More

    ಕಡೂರಲ್ಲಿ 35 ಮಿ.ಮೀ. ಮಳೆ

    ಕಡೂರು: ತಾಲೂಕಿನಾದ್ಯಂತ ಭಾನುವಾರ ತಡರಾತ್ರಿ ಸುರಿದ ಮಳೆಯು ರೈತರ ಮೊಗದಲ್ಲಿ ಹರ್ಷ ತಂದಿದೆ. ಕಳೆದ ಮುಂಗಾರು ಮತ್ತು ಹಿಂಗಾರಿನಲ್ಲಿ ಸಮರ್ಪಕವಾದ ಮಳೆಯಿಲ್ಲದೆ ರೈತರು ನಿರಾಸೆಗೊಂಡಿದ್ದರು. ಆದರೆ ಒಂದೇ ದಿನಕ್ಕೆ 35.6 ಮಿ.ಮೀ. ಸುರಿದ ವರ್ಷಧಾರೆಯು ರೈತರಲ್ಲಿ ನೆಮ್ಮದಿ ಮೂಡಿಸುವ ಜತೆಗೆ ಪೂರ್ವ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಿದೆ.

    ಮಳೆ ಕೊರತೆಯಿಂದಾಗಿ ಈ ವರ್ಷದ ಫೆಬ್ರವರಿಯಲ್ಲೇ ಬೇಸಿಗೆಯ ಅನುಭವವಾಗುತ್ತಿತ್ತು. ಬಿರು ಬಿಸಲಿನ ತಾಪಕ್ಕೆ ಜನರು ಹೈರಾಣಾಗಿದ್ದರು. ಬಿಸಿಗಾಳಿಯು ಜನರನ್ನು ಹೊರಬಾರದಂತೆ ಮಾಡಿತ್ತು. ಏಪ್ರಿಲ್ ಮತ್ತು ಮೇ ಆರಂಭದಲ್ಲಿ ಉಷ್ಣಾಂಶ ಗರಿಷ್ಠ 38 ರಿಂದ 40 ಡಿಗ್ರಿ ಸೆಲ್ಸಿಯಸ್ ತಲುಪಿ, ಉತ್ತಮ ಮಳೆಗಾಗಿ ಆಗಸದತ್ತ ರೈತರ ಮುಖಮಾಡಿದ್ದರು. ಭಾನುವಾರ ಬಿದ್ದ ಮಳೆಗೆ ಬಿಸಿಗಾಳಿಯಿಂದ ತತ್ತರಿಸಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
    ಕಳೆದ ವರ್ಷದ ಬಿತ್ತನೆಯಿಲ್ಲದೆ, ಬೆಳೆಗಳು ಇಲ್ಲದೆ ಪರಿತಪ್ಪಿಸುತ್ತಿದ್ದ ರೈತರಿಗೆ ಈ ಬಾರಿ ಆರಂಭದಲ್ಲೇ ಉತ್ತಮ ಮಳೆಯಾಗಿರುವುದು ಹೊಸ ಉತ್ಸಾಹ ತಂದಿದೆ. ಮಳೆಯ ಆಗಮದಿಂದ ರೈತರಲ್ಲಿ ಆಶಾಭಾವ ಹೆಚ್ಚಿದ್ದು, ಜಮೀನು ಹದ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿ ಇಲಾಖೆಯು ಬಿತ್ತನೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಮುಂಗಾರು ಆರಂಭದ ನಂತರವೇ ಸ್ಪಷ್ಟ ಚಿತ್ರಣ ಸಿಗಲಿದೆ.
    ತಾಲೂಕಿನಾದ್ಯಂತ ಭಾನುವಾರ ಅಲ್ಲಲ್ಲಿ ಸುರಿದ ಮಳೆ ಪ್ರಮುಖ ತೋಟಗಾರಿಕೆ ಬೆಳೆಯಾದ ತೆಂಗು, ಅಡಕೆ ತೋಟಗಳಿಗೂ ವರವಾಗಿದೆ. ಬರದಿಂದ ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ರೈತರು ಕೊಂಚ ನೆಮ್ಮದಿಗೊಂಡಿದ್ದಾರೆ.
    ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆ ಸುರಿದರೆ ಅಡಕೆ ತೋಟಗಳಿಗೆ ಜೀವ ಬರಲಿದೆ. ಭಾನುವಾರ ತಡರಾತ್ರಿ ತಾಲೂಕಿನ ಕಡೂರು(ಕಸಬಾ-61.5), ಬೀರೂರು(26), ಹಿರೇನಲ್ಲೂರು(16.5), ಸಖರಾಯಪಟ್ಟಣ(39.2), ಸಿಂಗಟಗೆರೆ(36.8), ಯಗಟಿ(24.7), ಪಂಚನಹಳ್ಳಿ(39.1), ಚೌಳಹಿರಿಯೂರಿ(17)ನಲ್ಲಿ ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts