More

    ಅತಿವೃಷ್ಟಿ ಸಂಬಂಧ ಜಿಲ್ಲಾಧಿಕಾರಿ ಸಭೆ ನಡೆಸಲಿ

    • ಹಾಸನ: ಜಿಲ್ಲೆಯಲ್ಲಿ ಆಗಿರುವ ಅತಿವೃಷ್ಟಿ ಹಾನಿ ಸಂಬಂಧ ಜಿಲ್ಲಾಧಿಕಾರಿ ಕೂಡಲೇ ಶಾಸಕರು, ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದು ಸರ್ಕಾರಕ್ಕೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು.

    • ಈಗಾಗಲೇ ಜಿಲ್ಲೆಯಲ್ಲಿ ಸುಮಾರು 450 ಕೋಟಿ ರೂ. ನಷ್ಟವಾಗಿದೆ ಎಂದು ಡಿಸಿ ಅವರೇ ಮಾಹಿತಿ ನೀಡಿದ್ದಾರೆ. ಆದರೆ ಅದಕ್ಕಿಂತ ಹೆಚ್ಚು ಅಂದರೆ ಅಂದಾಜು 750-900 ಕೋಟಿ ರೂ. ನಷ್ಟವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    • ಕಳೆದ 2 ತಿಂಗಳಿಂದ 30 ವರ್ಷಗಳಲ್ಲಿ ಕಂಡರಿಯದ ಮಳೆಯಾಗಿದೆ. ಎರಡು ವರ್ಷ ಕರೊನಾದಿಂದ ತತ್ತರಿಸಿದ್ದ ರೈತರು, ಈಗ ಮಹಾ ಮಳೆಯಿಂದ ನಲುಗಿ ಹೋಗಿದ್ದಾರೆ. ಕೃಷಿ, ತೋಟಗಾರಿಕೆ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ನಾಟಿ ಮಾಡಿದ್ದ ಭತ್ತದ ಸಸಿ ಸಂಪೂರ್ಣ ನೆಲಕಚ್ಚಿದ್ದು ರೈತರು ವಿಷ ಕುಡಿಯುವ ಸ್ಥಿತಿ ತಲುಪಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

    • ಈ ಸಂಬಂಧ ಡಿಸಿ ಅವರನ್ನು ಖುದ್ದು ಭೇಟಿಯಾಗಿ ಎಲ್ಲವನ್ನೂ ವಿವರಿಸಿದ್ದೇನೆ. ಸರ್ಕಾರ ಈಗ 15 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಅದು ಯಾವುದಕ್ಕೂ ಸಾಲದು. ಎಲ್ಲ ರೀತಿಯ ಬೆಳೆಗಳಲ್ಲಿ ಶೇ.75 ರಷ್ಟು ಮಳೆಯಿಂದ ನಾಶವಾಗಿದೆ. ಕೋಟ್ಯಧಿಪತಿಗಳು ಎನಿಸಿಕೊಂಡಿದ್ದ ಕಾಫಿ ಬೆಳೆಗಾರರ ಸ್ಥಿತಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿ ಅವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಅವರಿಂದ ಮಾಹಿತಿ ಪಡೆದು, ಶಾಸಕರ ಸಭೆ ನಡೆಸಿ ಸರ್ಕಾರಕ್ಕೆ ವಸ್ತುಸ್ಥಿತಿ ವರದಿ ಕಳಿಸಬೇಕು ಎಂದು ಆಗ್ರಹಿಸಿದರು.
      ಜೋರು ಮಳೆಯಿಂದಾಗಿ ಪೂರ್ಣ ಪ್ರಮಾಣದ ನಷ್ಟದ ವರದಿ ಕೊಡಲು ಆಗಿಲ್ಲ. ಹಾಲಿ ಸಿದ್ಧಪಡಿಸಿರುವ ವರದಿ ಮನೆಯಲ್ಲೇ ತಯಾರಾಗಿದೆ. ಜಿಲ್ಲೆಯಲ್ಲಿ ಸುಮಾರು 2 ಸಾವಿರ ಮನೆಗಳು ಕುಸಿದಿವೆ. ಅಧಿಕಾರಿಗಳು ನಿರ್ಲಕ್ಷೃ ಮಾಡದೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
      ಅನೇಕ ಕಡೆ ಅಂಗನವಾಡಿ, ಶಾಲಾ ಕಟ್ಟಡ ಯಾವಾಗ ಬೇಕಾದರೂ ಬೀಳಬಹುದು. ದುರಸ್ತಿಗಾಗಿ ಡಿಸಿ ಖಾತೆಗೆ ಕನಿಷ್ಠ 50 ಕೋಟಿ ರೂ. ಕೊಡಬೇಕು. ರಸ್ತೆ, ಕೆರೆ ಕಟ್ಟೆ ಹಾಳಾಗಿದ್ದು, ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ ತಲಾ 50 ಕೋಟಿ ರೂ. ನೀಡಬೇಕು. ಹಳ್ಳಿ ರಸ್ತೆ, ಅಂಗನವಾಡಿಗಳ ರಿಪೇರಿಗೆ ತಲಾ 5 ಕೋಟಿ ರೂ. ಕೊಡಬೇಕು ಎಂದು ಒತ್ತಾಯಿಸಿದರು.

    • ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಿಯಮಾವಳಿ ಬಿಟ್ಟು, ಸಂಕಷ್ಟದಲ್ಲಿರುವವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts