More

    ನಾವು ಯಾರ ಜತೆ ಹೋದರೂ ಕಾಂಗ್ರೆಸ್‌ಗೇನು ತೊಂದರೆ:ಎಚ್.ಡಿ. ರೇವಣ್ಣ

    ಹಾಸನ: ನಾವು ಬಿಜೆಪಿ ಜತೆ ಅಥವಾ ಬೇರೊಬ್ಬರ ಜತೆ ಮೈತ್ರಿ ಮಾಡಿಕೊಂಡರೆ ಇವರಿಗೆ ಏನು ತೊಂದರೆ. ದೇವೇಗೌಡರು, ಕುಮಾರಸ್ವಾಮಿ ಬಿಜೆಪಿ ಒಂದಾದರೆ ಇವರು ಏಕೆ ಹೆದರಬೇಕು. ಇವರು ಐದು ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಧೈರ್ಯವಾಗಿ ಹೇಳಲಿ ಎಂದು ಕಾಂಗ್ರೆಸ್ ವಿರುದ್ಧ ಶಾಸಕ ಎಚ್.ಡಿ. ರೇವಣ್ಣ ಕಿಡಿಕಾರಿದರು.

    ಒಂದು ಕಡೆ ಕೋಮುವಾದಿಗಳನ್ನು ದೂರ ಇಡಬೇಕು ಎಂದು ಹೇಳುತ್ತಾರೆ. ಮತ್ತೊಂದು ಕಡೆ ಕೋಮುವಾದ ದೂರ ಇಡುವ ಪ್ರಾದೇಶಿಕ ಪಕ್ಷ ಮುಗಿಸಲು ಹೊರಟಿದ್ದಾರೆ. 2018ರಲ್ಲಿ ಜೆಡಿಎಸ್‌ಅನ್ನು ಬಿ ಟೀಮ್ ಅಂತ ಹೇಳಿ ಕೊನೆಗೆ ಅವರ ಮನೆ ಹತ್ತಿರ ಬಂದರು. ನಿಮ್ಮ ಪಾದವೇ ಗತಿ ಅಂತ ಬಂದು ಕುಮಾರಸ್ವಾಮಿನ ಹದಿನಾಲ್ಕು ತಿಂಗಳಿಗೆ ಅಧಿಕಾರದಿಂದ ಕೆಳಗಿಳಿಸಿದರು. ನಾವು ಎ ಟೀಮ್ ಜತೆಗಾದರೂ ಹೋಗುತ್ತೇವೆ, ಬಿ ಟೀಮ್ ಜತೆಗಾದರೂ ಹೋಗುತ್ತೇವೆ. ಇವರಿಗೇನು ತೊಂದರೆ? ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಮಾಡಿದರು.

    ಬಿಜೆಪಿ ಜತೆ ನಮ್ಮ ಪಕ್ಷವನ್ನು ವಿಲೀನ ಮಾಡುತ್ತಿಲ್ಲ. ಜೆಡಿಎಸ್ ಪಕ್ಷವಾಗಿ ಉಳಿಯಲಿದೆ. ನಾನು ಬದುಕಿರುವವರೆಗೂ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ನಾವು ಅವರ ಜತೆ ಇದ್ದೇ ಇರುತ್ತೇನೆ. ನಾವು ಯಾವ ಟೀಮ್ ಜತೆ ಹೋದರೂ ಅಲ್ಪಸಂಖ್ಯಾತರನ್ನು ಕೈ ಬಿಡಲ್ಲ ಎಂದರು.

    ನಮ್ಮ ನಿಲುವು ಬದಲಿಸಲು ಕಾಂಗ್ರೆಸ್ ಕಾರಣ

    ನಮಗೆ ಬಿಜೆಪಿ ಜತೆ ಹೋಗುವ ಅನಿವಾರ್ಯತೆ ಇರಲಿಲ್ಲ. ಕಾಂಗ್ರೆಸ್‌ನವರು ದೇವೇಗೌಡರನ್ನು ಪ್ರಧಾನಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದರು. ದೇವೇಗೌಡರನ್ನು ಹೇಗೆ ನಡೆಸಿಕೊಂಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಪ್ರಧಾನಮಂತ್ರಿ ಮೋದಿ ಅವರ ಬಳಿ ಹೋದರೆ ಎಚ್.ಡಿ.ದೇವೇಗೌಡರಿಗೆ ಗೌರವ ಕೊಡುತ್ತಾರೆ. ನಮ್ಮ ನಿಲುವು ಬದಲಿಸಲು ಕಾಂಗ್ರೆಸ್ ಕಾರಣ. ಬೇಕಾದಾಗ ತಬ್ಬಿಕೊಳ್ಳುತ್ತಾರೆ, ಬೇಡವಾದಾಗ ಮುಗಿಸುತ್ತಾರೆ. ಸಿಪಿಎಂ ಮುಗಿಸಿದರು. ಲಾಲು ಪ್ರಸಾದ್ ಯಾದವ್ ಮುಗಿಸಿದರು. ಅದಕ್ಕೆ ಕಾಂಗ್ರೆಸ್‌ಗೆ ಈ ದುಸ್ಥಿತಿ ಬಂದಿದೆ ಎಂದು ಕಿಡಿ ಕಾರಿದರು.

    2.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ
    ಜಿಲ್ಲೆಯಲ್ಲಿ ಒಟ್ಟು 2.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಸಂಪೂರ್ಣ ನಾಶವಾಗಿದೆ. ಸರ್ಕಾರ ಇವತ್ತಿನವರೆಗೂ ಕಣ್ಮುಚ್ಚಿ ಕುಳಿತಿದೆ. ಕೇವಲ ಗ್ಯಾರಂಟಿ ಕಡೆ ಗಮನ ಕೊಡುತ್ತಿದ್ದಾರೆ. ನಿಮಗೆ ರೈತರು ಮತ ಹಾಕಿಲ್ಲವೇ? ಬರ ಘೋಷಣೆಗೆ ರಾಷ್ಟ್ರೀಯ ಮಾನದಂಡ ಬದಲಿಸಿ ಎಂದು ಕೇವಲ ಪತ್ರ ಬರೆದು ಕುಳಿತುಕೊಂಡರೆ ಆಗಲ್ಲ. ನಿಯಮ ಬದಲಿಸಿ ಎಂದು ಪ್ರಧಾನಿ ಹತ್ತಿರ, ಕೇಂದ್ರದ ಮಂತ್ರಿಗಳ ಬಳಿ ಹೋಗಿ ಪಟ್ಟು ಹಿಡಿದು ಕುಳಿತುಕೊಳ್ಳಬೇಕು. ಆದರೆ, ಗ್ಯಾರಂಟಿ ಹೆಸರು ಹೇಳಿಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
    ತಮಿಳುನಾಡಿಗೆ 20 ಟಿಎಂಸಿ ನೀರು ಬಿಟ್ಟಿದ್ದಾರೆ. ಹೇಮಾವತಿ ನದಿಯಿಂದ ತುಮಕೂರಿಗೆ ಎರಡು ತಿಂಗಳಿನಿಂದ ನೀರು ಬಿಟ್ಟಿದ್ದಾರೆ. ಅಲ್ಲಿ ಎರಡೆರಡು ಬೆಳೆ ಮಾಡಿಕೊಂಡು ಸಂತೋಷವಾಗಿದ್ದಾರೆ. ಇಲ್ಲಿ ಜೆಡಿಎಸ್‌ಗೆ ಮತ ಹಾಕಿದ್ದಾರೆ ಅಂತ ನೀರು ನಮಗೆ ನೀರು ಬಿಟ್ಟಿಲ್ಲ. ನೀರು ಬಿಡುವ ವಿಷಯದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ದನ-ಕರುಗಳಿಗೆ ಮೇವು ಇಲ್ಲ. ಮನುಷ್ಯರಾದರೆ ಊಟ ಕೊಡಿ ಎಂದು ಬಾಯಿ ಬಿಟ್ಟು ಕೇಳುತ್ತೇವೆ. ಆದರೆ, ಜಾನುವಾರುಗಳು ಏನೆಂದು ಕೇಳುತ್ತವೆ ಎಂದು ಹೇಳಿದರು.

    7 ಕ್ಷೇತ್ರಗಳನ್ನು ಬರಗಾಲ ಎಂದು ಘೋಷಿಸಿ

    ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಬರಗಾಲವಿದೆ. ಸರ್ಕಾರ ಬಂದು ನಾಲ್ಕು ತಿಂಗಳಾಗಿದೆ. ಮಳೆ ಕೊರತೆಯಿಂದ ರೈತರು ಸಂಪೂರ್ಣ ಕಷ್ಟಕ್ಕೆ ಸಿಕ್ಕಿದ್ದಾರೆ. ಹೀಗಾಗಿ ಏಳು ವಿಧಾನಸಭಾ ಕ್ಷೇತ್ರಗಳನ್ನು ಬರಗಾಲ ಎಂದು ಘೋಷಿಸಬೇಕು. ಜಿಲ್ಲೆಯಲ್ಲಿ 1,18,792 ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಮರಗಳಿವೆ. ಮಳೆ ಕೊರತೆಯಿಂದ ರೋಗ ಹೆಚ್ಚಾಗಿ ತೆಂಗಿನ ಗಿಡಗಳು ಹಾಳಾಗುತ್ತಿವೆ. ಶೇ.60 ರಷ್ಟು ತೆಂಗಿನ ಮರಗಳಿಗೆ ರೋಗ ತಗುಲಿದೆ. ರೋಗ ನಿಯಂತ್ರಣಕ್ಕೆ ಸರ್ಕಾರ ಔಷಧ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.

    ಜಿಲ್ಲೆಯಲ್ಲಿ 1.30 ಲಕ್ಷ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗೆಡ್ಡೆ ಬೆಳೆಯಲಾಗುತ್ತಿತ್ತು. ಇದೀಗ 2800 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗೆಡ್ಡೆ ಬೆಳೆದಿದ್ದಾರೆ. ಅಷ್ಟು ಬೆಳೆ ಸಂಪೂರ್ಣ ನಾಶವಾಗಿದೆ, ಏನೂ ಉಳಿದಿಲ್ಲ. ರೈತರು ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂದು ರೈತರನ್ನು ಉಳಿಸಬೇಕು. ಸೇವಂತಿ ಹೂವಿಗೆ ಬೆಲೆ ಇಲ್ಲದೇ ಹೊಲದಲ್ಲಿ ರೈತರು ಹೂವು ಬಿಸಾಡುತ್ತಿದ್ದಾರೆ. ಎಕರೆಗೆ 15-20 ಸಾವಿರ ರೂ. ಪರಿಹಾರ ಕೊಡಬೇಕು. ರೈತರು ಖರ್ಚು ಮಾಡಿರುವ ಹಣವನ್ನಾದರೂ ಕೊಟ್ಟು ರೈತರನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts