More

    ಅಡಕೆ ಸಿಪ್ಪೆಗೆ ಬೆಂಕಿ ತಗುಲಿ ದೊಡ್ಡ ಅನಾಹುತ

    ಬೀರೂರು: ನೆಹರು ನಗರದ ಸಿನಿಮಾ ಥಿಯೇಟರ್ ಹಿಂಭಾಗದಲ್ಲಿ ಗುರುವಾರ ಚೇಣಿದಾರರು ಸುರಿದಿದ್ದ ಅಡಕೆ ಸಿಪ್ಪೆ ರಾಶಿಗೆ ತಗುಲಿದ ಬೆಂಕಿಯನ್ನು ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ನಂದಿಸಿ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ.

    ಶೃಂಗಾರ ಸಿನಿಮಾ ಮಂದಿರದ ಹಿಂಭಾಗದ ಖಾಲಿ ನಿವೇಶನದಲ್ಲಿ ಅಡಕೆ ಚೇಣಿದಾರರು ಸಿಪ್ಪೆಯನ್ನು ವಿಲೇವಾರಿ ಮಾಡಿದ್ದರು. ಬೆಂಕಿ ತಗುಲಿ ಇಡೀ ರಾಶಿಯೇ ಹೊತ್ತಿಕೊಂಡಿತ್ತು. ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್​ಫಾರ್ಮರ್ ಇದ್ದು, ದೊಡ್ಡ ಅನಾಹುತವಾಗುವುದನ್ನು ಅರಿತ ಸುತ್ತಮುತ್ತಲ ನಿವಾಸಿಗಳು ಅಗ್ನಿಶಾಮಕ ದಳಕ್ಕೆ ಪುರಸಭೆ ಸದಸ್ಯ ಎನ್.ಎಂ.ನಾಗರಾಜ್ ಪುರಸಭೆಗೆ ಮಾಹಿತಿ ನೀಡಿದರು. ಹಿರಿಯ ಆರೋಗ್ಯಾಧಿಕಾರಿ ಲಕ್ಷ್ಮಣ್, ಪರಮೇಶ್, ಬಸಣ್ಣ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪುರಸಭೆ ನೀರಿನ ಟ್ಯಾಂಕರ್ ಕರೆಸಿಕೊಂಡು ನಂದಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ. ನಂತರ ಅಗ್ನಿಶಾಮಕ ದಳ ಧಾವಿಸಿ ಬೆಂಕಿಯನ್ನು ಸಂಪೂರ್ಣ ನಂದಿಸಿತು. ಸಿಬ್ಬಂದಿ ಬರುವುದು ತಡವಾಗಿದ್ದರೆ ದೊಡ್ಡ ಅನಾಹುತವೇ ಉಂಟಾಗುತ್ತಿತ್ತು.

    ಅಡಕೆ ಸಂಸ್ಕರಣೆ ಸಂದರ್ಭ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆಗುವ ಅನಾಹುತಗಳಿಗೆ ಅವರೇ ಜವಾಬ್ದಾರರು ಎಂದು ಚೇಣಿದಾರರಿಗೆ ಪುರಸಭೆಯಿಂದ ನೋಟಿಸ್ ನೀಡಲಾಗುವುದು ಎಂದು ಪುರಸಭೆ ಹಿರಿಯ ಆರೋಗ್ಯಾಧಿಕಾರಿ ಲಕ್ಷ್ಮಣ್ ಹೇಳಿದರು.

    ಬೀರೂರು ಭಾಗದಲ್ಲಿ ಪ್ರತಿ ವರ್ಷವೂ ಅಡಕೆ ಚೇಣಿದಾರರು ಹಾಗೂ ತುಡಕೆ ಮನೆಯವರು ಅಡಕೆ ಸಿಪ್ಪೆಯನ್ನು ರಸ್ತೆ ಬದಿಗೆ ಸುರಿದು ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ಸುತ್ತಮುತ್ತಲ ಮನೆ ಹಾಗೂ ಪರಿಸರಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು ಎಂದು ನಾಗರೀಕ ಬಿ.ಎನ್.ಆನಂದ್ ಹೇಳಿದರು.

    ಅಡಕೆ ಸಂಸ್ಕರಣೆ ಆರಂಭವಾಗುವುದು ಚಳಿಗಾಲದಲ್ಲಿ ನಾಗರಿಕರಿಗೆ ಆಗುವ ತೊಂದರೆ ಮನಗಂಡು ಸಿಪ್ಪೆಯನ್ನು ಊರಿನಿಂದ ಹೊರಭಾಗಕ್ಕೆ ಸಾಗಿಸುವ ವ್ಯವಸ್ಥೆಯನ್ನು ವ್ಯವಹಾರಸ್ಥರು ಮಾಡಿಕೊಳ್ಳಬೇಕು ಎಂದು ಸ್ಥಳೀಯ ನಿವಾಸಿ ಗಿರೀಶ್ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts