More

    ಅಣು ಸ್ಥಾವರ ನಿವೃತ್ತ ಉದ್ಯೋಗಿಗಳ ಗೋಳಾಟ

    ಕಾರವಾರ: ಅಣು ಸ್ಥಾವರ ನಿರ್ವಣಕ್ಕಾಗಿ ಅವರು ಜಮೀನು ಕಳೆದುಕೊಂಡಿದ್ದವರು. ಅಲ್ಲೇ ಉದ್ಯೋಗವೂ ಸಿಕ್ಕಿತ್ತು. ಆದರೆ, ಈಗ ತರಕಾರಿ ಮಾರುವ ಪರಿಸ್ಥಿತಿ ಬಂದಿದೆ.

    ಹೌದು, ಇದು ಕೈಗಾ ಅಣು ಸ್ಥಾವರದಿಂದ ನಿರಾಶ್ರಿತರಾದ ರಾಯಾ ನಾಯ್ಕ ಎಂಬುವರ ದುಸ್ಥಿತಿ. 20 ವರ್ಷ ಅಣು ವಿದ್ಯುತ್ ಸ್ಥಾವರದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಅವರು ಇಳಿ ವಯಸ್ಸಿನಲ್ಲಿ ಜೀವನ ನಿರ್ವಹಣೆಗಾಗಿ ತರಕಾರಿ ಮಾರುತ್ತಿದ್ದಾರೆ.

    ಏಕೆ ಈ ಗೋಳು?: ಇದು ರಾಯಾ ನಾಯ್ಕ ಅವರೊಬ್ಬರದ್ದು ಮಾತ್ರವಲ್ಲ, ಅಣು ಸ್ಥಾವರಕ್ಕಾಗಿ ಭೂಮಿ ಕಳೆದುಕೊಂಡು ನಂತರ ಉದ್ಯೋಗ ಪಡೆದ 50 ಕ್ಕೂ ಹೆಚ್ಚು ನೌಕರರ ಪರಿಸ್ಥಿತಿ. ಏಕೆಂದರೆ ಭಾರತೀಯ ಅಣು ವಿದ್ಯುತ್ ನಿಗಮದಲ್ಲಿ (ಎನ್​ಪಿಸಿಐಎಲ್) ಉದ್ಯೋಗದಲ್ಲಿದ್ದವರಿಗೆ ನಿವೃತ್ತಿಯ ನಂತರ ಪೆನ್ಶನ್ ವ್ಯವಸ್ಥೆ ಇಲ್ಲ. ಉನ್ನತ ಉದ್ಯೋಗದಲ್ಲಿದ್ದವರು ಹಣ ಉಳಿಸಿ ನಿವೃತ್ತಿ ಜೀವನವನ್ನು ನಿರಾಂತಕವಾಗಿ ಕಳೆಯುವಂತೆ ಮಾಡಿಕೊಂಡಿರಬಹುದು. ಆದರೆ, ನಿರಾಶ್ರಿತರಾದ ತಳ ಮಟ್ಟದ ಹಲವು ಉದ್ಯೋಗಿಗಳು ನಿವೃತ್ತಿಯ ನಂತರ ಅಭದ್ರತೆಯಲ್ಲೇ ಕಾಲ ಕಳೆಯುವುದು ಸಾಮಾನ್ಯವಾಗಿ ಬಿಟ್ಟಿದೆ.

    ಹೋರಾಟದ ಹಾದಿ: ಎನ್​ಪಿಸಿಐಎಲ್ 1956 ಕಂಪನಿ ಆಕ್ಟ್ ಅಡಿ ಭಾರತ ಸರ್ಕಾರದ ಒಂದು ಉದ್ಯಮವಾಗಿ ನೋಂದಣಿಯಾಗಿ ಪ್ರಾರಂಭವಾಯಿತು. ಸದ್ಯ ದೇಶಾದ್ಯಂತ 22 ಅಣು ಸ್ಥಾವರಗಳಿವೆ. ಸಾವಿರಾರು ಕಾಯಂ ಉದ್ಯೋಗಿಗಳಿದ್ದಾರೆ. ಉದ್ಯೋಗದ ಸಂದರ್ಭದಲ್ಲಿ ನೌಕರರಿಗೆ ಹಲವು ವಿಶೇಷ ಭತ್ಯೆ, ಸವಲತ್ತುಗಳಿವೆ. ಆದರೆ, ನಿವೃತ್ತಿಯ ನಂತರ ವೇತನ ನೀಡುವ ವ್ಯವಸ್ಥೆಯನ್ನು ಎನ್​ಪಿಸಿಐಎಲ್ ಮಾಡಿಲ್ಲ. ಈ ಸಂಬಂಧ ಎನ್​ಪಿಸಿಐಎಲ್ ನೌಕರರು ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ನೌಕರರು ಹಾಗೂ ಅಧಿಕಾರಿಗಳ ಯೂನಿಯನ್​ನಿಂದ ಹೈಕೋರ್ಟ್ ಮೊರೆ ಹೋಗಲಾಗಿದೆ. ಅಲ್ಲದೆ, ನಿವೃತ್ತ ನೌಕರರೂ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ನಡುವೆ ಕಾರ್ವಿುಕ ಸಂಘಟನೆಗಳ ಮೂಲಕ ಕೇಂದ್ರ ಸರ್ಕಾರದ ಕಾರ್ವಿುಕ ಸಚಿವಾಲಯವನ್ನು ಭೇಟಿಯಾಗಿ ಪೆನ್ಶನ್ ವ್ಯವಸ್ಥೆ ಜಾರಿಗೊಳಿಸುವ ಪ್ರಯತ್ನವೂ ನಡೆದಿದೆ.

    ನೌಕರರ ಬೇಡಿಕೆಗಳೇನು?: * ಎನ್​ಪಿಸಿಐಎಲ್​ನಲ್ಲಿ ಉದ್ಯೋಗಕ್ಕೆ ಸೇರಿ ನಿವೃತ್ತರಾದವರು ಹಾಗೂ ಮುಂದೆ ಆಗುವ ಎಲ್ಲ ಕುಟುಂಬಗಳಿಗೂ ಪೆನ್ಶನ್ ವ್ಯವಸ್ಥೆ ಜಾರಿ ಮಾಡಬೇಕು. * ಸರ್ಕಾರದ ನಿಯಮಾವಳಿಯಂತೆ ಎಲ್ಲ ಕಾರ್ವಿುಕರಿಗೆ ಮೂಲ ವೇತನದ ಶೇ. 12ರಷ್ಟು ಪ್ರಾವಿಡೆಂಡ್ ಫಂಡ್ (ಪಿಎಫ್) ಕಡಿತ ಮಾಡಿದಲ್ಲಿ ಎನ್​ಪಿಸಿಐಎಲ್ ಶೇ. 10 ರಷ್ಟು ಮಾತ್ರ ಪಿಎಫ್ ಪಾವತಿಸುತ್ತಿದೆ. ಇದನ್ನು ಸರಿಪಡಿಸಬೇಕು. * ಪಿಎಫ್​ಗೆ ಕೇಂದ್ರ ಸರ್ಕಾರ ನಿಗದಿ ಮಾಡಿದ ಬಡ್ಡಿ ದರವನ್ನು ಎನ್​ಪಿಸಿಐಎಲ್ ನೀಡುತ್ತಿಲ್ಲ. ಇದನ್ನು ಸರಿದೂಗಿಸಬೇಕು. * ಪಿಎಫ್ ಜತೆ ಇರುವ ಇನ್ಶುರೆನ್ಸ್ ವ್ಯವಸ್ಥೆಯನ್ನು ಎನ್​ಪಿಸಿಐಎಲ್ ಕೂಡ ಜಾರಿಗೆ ತರಬೇಕು.

    ನಮ್ಮ ಜವಾಬ್ದಾರಿಯಲ್ಲ: ಎನ್​ಪಿಸಿಐಎಲ್ ನಿವೃತ್ತಿ ವೇತನ ನೀಡುವ ಯೋಜನೆಯನ್ನೇ ಅಳವಡಿಸಿಕೊಂಡಿಲ್ಲ. ಅದು ಸರ್ಕಾರದ ಮಟ್ಟದಲ್ಲಿ ಆಗುವ ಕಾರ್ಯವಾಗಿದೆ. ಇದರಿಂದ ನಾವು ಈ ಹಂತದಲ್ಲಿ ಯಾವುದೇ ಸಮಸ್ಯೆಗೆ ಪ್ರತಿಕ್ರಿಯೆ ಕೊಡಲು ಬರುವುದಿಲ್ಲ ಎಂದು ಕೈಗಾ ಅಧಿಕಾರಿಗಳು ತಿಳಿಸಿದ್ದಾರೆ.

    ನಮಗೆ ಕೈಗಾದಲ್ಲಿ 10 ಎಕರೆ ಜಮೀನಿತ್ತು. ಭೂ ಸ್ವಾಧೀನವಾದ ನಂತರ ನಮಗೆ ಹೆಲ್ಪರ್ ಕೆಲಸ ನೀಡಲಾಯಿತು. 20 ವರ್ಷ ಕೆಲಸ ಮಾಡಿದ ನಂತರ 18 ಸಾವಿರ ರೂ. ವೇತನ ಪಡೆದು ನಿವೃತ್ತನಾದೆ. ಪೆನ್ಶನ್ ಇಲ್ಲ. ಮಲ್ಲಾಪುರ ಕೈಗಾವಾಡಾದಲ್ಲಿ ಕೊಟ್ಟ ಜಾಗ ಬಿಟ್ಟರೆ ಬೇರೆ ವ್ಯವಸ್ಥೆ ಇಲ್ಲ. ಜೀವನ ನಿರ್ವಹಣೆಗಾಗಿ ತರಕಾರಿ ಮಾರುತ್ತಿದ್ದೇನೆ. ಇದು ಕೈಗಾಕ್ಕಾಗಿ ಭೂಮಿ ಬಿಟ್ಟುಕೊಟ್ಟ ಹಲವರ ಪರಿಸ್ಥಿತಿ. ಎನ್​ಪಿಸಿಐಎಲ್ ನಿವೃತ್ತಿ ವೇತನ ನೀಡಬೇಕು. ರಾಯಾ ನಾಯ್ಕ ಕೈಗಾದ ನಿವೃತ್ತ ಉದ್ಯೋಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts