More

    ಅಧಿಕಾರಿಗಳ ನಡೆಗೆ ಗ್ರಾಮಸ್ಥರು ಆಕ್ರೋಶ

    ಹೊಳೆಆಲೂರ: ಗ್ರಾಮದ ಮೇಘರಾಜ ನಗರದಲ್ಲಿ ಶುಕ್ರವಾರ ಒಂದು ಕರೊನಾ ಪ್ರಕರಣ ಪತ್ತೆಯಾಗುತ್ತಿದ್ದಂತೆ ಗ್ರಾಮದ ದಿನಸಿ, ತರಕಾರಿ, ಬಟ್ಟೆ, ಹೋಟೆಲ್ ಸೇರಿ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಈವರೆಗೆ ಕಿಂಚಿತ್ತೂ ಸಡಿಲಿಕೆ ಮಾಡದಿರುವುದರಿಂದ ಈ ಭಾಗದ ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಲಾಕ್​ಡೌನ್ ಆರಂಭ ದಿಂದಲೂ ಅಧಿಕಾರಿಗಳು ಇಲ್ಲಿನ ವ್ಯಾಪಾರಸ್ಥರು, ಸಾರ್ವಜನಿಕರ ಭಾವನೆಗಳಿಗೆ ಕಿಂಚಿತ್ತೂ ಸ್ಪಂದಿಸುತ್ತಿಲ್ಲ. ಹಿಂದೆ ಬಾದಾಮಿ ತಾಲೂಕಿನ ಡಾಣಕಶಿರೂರಿನಲ್ಲಿ ಘಟನೆ ನಡೆದರೆ ಹೊಳೆಆಲೂರನ್ನು ಸಂಪೂರ್ಣ ಬಂದ್ ಮಾಡಿದರು. ದಿನಸಿ, ತರಕಾರಿಯಂಥ ವ್ಯಾಪಾರಕ್ಕೂ ಸೂಕ್ತ ಸಮಯ ನಿಗದಿಪಡಿಸಲಿಲ್ಲ. ಆದರೆ, ರೋಣದ ಪಕ್ಕದಲ್ಲೇ ಕೃಷ್ಣಾಪುರ ಇದ್ದರೂ ಅಲ್ಲಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟರು. ಇಲ್ಲಿ ತರಕಾರಿ ಮಾರಲು ಬಿಡಲಿಲ್ಲ ಎಂದು ಗ್ರಾಮಸ್ಥರಾದ ಶ್ರೀಶೈಲ ಜಡಮಳಿ, ವೀರಣ್ಣ ಉಗಲಾಟ ದೂರಿದರು.

    ಸ್ಥಳೀಯ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ಎಂ.ಎಸ್. ರಾವಳ ನೇತೃತ್ವದ ನಿಯೋಗ ಸೋಮವಾರ ಪಿಡಿಒ ಅವರನ್ನು ಭೇಟಿ ಮಾಡಿ, ಬೆಳಗ್ಗೆ 3 ತಾಸು ವ್ಯಾಪಾರಕ್ಕೆ ಅನುಕೂಲ ಮಾಡಿಕೊಂಡಿ ಎಂದರೆ ಕಂದಾಯ ಇಲಾಖೆ ಅಧಿಕಾರಿಗಳನ್ನು ಸಂರ್ಪಸಿ ಎನ್ನುತ್ತಾರೆ. 1 ತಿಂಗಳಿನಿಂದ ಉಪ ತಹಸೀಲ್ದಾರ್ ಗ್ರಾಮಕ್ಕೆ ಬಂದಿಲ್ಲ. ರೋಣ ತಹಸೀಲ್ದಾರ್ ಅವರನ್ನು ಸಂರ್ಪಸಿದರೆ ಕ್ವಾರಂಟೈನ್​ಗೆ ಹೋದವರ ವರದಿ ಬರಲಿ, ವಿಚಾರ ಮಾಡಿ ನಿಮ್ಮ ಗ್ರಾಮದ ಪಿಡಿಒಗೆ ತಿಳಿಸುತ್ತೇನೆ ಎನ್ನುತ್ತಾರೆ. ಅಲ್ಲಿವರೆಗೆ ನಾವೇನು ಮಾಡಬೇಕು ಎಂದು ಸ್ಥಳೀಯರಾದ ಆರ್.ಕೆ. ಮನ್ನಾಪುರ, ರಮೇಶ ಗಂಗೊಜಿ ಪ್ರಶ್ನಿಸಿದ್ದಾರೆ.

    ಕಡಿಮೆಯಾದ ಆತಂಕ: ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಎಂದು ಶನಿವಾರ ಕ್ವಾರಂಟೈನ್​ಗೆ ಕರೆದುಕೊಂಡು ಹೋಗಿದ್ದ 9 ಜನರ ಪೈಕಿ ಮೂವರನ್ನು ಅಧಿಕಾರಿಗಳು ಬಿಡುಗಡೆ ಮಾಡಿ, ಹೋಂ ಕ್ವಾರಂಟೈನ್​ಗೆ ಕಳುಹಿಸಿರುವುದು ಗ್ರಾಮದಲ್ಲಿ ಆತಂಕವನ್ನು ತುಸು ಕಡಿಮೆ ಮಾಡಿದೆ.

    ಗ್ರಾಮದಲ್ಲಿ ಆರಕ್ಷಕ ಸಿಬ್ಬಂದಿ ಕೊರತೆಯಿದೆ. ತಹಸೀಲ್ದಾರರು ಗ್ರಾಮದಲ್ಲಿ ದಿನಬಳಕೆಯ ವಸ್ತುಗಳನ್ನು ಕೊಳ್ಳಲು ಜನರಿಗೆ ಸೂಕ್ತ ವ್ಯವಸ್ಥೆ ಮಾಡುತ್ತಿಲ್ಲ.
    | ಎಂ.ಎಸ್. ರಾವಳ, ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ

    ಗಾಳಿ ಸುದ್ದಿ ಗೊಂದಲ: ಗ್ರಾಮದಲ್ಲಿ ಕೇಸ್ ಪತ್ತೆಯಾದ ದಿನದಿಂದಲೂ ಸುಳ್ಳು ಸುದ್ದಿಗಳೇ ಹರಿದಾಡುತ್ತಿವೆ. ಕರೊನಾ ಪಾಸಿಟಿವ್ ವ್ಯಕ್ತಿ ಮೃತಪಟ್ಟಿದ್ದಾನೆ. ಸೋಂಕಿತ ವ್ಯಕ್ತಿ ಸಹೋದರಿಗೆ ಪಾಸಿಟಿವ್ ಬಂದಿದೆ. ಅಧಿಕಾರಿಗಳು ಬೇಕಂತಲೆ ವಿಷಯವನ್ನು ಮುಚ್ಚಿಡುತ್ತಿದ್ದಾರೆ. ಅದಕ್ಕಾಗಿ ಅಂಗಡಿ ತೆರೆಯಲು ಅವಕಾಶ ನೀಡುತ್ತಿಲ್ಲ ಎಂಬ ಗಾಳಿ ಸುದ್ದಿ ಹರಡುತ್ತಿವೆ. ಆದರೆ, ಸಂಬಂಧಪಟ್ಟ ಯಾರೂ ಸಾರ್ವಜನಿಕರ ಗೊಂದಲ ಪರಿಹರಿಸುವ ಗೋಜಿಗೆ ಹೋಗುತ್ತಿಲ್ಲ.

    ಆರು ಜನರಿಗೆ ಕರೊನಾ ದೃಢ

    ಗದಗ: ಮುಂಬೈ-ಗದಗ ಎಕ್ಸ್​ಪ್ರೆಸ್ ರೈಲು ಜಿಲ್ಲೆಯ ಪಾಲಿಗೆ ಕಂಟಕವಾಗುವ ಲಕ್ಷಣ ತೋರಿದೆ. ಮಹಾರಾಷ್ಟ್ರದಿಂದ ರೈಲಿನಲ್ಲಿ ನಗರಕ್ಕೆ ಬಂದವರ ಪೈಕಿ ಸೋಮವಾರ ಮತ್ತೆ ಆರು ಜನರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಭಾನುವಾರ ಕೂಡ ರೈಲಿನಲ್ಲಿ ಬಂದಿದ್ದ ಮುಳಗುಂದ ಪಟ್ಟಣದ ದಂಪತಿಗೆ ಸೋಂಕು ಇರುವುದು ಖಚಿತವಾಗಿತ್ತು. ಮುಂಬೈನಿಂದ ಬಂದಿರುವ ಒಬ್ಬ ಬಾಲಕ ಸೇರಿ ಒಂದೇ ಕುಟುಂಬದ ನಾಲ್ಕು ಜನರಿಗೆ ಕರೊನಾ ವೈರಸ್ ವಕ್ಕರಿಸಿದೆ.

    ಜಿಲ್ಲೆಗೆ ಸಂಬಂಧಿಸಿದ 30 ವರ್ಷದ ಮಹಿಳೆ (ಪಿ 5486), 22 ವರ್ಷದ ಪುರುಷ (ಪಿ 5487), 42 ವರ್ಷದ ಮಹಿಳೆ (ಪಿ 5488), 46 ವರ್ಷದ ಪುರುಷ (ಪಿ 5489), 12 ವರ್ಷದ ಬಾಲಕ (ಪಿ 5490), 23 ವರ್ಷದ ಮಹಿಳೆ (ಪಿ 5491) ಅವರಿಗೆ ಸೋಂಕು ತಗುಲಿದೆ. ಸೋಮವಾರ ಸೋಂಕು ದೃಢಪಟ್ಟ ಆರು ಜನರ ಪೈಕಿ ಜಿಲ್ಲೆಯ ಗಜೇಂದ್ರಗಡದ ಐವರು, ಗದಗ ನಗರದ ಒಬ್ಬರಿದ್ದಾರೆ.

    ವಸತಿ ನಿಲಯದಲ್ಲಿ ಕ್ವಾರಂಟೈನ್ ವ್ಯವಸ್ಥೆ: ರೈಲಿನ ಮೂಲಕ ಗದಗ ನಗರಕ್ಕೆ ಆಗಮಿಸಿದ ಜಿಲ್ಲೆಯ ಜನರನ್ನು ನಗರದ ವಸತಿ ನಿಲಯದಲ್ಲಿ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಸೋಮವಾರ ಸೋಂಕು ದೃಢಪಟ್ಟ ಆರು ಜನರು ಸಹ ಕ್ವಾರಂಟೈನ್​ನಲ್ಲಿ ಇದ್ದಾರೆ. ಕಳೆದ ಮಂಗಳವಾರದಿಂದ ಭಾನುವಾರದವರೆಗೆ ಒಟ್ಟು ಆರು ದಿನ ಗದಗ ರೈಲು ನಿಲ್ದಾಣಕ್ಕೆ ಆಗಮಿಸಿದ ಮುಂಬೈ ಗದಗ ಎಕ್ಸ್​ಪ್ರೆಸ್ ರೈಲಿನಲ್ಲಿ ಒಟ್ಟು 432 ಜನರು ಬಂದಿದ್ದಾರೆ. ಇದರಲ್ಲಿ 80ಕ್ಕೂ ಹೆಚ್ಚು ಜನರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಇಲ್ಲಿಯವರೆಗೆ ಒಟ್ಟು ಎಂಟು ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ರೈಲಿನ ಮೂಲಕ ನಗರಕ್ಕೆ ಬಂದವರನ್ನು ನೇರವಾಗಿ ಕ್ವಾರಂಟೈನ್​ಗೆ ಕಳುಹಿಸಲಾಗಿತ್ತು. ಹೀಗಾಗಿ ಇವರಿಗೆ ಪ್ರಥಮ, ದ್ವಿತೀಯ ಸಂಪರ್ಕ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜಿಲ್ಲಾಡಳಿತದ ಕೆಲಸ ತೃಪ್ತಿಕರ: ಗದಗ: ಕೋವಿಡ್-19 ನಿಯಂತ್ರಣ ಕುರಿತು ಜಿಲ್ಲಾಡಳಿತದ ಕಾರ್ಯ ತೃಪ್ತಿಕರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಇದುವರೆಗೆ 43 ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 23 ಪ್ರಕರಣಗಳು ಹೊರರಾಜ್ಯದಿಂದ ಬಂದವರದ್ದು ಆಗಿವೆ. 33 ಕರೊನಾ ಸೋಂಕಿತರು ಈಗಾಗಲೇ ಗುಣವಾಗಿದ್ದಾರೆ. 8 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇಲ್ಲಿವರೆಗೆ ಒಟ್ಟು 13,333 ಜನರನ್ನು ಹೋಂ ಕ್ವಾರಂಟೈನ್ ಹಾಗೂ 237 ಜನರನ್ನು ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ ಎಂದರು.

    ಜಿಲ್ಲೆಯಲ್ಲಿ ಒಟ್ಟು 9 ನಿಯಂತ್ರಿತ ಪ್ರದೇಶಗಳ ಪೈಕಿ ರಂಗನವಾಡಿ ಪ್ರದೇಶ ಹಾಗೂ ರೋಣ ತಾಲೂಕಿನ ಕೃಷ್ಣಾಪುರವನ್ನು ನಿಯಂತ್ರಿತ ಪ್ರದೇಶಗಳೆಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಅವೀಗ ಸಾಮಾನ್ಯ ಪ್ರದೇಶಗಳಾಗಿ ಮಾರ್ಪಟ್ಟಿವೆ. ಜಿಲ್ಲೆಯಲ್ಲೀಗ 7 ನಿಯಂತ್ರಿತ ಪ್ರದೇಶಗಳು ಸಕ್ರಿಯವಾಗಿದ್ದು, ಇಲ್ಲಿನ 1,536 ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ತಿಳಿಸಿದರು.

    ವಿವಿಧ ರಾಜ್ಯಗಳ 777 ವಲಸಿಗರನ್ನು ಹುಬ್ಬಳ್ಳಿ ರೈಲು ನಿಲ್ದಾಣದವರೆಗೆ ಉಚಿತವಾಗಿ ಕಳುಹಿಸಿಕೊಡಲಾಗಿದೆ. ಇದರಲ್ಲಿ 446 ವಲಸೆ ಕಾರ್ವಿುಕರಿದ್ದಾರೆ. 4867 ಜನರು ಗೋವಾ ರಾಜ್ಯದಿಂದ ವಲಸೆ ಬಂದಿದ್ದಾರೆ. 432 ಜನರು ಮುಂಬೈ ರೈಲಿನ ಮೂಲಕ ಮಹಾರಾಷ್ಟ್ರದಿಂದ ಗದಗ ರೈಲು ನಿಲ್ದಾಣಕ್ಕೆ ಆಗಮಿಸಿದ್ದು, ಇದರಲ್ಲಿ 199 ಜನ ಗದಗ ಜಿಲ್ಲೆಯವರಾಗಿದ್ದಾರೆ. ಅವರನ್ನು ಸಾಂಸ್ಥಿಕ ಕ್ವಾರಂಟೈನ್​ನಲ್ಲಿರಿಸಿ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿದರು.

    ಕೋವಿಡ್-19 ನಿಯಂತ್ರಣ ನಿಮಿತ್ತ ಹಟ್ಟಿ ಗೋಲ್ಡ್ ಮೈನ್ಸ್ ಲಿಮಿಟೆಡ್​ನಿಂದ ಆಹಾರ ಕಿಟ್​ಗಳನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಜಿಲ್ಲೆಯ ನಿಯಂತ್ರಿತ ಪ್ರದೇಶಗಳಲ್ಲಿನ ಜನರಿಗೆ ಆಹಾರ ಕಿಟ್​ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಹೆಸರು ಬೀಜಗಳು ಸಾಕಷ್ಟು ದಾಸ್ತಾನಿದೆ. ರೈತರಿಗೆ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಶಾಸಕ ಕಳಕಪ್ಪ ಬಂಡಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ ಕೆ., ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ, ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts