More

    ಅತಿವೃಷ್ಟಿಯಿಂದ ಬಿದ್ದ ಮನೆಗಳಿಗೆ ಪರಿಹಾರ ಒದಗಿಸಿ

    ಸವಣೂರ: ಅತಿವೃಷ್ಟಿ, ನೆರೆ ಹಾವಳಿಯಿಂದ ಬಿದ್ದ ಮನೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಅಧಿಕಾರಿಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

    ಪಟ್ಟಣದ ಉಪವಿಭಾಗಾಧಿಕಾರಿ ಕಾರ್ಯಾಲಯದ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ನೆರೆ, ಅತಿವೃಷ್ಟಿ ಹಾನಿಯ ಸಮೀಕ್ಷೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಅತಿವೃಷ್ಟಿಯಿಂದ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮ ಹಾಗೂ ಮನೆ ಕಳೆದುಕೊಂಡ ಕುಟುಂಬಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕಿ ಪರದಾಡುವಂತಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಂದಿನ ಎರಡು ದಿನದಲ್ಲಿ ಸೂಕ್ತ ಫಲಾನುಭವಿಗಳನ್ನು ಗುರುತಿಸಿ, ಸರ್ಕಾರದ ಸೌಲಭ್ಯ ಒದಗಿಸಬೇಕು ಎಂದರು.

    ಬೆಳೆ ಸಮೀಕ್ಷೆಗಾಗಿ ಸರ್ಕಾರ ವಿಶೇಷ ಯೋಜನೆ ರೂಪಿಸಿ, ರೈತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಸಮೀಕ್ಷೆ ಆಪ್ ಉಪಯೋಗಿಸಲು ವಿಫಲವಾಗುವ ರೈತರ ಕೃಷಿ ಜಮೀನಿನ ಸಮೀಕ್ಷೆ ಕೈಗೊಳ್ಳಲು ಗ್ರಾಪಂ ಸಿಬ್ಬಂದಿ ನೇಮಕಗೊಳಿಸಿ, ಬೆಳೆ ಸಮೀಕ್ಷೆ ಕಾರ್ಯ ಸಂಪೂರ್ಣಗೊಳಿಸಬೇಕು. ಕಾರ್ಯದಲ್ಲಿ ಲೋಪದೋಷಗಳು ಉಂಟಾದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

    ತಾಲೂಕಿನಲ್ಲಿ ಮೇಲ್ಛಾವಣಿ ಹೊಂದಿರುವ ಸರ್ಕಾರಿ ಶಾಲೆಗಳ ದುರಸ್ತಿ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶ ಜನಸಾಮಾನ್ಯರಿಗೆ ಎಂಜಿಎನ್​ಆರ್​ಇಜಿ ಯೋಜನೆಯಡಿ ಹೆಚ್ಚಿನ ಕೆಲಸ ನೀಡಲು ಸೂಕ್ತ ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ತಾಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ, ಸದಸ್ಯ ಬಸವರಾಜ ಕೋಳಿವಾಡ, ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ತಾಪಂ ಎಡಿ ಎಸ್.ಎಚ್. ಅಮರಾಪೂರ, ಸಿಡಿಪಿಒ ಅಣ್ಣಪ್ಪ ಹೆಗಡೆ, ಪಿಡಬ್ಲೂಡಿ ಎಇಇ ದುಂಡಪ್ಪ ಕುಂಬಾರ, ಜಿಪಂ ಇಂಜಿನಿಯರ್ ಅಭಿಜಿತ, ತಾಪಂ ಯೋಜನಾಧಿಕಾರಿ ಆರ್.ಎಂ. ಭುಜಂಗ, ಪಶು ಇಲಾಖೆ ವೈದ್ಯಾಧಿಕಾರಿ ಡಾ. ಬೀರೇಶ ಪುಟ್ಟಕ್ಕನವರ, ಆರ್​ಐ ನಾಗರಾಜ ಸೂರ್ಯವಂಶಿ, ಪಿಡಿಒ ಸಂಘದ ಪದಾಧಿಕಾರಿಗಳು ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts