More

    ಅಣು ಸ್ಥಾವರ ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯ, ಪ್ರತಿಭಟನೆ

    ಕಾರವಾರ: ಕೈಗಾ ಅಣು ಸ್ಥಾವರದಲ್ಲಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಮಲ್ಲಾಪುರ ಕೈಗಾ ಟೌನ್​ಶಿಪ್ ಗೇಟ್​ನ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

    ಕೈಗಾ ಅಧಿಕಾರಿಗಳ ವಿರುದ್ಧ ಘೊಷಣೆ ಕೂಗಿದರು. ಸಿ ದರ್ಜೆಯ ವಿವಿಧ ಹುದ್ದೆಗಳಿಗೆ ಇತ್ತೀಚೆಗೆ ಧಾರವಾಡದಲ್ಲಿ ನೇಮಕಾತಿ ಪರೀಕ್ಷೆ ಆಯೋಜಿಸಲಾಗಿತ್ತು. ಕೊನೆಯ ಅವಧಿಯಲ್ಲಿ ಪರೀಕ್ಷೆ ಮುಂದೂಡಲಾಗಿದೆ ಎಂದು ಹೇಳಿ ಗೊಂದಲ ಸೃಷ್ಟಿಸಲಾಯಿತು. ಮೊದಲ ಹಂತದ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಪಡೆಯದ ಅಭ್ಯರ್ಥಿಗಳನ್ನೂ ಎರಡನೇ ಹಂತದ ಪರೀಕ್ಷೆಗೆ ಆಯ್ಕೆ ಮಾಡಲಾಗಿದೆ. ಹೊರ ರಾಜ್ಯದ ಉದ್ಯೋಗಿಗಳನ್ನು ಸೇರಿಸುವ ಸಲುವಾಗಿ ಗೋಲ್‍ಮಾಲ್ ನಡೆಸಲಾಗುತ್ತಿದೆ ಎಂದು ದೂರಿದರು. ಕೈಗಾ ಎನ್​ಪಿಸಿಐಎಲ್ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಯೊಬ್ಬರು ಬಂದು ಸ್ಪಷ್ಟನೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

    ಸಂಘಟನೆಯ ಜಿಲ್ಲಾಧ್ಯಕ್ಷ ರಾಜೇಶ ನಾಯ್ಕ, ಉಪಾಧ್ಯಕ್ಷ ದೀಪಕ ನಾಯ್ಕ, ಗ್ರಾಮೀಣ ಅಧ್ಯಕ್ಷ ಕೇಶವ ಅಂಬಿಗ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಸ್ಥಳೀಯ ಮುಖಂಡರಾದ ಖಾಜಾ ಶೇಖ್, ಫ್ರಾನ್ಸಿಸ್ ಗ್ರಾಸ್, ದತ್ತಾನಂದ ಬಾಂದೇಕರ್, ರಾಜಾ ಬಾಂದೇಕರ್ ಇತರರು ಇದ್ದರು.

    ಅಸ್ನೋಟಿಕರ್ ಮನವಿ: ಮಾಜಿ ಸಚಿವ ಆನಂದ ಅಸ್ನೋಟಿಕರ್ ಕರವೇ ಪ್ರತಿಭಟನಾ ಸ್ಥಳಕ್ಕೆ ತೆರಳಿ ಬೆಂಬಲ ಸೂಚಿಸಿದರು. ನಂತರ, ಕೈಗಾ ಅಣು ವಿದ್ಯುತ್ ಕೇಂದ್ರದ ನಿರ್ದೇಶಕ ಸತ್ಯನಾರಾಯಣ, 1 ಮತ್ತು 2 ನೇ ಘಟಕ ನಿರ್ದೇಶಕ ಜೆ.ಆರ್.ದೇಶಪಾಂಡೆ ಅವರನ್ನು ಭೇಟಿಯಾಗಿ ಈ ಸಂಬಂಧ ಮಾತುಕತೆ ನಡೆಸಿದರು. ಮೊದಲ ಪರೀಕ್ಷೆಯಲ್ಲಿ ಕನಿಷ್ಠ 45 ಅಂಕ ಪಡೆದವರನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗುವುದು ಎಂದು ನೇಮಕಾತಿ ಸುತ್ತೋಲೆ ಹೇಳುತ್ತದೆ. ಆದರೆ, ಸುತ್ತೋಲೆಯಂತೆ ನೇಮಕಾತಿ ನಡೆಯದ ಕಾರಣ ಕೈಗಾ ಸ್ಥಾವರಕ್ಕಾಗಿ ಜಮೀನು ನೀಡಿದ ಹಲವು ನಿರಾಶ್ರಿತರಿಗೆ ಅನ್ಯಾಯವಾಗಿದೆ ಎಂದು ದೂರಿದರು. ಮಲ್ಲಾಪುರ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಬಾಂದೇಕರ್, ಪ್ರಕಾಶ ನಾಯ್ಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts