್ಬ ಆಕಸ್ಮಿಕ ಮುಖ್ಯಮಂತ್ರಿ, ಬಿಜೆಪಿ ನೀಡುತ್ತಿರುವ ಹೊಡೆತ ಕುಮಾರಸ್ವಾಮಿಗೆ ಪಾಠ ಕಲಿಸಿದೆ. ಇದರಿಂದಾಗಿ ತಮ್ಮ ಬುಡವನ್ನು ಭದ್ರಗೊಳಿಸಿಕೊಳ್ಳಲು ಜನರ ಮುಂದೆ ಬಂದು ನಿಲ್ಲುತ್ತಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts