More

    ಅಡುಗೆ ಅನಿಲ ಸುರಕ್ಷತೆಗೆ ಒತ್ತು ನೀಡಿ

    ಕೋಲಾರ: ಮಕ್ಕಳಿಗೆ ಅನ್ನ ನೀಡುವ ಪುಣ್ಯದ ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿ ಅನಿಲ ದುರಂತ ತಪ್ಪಿಸಲು ಮುಂಜಾಗ್ರತೆ ವಹಿಸುವುದು ಅಗತ್ಯ ಎಂದು ಇಂಡೇನ್ ಅನಿಲ ಸರಬರಾಜುದಾರ ರೂಪೇಶ್ ತಿಳಿಸಿದರು.
    ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಅಡುಗೆ ಅನಿಲ ಬಳಕೆ ಸಂದರ್ಭ ವಹಿಸಬೇಕಾದ ಮುನ್ನಚ್ಚರಿಕಾ ಕ್ರಮಗಳ ಕುರಿತು ಇಂಡೇನ್ ಆಯೋಜಿಸಿದ್ದ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿ, ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಹಾಗೂ ಮಧ್ಯಾಹ್ನ ಉಪಹಾರ ಯೋಜನೆ ಇಲಾಖೆ ವತಿಯಿಂದ ಮಕ್ಕಳಿಗೆ ಊಟ ನೀಡಲಾಗುತ್ತಿದೆ. ನೂರಾರು ಮಕ್ಕಳಿಗೆ ಊಟ ನೀಡುವ ಅತ್ಯಂತ ಶ್ರೇಷ್ಠ ಕೆಲಸ ಶಾಲೆಗಳಲ್ಲಿ ನಡೆಯುತ್ತಿದ್ದು, ಇಲ್ಲಿ ಯಾವುದೇ ಅವಘಡಗಳಿಗೆ ಅವಕಾಶವಿಲ್ಲದಂತೆ ಎಚ್ಚರವಹಿಸುವುದೂ ಅಗತ್ಯ ಎಂದರು.
    ಅಡುಗೆ ಕೋಣೆ ಶುಭ್ರವಾಗಿದ್ದರೆ ಮಾತ್ರ ಅಡುಗೆಯಲ್ಲೂ ಶುಚಿತ್ವ ಕಾಪಾಡಲು ಸಹಕಾರಿಯಾಗುತ್ತದೆ ಎಂಬುದನ್ನು ಅರಿತು ಗಮನಹರಿಸಿ, ಅಡುಗೆ ಅನಿಲ ಸೋರಿಕೆ ಅನುಮಾನ ಇದ್ದರೆ ಕೂಡಲೇ ನಮ್ಮ ಸಂಸ್ಥೆಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.
    ಸಂಪನ್ಮೂಲ ವ್ಯಕ್ತಿ ಸುಬ್ರಮಣಿ ಮಾತನಾಡಿ, ನಿಗಧಿತ ಅವಧಿಗೆ ಸ್ಟೋವ್‌ಗೆ ಒದಗಿಸಿರುವ ಅನಿಲ್ ಪೈಪ್ ಬದಲಾಯಿಸಿ, ಅಡುಗೆ ಮುಗಿಸಿ ಮನೆಗೆ ಹೋಗುವ ಮುನ್ನಾ ಸಿಲೆಂಡರ್‌ನ ರೆಗ್ಯುಲೇಟರ್ ಆಫ್ ಮಾಡಿ ಎಂದು ಸಲಹೆ ನೀಡಿದರು.
    ಮುಖ್ಯಶಿಕ್ಷಕಿ ಸಿದ್ದೇಶ್ವರಿ ಮಾತನಾಡಿ, ಶಾಲೆಯಲ್ಲಿ ಅಗ್ನಿ ಅವಘಡ ತಪ್ಪಿಸಲು ಮುನ್ನಚ್ಚರಿಕೆ ವಹಿಸಲಾಗಿದೆ. ಅಗ್ನಿ ನಂದಕಗಳನ್ನು ಸಂಗ್ರಹಿಸಿಡಲಾಗಿದೆ ಎಂದ ಅವರು, ಅಡುಗೆ ಸಿಬ್ಬಂದಿಯೂ ಎಪ್ರನ್, ಸಮವಸ್ತ್ರ ಬಳಸುತ್ತಿದ್ದಾರೆ ಎಂದರು.
    ಎಸ್‌ಡಿಎಂಸಿ ಸದಸ್ಯೆ ಜಮುನಾ, ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ, ಶ್ವೇತಾ, ಸುಗುಣಾ, ಫರೀದಾ, ಶ್ರೀನಿವಾಸಲು, ರಮಾದೇವಿ, ಡಿ.ಚಂದ್ರಶೇಖರ್, ಅಡಗೆ ಸಿಬ್ಬಂದಿ ನೇತ್ರಾವತಿ, ದಾಕ್ಷಾಯಿಣಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts