More

    ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ

    ಶಿಗ್ಗಾಂವಿ: ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ಕಲ್ಪಿಸುವಂತೆ ಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಸೂಚಿಸುವ ಕೆಲಸಗಳನ್ನು ಅಧಿಕಾರಿಗಳು ನಿಷ್ಠೆಯಿಂದ ನಿರ್ವಹಿಸಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ ಎಚ್ಚರಿಸಿದರು.

    ಪಟ್ಟಣದ ತಾಪಂ ಆಡಳಿತ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

    ಸಭೆಯ ನಿರ್ಣಯಗಳು ತಕ್ಷಣವೇ ಅನುಷ್ಠಾನಗೊಳ್ಳಬೇಕು. ಅದೇ ವಿಷಯ ಇನ್ನೊಂದು ಸಭೆಯಲ್ಲಿ ಚರ್ಚೆ ಆಗಬಾರದು ಎಂದರು.

    ಸದಸ್ಯ ಶ್ರೀಕಾಂತ ಪೂಜಾರ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ನೀರಿನ ಟ್ಯಾಂಕ್, ಟ್ರ್ಯಾಕ್ಟರ್​ಗೆ ನೀಡುವ ಸಬ್ಸಿಡಿ ಸೌಲಭ್ಯ ಅನರ್ಹರ ಪಾಲಾಗಿದ್ದು, ಇಲಾಖೆ ಅಧಿಕಾರಿಗಳು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ತಮಗೆ ಬೇಕಾದರಿಗೆ ಈ ಸೌಲಭ್ಯ ಕಲ್ಪಿಸಿದ್ದಾರೆ ಎಂದು ಆರೋಪಿಸಿದರು.

    ಇದಕ್ಕೆ ಉತ್ತರಿಸಲು ತಡಬಡಿಸಿದ ಇಲಾಖೆ ನಿರ್ದೇಶಕರ ಎದುರು ಪೂಜಾರ ಖೊಟ್ಟಿ ದಾಖಲೆಗಳನ್ನು ಪ್ರದರ್ಶಿಸಿದರು. ಆಗ ಸದಸ್ಯರು ಸಹಾಯಧನ ಸೌಲಭ್ಯಗಳ ಅವ್ಯವಹಾರದ ತನಿಖೆ ಎಸಿಬಿಗೆ ವಹಿಸುವಂತೆ ನಿರ್ಣಯಿಸಿದರು. ನೆರೆ ಪರಿಹಾರ ಕಾಮಗಾರಿ ವಿಳಂಬಕ್ಕೂ ಅಕ್ಷೇಪ ವ್ಯಕ್ತವಾಯಿತು.

    ಬಂಕಾಪುರ ಆರೋಗ್ಯ ಸಮುದಾಯ ಕೇಂದ್ರದ ವೈದ್ಯಾಧಿಕಾರಿ ಕರ್ತವ್ಯ ಸಮಯದಲ್ಲಿಯೇ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ರಾತ್ರಿ ವೇಳೆ ಆರೋಗ್ಯ ಕೇಂದ್ರದಲ್ಲಿ ಒಬ್ಬ ವೈದ್ಯರೂ ಇರಲ್ಲ. ಇದರಿಂದ ರೋಗಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಸದಸ್ಯ ವಿಶ್ವನಾಥ ಹರವಿ ಆರೋಪಿಸಿದರು. ತಾಲೂಕು ವೈದ್ಯಾಧಿಕಾರಿ, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

    ಬಂಕಾಪುರ ಹೋಬಳಿ ವ್ಯಾಪ್ತಿಯ ಕುರಿಗಳಿಗೆ ತಗುಲುವ ರೋಗಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧೋಪಚಾರ ದೊರೆಯತ್ತಿಲ್ಲ. ಸಕಾಲಕ್ಕೆ ಸಿಗದ ಚಿಕಿತ್ಸೆಯಿಂದ ಕುರಿಗಳು ಸಾಯುತ್ತಿವೆ. ಸಾಕಾಣಿಕೆದಾರರು ಕಷ್ಟದಲ್ಲಿದ್ದಾರೆ ಎಂದು ಸದಸ್ಯ ಯಲ್ಲಪ್ಪ ನರಗುಂದ ದೂರಿದರು. ಆಗ ತಾಲೂಕು ಪಶು ವೈದ್ಯಾಧಿಕಾರಿ, ನಾಳೆಯಿಂದ ಔಷಧೋಪಚಾರ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಶಿಕ್ಷಣ, ಸಮಾಜ ಕಲ್ಯಾಣ, ಪಿಡಬ್ಲ್ಯುಡಿ, ಜಿಪಂ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ತಾ.ಪಂ. ಅಧ್ಯಕ್ಷೆ ಪಾರವ್ವ ಆರೇರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪದ್ಮಾವತಿ ಪಾಟೀಲ, ಮಲ್ಲೇಶಪ್ಪ ದೊಡ್ಡಮನಿ, ಶಾಂತವ್ವ ಹಿರೇಮಠ, ಯಲ್ಲಪ್ಪ ನರಗುಂದ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

    ಶಿಗ್ಗಾಂವಿ ಪಟ್ಟಣದ ತಾಪಂ ಆಡಳಿತ ಭವನದಲ್ಲಿ ಸಾಮಾನ್ಯ ಸಭೆ ನಡೆಯಿತು. ಜಿ.ಪಂ. ಅಧ್ಯಕ್ಷ ಬಸವರಾಜ ದೇಸಾಯಿ, ತಾಪಂ. ಅಧ್ಯಕ್ಷೆ ಪಾರವ್ವ ಆರೇರ, ವಿಶ್ವನಾಥ ಹರವಿ, ಸದಸ್ಯ ಶ್ರೀಕಾಂತ ಪೂಜಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts